Site icon Vistara News

ಎಲ್ಲ ಸಮಸ್ಯೆಗಳಿಗೂ ವಚಗಳಲ್ಲಿದೆ ಸಾಂತ್ವನ: 3ನೇ ವಚನ ಸಾಹಿತ್ಯ ಸಮ್ಮೇಳನಾಧ್ಯಕ್ಷ ಹೊಸಮನಿ ಅಭಿಪ್ರಾಯ

Dr Satish kumar S hosmani

ಬೆಂಗಳೂರು, ಕರ್ನಾಟಕ: ಸಾಮಾಜಿಕ ಹೊಣೆಯ ಜೊತೆಗೆ ಬದ್ಧತೆಯ ಬದುಕನ್ನು ಸಾಹಿತ್ಯದ ಸ್ವರೂಪದಲ್ಲಿ ಹಿಡಿದಿಡುವುದೇ ವಚನ ಸಾಹಿತ್ಯದ ವಿಶೇಷತೆ ಎಂದು ತೃತೀಯ ವಚನ ಸಾಹಿತ್ಯ (Vachana Sahitya Sammelan) ಸಮ್ಮೇಳನಾಧ್ಯಕ್ಷ ಕೇಂದ್ರ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕರು ಡಾ. ಸತೀಶ್ ಕುಮಾರ್ ಎಸ್ ಹೊಸಮನಿ (Dr Satishkumar S Hosmani) ಅಭಿಪ್ರಾಯಪಟ್ಟರು.

ಬೆಂಗಳೂರು ನಗರದಲ್ಲಿರುವ ಪಶು ವೈದ್ಯ ಕಾಲೇಜು ಆವರಣದಲ್ಲಿರುವ ಅಲುಮ್ನಿ ಸಭಾಂಗಣದಲ್ಲಿ ಕರ್ನಾಟಕ ವಚನ ಸಾಹಿತ್ಯ ಪರಿಷತ್ (ರಿ) ಬೆಂಗಳೂರು ವತಿಯಿಂದ ಆಯೋಜಿಸಿದ್ದ ಕರ್ನಾಟಕ ವಚನ ಸಾಹಿತ್ಯ ಪರಿಷತ್ತಿನ ಮೂರನೇ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೀವನದ ನಿತ್ಯ ಜಂಜಾಟಗಳು, ಸಮಸ್ಯೆಗಳು, ನೋವು ನಲಿವು ಎಲ್ಲಕ್ಕೂ ವಚನ ಸಾಹಿತ್ಯದಲ್ಲಿ ಸಾಂತ್ವನವಿದೆ. ಆಧುನಿಕ ವಚನ ಸಾಹಿತ್ಯದ ಉಗಮವಾದ 1880ರ ಕಾಲಘಟ್ಟದಲ್ಲಿ ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯದ ಅಧ್ವರ್ಯುವೆನಿಸಿದರು. ಅವರ ಶ್ರಮದಿಂದಲೇ ನಮಗಿಂದು ಸಮೃದ್ಧ ವಚನ ಸಾಹಿತ್ಯ ಲಭ್ಯವಾಗಿದೆ ಎಂದರು.

ಕರ್ನಾಟಕದಲ್ಲಿ ಒಟ್ಟು 6890 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಕೋವಿಡ್-19 ಸಾಂಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿದ್ದ ಸಮಯದಲ್ಲಿ ಹಾಗೂ ಲಾಕ್ ಡೌನ್ ಮತ್ತು ಸಂಕಷ್ಟದ ದಿನಗಳಲ್ಲಿ ಇಲಾಖೆಯು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಓದುವ ಸಂಸ್ಕೃತಿಯನ್ನು ಬೆಳೆಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸಾರ್ವಜನಿಕ ಗ್ರಂಥಾಲಯಗಳನ್ನು ತಂತ್ರಜ್ಞಾನ ಮತ್ತು ಡಿಜಿಟಲ್ ಮೂಲಸೌಕರ್ಯದೊಂದಿಗೆ ಆಧುನೀಕರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಭಾರತ ದೇಶದಲ್ಲಿಯೇ ಪ್ರಪ್ರಥಮವಾಗಿ ಕೈಗೆತ್ತಿಕೊಂಡಿದೆ. ನಮ್ಮ ದೇಶದಲ್ಲಿಯೇ ದೊಟ್ಟ ಮೊದಲ ಯೋಜನೆ ಇದಾಗಿದ್ದು ಗ್ರಂಥಾಲಯಗಳನ್ನು ಡಿಜಿಟಲೀಕರಣಗೊಳಿಸಿ ದೊಡ್ಡ ಪ್ರಮಾಣದಲ್ಲಿ ಕಲಿಕೆಗೆ ಅವಕಾಶವನ್ನು ಒದಗಿಸಲಾಗಿದೆ. ಇದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಎಂದರು.

ಪಂಚಮಸಾಲ ಪ್ರಥಮ ಜಗದ್ಗುರುಗಳು ಹಾಗೂ ಕೂಡಲಸಂಗಮ ಪೀಠಾಧ್ಯಕ್ಷರಾದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 12ನೇ ಶತಮಾನದ ಶರಣರು ಕಟ್ಟಬಯಸಿದ್ದು ಸಮಾನತೆಯ ಸಮಾಜವನ್ನು. ಕಾಯಕ ತತ್ವ ಮತ್ತು ಜಾತಿರಹಿತ ಸಮಾಜದ ಹಿರಿಮೆಯನ್ನು ಸಾರುವ ವಚನಗಳ ಮೂಲಕ ಜನಮಾನಸವನ್ನು ತಿದ್ದಲು‌ ಪ್ರಯತ್ನಿಸಿದರು. ಅಂತಹ ವಚನಗಳನ್ನು ಅರ್ಥಮಾಡಿಕೊಂಡರೆ ಬದುಕೂ ಅರ್ಥಪೂರ್ಣವಾಗುತ್ತದೆ ಎಂದರು. ರಾಜ್ಯ ಸರ್ಕಾರ ಬಸವಣ್ಣನವರ ವಚನ ಸಾಹಿತ್ಯ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಮಾಡುವುದರ ಜೊತೆಗೆ ವಚನ ಸಾಹಿತ್ಯವನ್ನು ರಾಷ್ಟ್ರೀಯ ಗ್ರಂಥವನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.

ವಚನ ಸಾಹಿತ್ಯದ ಸಂಸ್ಥಾಪಕ ಎಂ.ವಿ ತ್ಯಾಗರಾಜ ಪ್ರಾಸ್ತವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ವಚನ ಸಾಹಿತ್ಯವನ್ನು ಉಳಿಸಿ ಅದರ ಕಂಪನ್ನು ಮನೆ ಮನೆಗೂ ಮುಟ್ಟಿಸಲು ವಚನ ಸಾಹಿತ್ಯ ಪರಿಷತ್ ಬದ್ಧವಾಗಿದೆ ಎಂದರು.ವಚನ ಸಾಹಿತ್ಯವು ಸಾತ್ವಿಕ ಭಾಷೆಯ ಮೂಲಕ ಸರಳವಾಗಿ ಮನುಷ್ಯನ ಮನಮುಟ್ಟವ ಜ್ಞಾನದ ಭಂಡಾರವಾಗಿದೆ ಎಂದರು.

ಸಮ್ಮೇಳನ ಉದ್ಘಾಟನೆಗೂ ಮುನ್ನ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ನಂತರ ರಾಜ್ಯದ ನಾನಾ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರ ಗುರುತಿಸಿ ಗೌರವಿಸಿ ಸನ್ಮಾನಿಸಲಾಯಿತು. ನಂತರ ಸಮ್ಮೇಳನ ಅಧ್ಯಕ್ಷರ ಜೊತೆ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಸಾಹಿತಿಗಳಿಂದ ವಿಚಾರಗೋಷ್ಠಿ ನಡೆಸಲಾಯಿತು.

ಈ ಸುದ್ದಿಯನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನ | ಸ್ತ್ರೀವಾದವು ಸಮಾಜವನ್ನು ವಿಂಗಡಿಸುತ್ತಿದೆ: ಇದು ಸುಸ್ಥಿರ ಮಾದರಿ ಅಲ್ಲ ಎಂದ ಕ್ಷಮಾ ನರಗುಂದ್‌

ಕಾರ್ಯಕ್ರಮದಲ್ಲಿ ನಿವೃತ್ತ ಅಧಿಕಾರಿ ಡಾ.ಸೋಮಶೇಖರ್, ಬೆಂಗಳೂರು ನಗರದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ್ ಮೂರ್ತಿ, ಹೆಬ್ಬಾಳು ಯುವ ಮುಖಂಡ ತಿರುಪತಯ್ಯ, ಮೆಗಾ ಮೈತ್ರಿ ಸಾಹಿತ್ಯ ಸಂಘ ಅಧ್ಯಕ್ಷ ರಮೇಶ್, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಮಾಜಿ ಕಸಾಪ ಅಧ್ಯಕ್ಷ ಅಶೋಕ್ ಕುಮಾರ್, ರಾಜ್ಯ ವಚನ ಸಾಹಿತ್ಯ ಸಂಸ್ಥಾಪಕ ಸುಮಂಗಲಿ ಸುಶೀಲಮ್ಮ, ಹಿರಿಯ ಸಾಹಿತಿ ಪರಮೇಶ್ ಮಡಬಲು, ಹೊರ.ಪರಮೇಶ್, ಎಂ.ವಿ ಭಾಗ್ಯ , ಶಾಂತ ಅತ್ನಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version