Site icon Vistara News

Valmiki Corporation Scam: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ; ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಪರಮೇಶ್ವರ್‌

Valmiki Corporation Scam

Valmiki Corporation Scam

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಪ್ರಕರಣ (Valmiki Corporation Scam)ದಲ್ಲಿ ಈಗಾಗಲೇ ರಾಜ್ಯ ಸರ್ಕಾರದ ಸಚಿವರೊಬ್ಬರ ತಲೆದಂಡವಾಗಿದೆ. ಯುವಜನ ಸೇವಾ, ಕ್ರೀಡಾ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ (B Nagendra) ಗುರುವಾರ ರಾಜೀನಾಮೆ ನೀಡಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ. ಈ ಬಗ್ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ (G. Parameshwara) ಪ್ರತಿಕ್ರಿಯಿಸಿ, ಪ್ರಕರಣದ ತನಿಖೆ ನಡೆಯುತ್ತಿದೆ. ಬಿಜೆಪಿ ಆರೋಪಕ್ಕೆ ಸದ್ಯ ಉತ್ತರಿಸುವುದಿಲ್ಲ ಎಂದು ಹೇಳಿದ್ದಾರೆ.

ವಾಲ್ಮೀಕಿ ನಿಗಮ ಅಕ್ರಮ ಪ್ರಕರಣದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರ ಹೆಸರೂ ಕೇಳಿ ಬಂದಿದೆ. ಅವರ ಕಚೇರಿಯಲ್ಲಿ ಸಾಕ್ಷ್ಯ ನಾಶ ಕುರಿತು ಚರ್ಚೆ ನಡೆದಿದೆ ಎಂದು ಪ್ರಕರಣದ 8ನೇ ಆರೋಪಿ, ಲೆಕ್ಕಾಧಿಕಾರಿ ಪರಶುರಾಮ್​ ಆರೋಪಿಸಿದ್ದಾರೆ. ಇದನ್ನೂ ಉಲ್ಲೇಖಿಸಿ ಬಿಜೆಪಿ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದೆ. ಹಗರಣದಲ್ಲಿ ಸರ್ಕಾರವೇ ಭಾಗಿಯಾಗಿದೆ ಎಂದು ಆರೋಪಿಸಿದೆ.

ಬಿಜೆಪಿ ಈ ಆರೋಪದ ಕುರಿತು ಖಾರವಾಗಿ ಉತ್ತರಿಸಿದ ಪರಮೇಶ್ವರ್‌ ಅವರು, ʼʼಬಿಜೆಪಿ ನಾಯಕರು ಹೇಳ್ತಾ ಇರುತ್ತಾರೆ. ಇದಕ್ಕೆಲ್ಲ ಹೌದು ಎನ್ನಲು ಆಗುವುದಿಲ್ಲ. ಈಗಾಗಲೇ ಎಸ್‌ಐಟಿ ಮತ್ತು ಸಿಬಿಐ ತನಿಖೆ ಆರಂಭಿಸಿದೆ. ಬ್ಯಾಂಕಿನಲ್ಲಿಯೂ ಅಕ್ರಮ ನಡೆದಿದೆ ಎನ್ನುವ ವಿಚಾರಕ್ಕೆ ಸಿಬಿಐ ಕೂಡ ಪ್ರವೇಶ ಮಾಡಿದೆ. ತನಿಖೆಯಲ್ಲಿ‌ ಏನು ಬರುತ್ತದೆ ಎನ್ನುವುದನ್ನು ನೋಡೋಣʼʼ ಎಂದು ತಿಳಿಸಿದ್ದಾರೆ.

ಸಚಿವ ಶರಣು ಪ್ರಕಾಶ ಪಾಟೀಲ್ ಕಚೇರಿಯಲ್ಲಿ ಸಾಕ್ಷಿ ನಾಶ ಕುರಿತು ಸಭೆ ನಡೆದಿದೆ ಎನ್ನುವ ಆರೋಪದ ಬಗ್ಗೆ ಉತ್ತರಿಸಿದ ಅವರು, ʼʼಬಂಧಿತರು ನೀಡಿದ ಹೇಳಿಕೆಯನ್ನು ಪರಿಶೀಲಿಸಲಾಗುತ್ತಿದೆ. ಅಗತ್ಯವಿದ್ದರೆ ಶರಣು ಪ್ರಕಾಶ ಪಾಟೀಲ್ ಅವರ ಕಚೇರಿಯಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ಎಸ್ಐ‌ಟಿ ಪಡೆದುಕೊಳ್ಳಲಿದೆ. ತನಿಖೆಗೆ ಸಿಬಿಐನಿಂದ ಯಾವುದೇ ಪತ್ರ ಬಂದಿಲ್ಲ. ಮೌಕಿಕವಾಗಿ ಕೇಳಿದ್ದಾರೆ ಎಂಬ ಮಾಹಿತಿ ಇದೆ. ನಿನ್ನೆ, ಮೊನ್ನೆ ಏನಾದ್ರೂ ಪತ್ರ ಬಂದಿದ್ಯಾ ಎನ್ನುವುದು ಗೊತ್ತಿಲ್ಲ. ಬಂದಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಶೀಘ್ರ ತನಿಖೆ ಮುಗಿಸುವಂತೆ ಎಸ್‌ಐಟಿಗೆ ಮನವಿ ಮಾಡಿದ್ದೇವೆ. ಆದರೆ ಇಷ್ಟೇ ದಿನದಲ್ಲಿ ತನಿಖೆ ಮಾಡಿ ಅಂತ ಹೇಳಲು ಆಗುವುದಿಲ್ಲ. ಅವರಿಗೂ ಸಮಯಾವಕಾಶ ಕೊಡಬೇಕಾಗುತ್ತದೆʼʼ ಎಂದು ಪರಮೇಶ್ವರ್‌ ತಿಳಿಸಿದ್ದಾರೆ.

ಮೋದಿಗೆ ಅಭಿನಂದನೆ

ಮೂರನೇ ಬಾರಿಗೆ ಪ್ರಧಾನಿ ಆಗಗುತ್ತಿರುವ ಮೋದಿ ಅವರಿಗೆ ಪರಮೇಶ್ವರ್‌ ಅಭಿನಂದನೆ ತಿಳಿಸಿದ್ದಾರೆ. ”ಕಳೆದ 10 ವರ್ಷದಲ್ಲಿ ಜನ ಸಮುದಾಯ ತೊಂದರೆಯಲ್ಲಿದೆ. ಜನರ ದೃಷ್ಟಿಯಿಂದ ಕೆಲಸ ಮಾಡಬೇಕು. ಹಿಂದೆ ಎನೆಲ್ಲ ತಪ್ಪುಗಳಾಗಿದೆ ಅದನ್ನ ಸರಿಪಡಿಸಿಕೊಳ್ಳಲಿ. ಕರ್ನಾಟಕಕ್ಕೆ ಹೆಚ್ಚು ಸ್ಥಾನ ಸಿಗಲಿ. ನಿರ್ಮಲಾ ಸೀತಾರಾಮನ್‌ ಸೇರಿದಂತೆ ರಾಜ್ಯದಲ್ಲಿನ ಸಚಿವರು ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ. ಇನ್ನಾದರೂ ಜನರಿಗಾಗಿ ಕೆಲಸ ಮಾಡಬೇಕುʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: Valmiki Corporation Scam: ಸಾಕ್ಷ್ಯ ನಾಶ ಆರೋಪ; ಮೇ 24ರಂದು ನಾನು ಕಚೇರಿಗೆ ಹೋಗಿಯೇ ಇಲ್ಲ ಎಂದ ಸಚಿವ ಶರಣ ಪ್ರಕಾಶ್ ಪಾಟೀಲ್

Exit mobile version