ಬೆಂಗಳೂರು: ವಾಲ್ಮೀಕಿ ನಿಗಮ ಬಹುಕೋಟಿ ಹಗರಣದಲ್ಲಿ (Valmiki Corporation Scam) ಇನ್ನು 10 ಕೋಟಿ ರೂ.ಗಳನ್ನು ಎಸ್ಐಟಿ ವಶಕ್ಕೆ ಪಡೆದಿದೆ. ಬಾರ್‌ಗಳು, ಚಿನ್ನದ ಅಂಗಡಿಗಳಿಗೆ ವರ್ಗಾವಣೆ ಆಗಿದ್ದ ಹಣ ವಶಕ್ಕೆ ಪಡೆಯಲಾಗಿದೆ. ಕರ್ನಾಟಕ, ಆಂಧ್ರದಲ್ಲಿನ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿರುವ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ಚುರುಕಗೊಳಿಸಿದೆ.
ವಾಲ್ಮೀಕಿ ನಿಗಮ ಹಗರಣದಲ್ಲಿ ಎಸ್‌ಐಟಿ ಅಧಿಕಾರಿಗಳು ರಿಕವರಿ ಮಾಡಿರುವ ಹಣ ಕೋರ್ಟ್ ಅಕೌಂಟ್‌ಗೆ ಜಮೆ ಮಾಡಲಾಗುತ್ತಿದೆ. ದೊಡ್ಡ ಮೊತ್ತದ ಹಣವನ್ನು ಸಿಐಡಿ ಕಚೇರಿಯಲ್ಲಿಡುವುದು ಕಷ್ಟ. ಭದ್ರತಾ ದೃಷ್ಟಿಯಿಂದ ಅಧಿಕಾರಿಗಳು ಕೋರ್ಟ್ ಅನುಮತಿ ಪಡೆದು ಕೋರ್ಟ್ ಹೆಸರಲ್ಲಿ ಬ್ಯಾಂಕ್ ಖಾತೆ ತೆರೆದು ಹಣ ಜಮಾ ಮಾಡಿದ್ದಾರೆ. ನೆನ್ನೆಯಿಂದ ದಿನಕ್ಕೆ ನಾಲ್ಕು ಕೋಟಿಯಂತೆ ಹಣ ಜಮೆ ಮಾಡಲಾಗುತ್ತಿದೆ. ಇದುವರೆಗೂ ಸುಮಾರು 28 ಕೋಟಿ ಹಣ ರಿಕವರಿ ಆಗಿದೆ.
28 ಕೋಟಿ ಹಣವಮ್ನ ಒಟ್ಟಿಗೆ ಜಮೆ ಮಾಡೋದು ಕಷ್ಟ. ಹೀಗಾಗಿ ಅಷ್ಟು ಹಣ ಎಣಿಕೆ ಮಾಡಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ದಿನಕ್ಕೆ ನಾಲ್ಕು ಕೋಟಿ ಹಣವನ್ನು ಮಾತ್ರ ಬ್ಯಾಂಕ್‌ಗೆ ಜಮೆ ಮಾಡಲಾಗುತ್ತಿದೆ.
- ಮಾರ್ಚ್ 30ರಂದು ನವೀನ್ ಜಿ ಮಾಲೀಕತ್ವದ ಜಿ.ಎನ್ ಇಂಡಸ್ಟ್ರೀಸ್ ಕಂಪನಿ ಹೆಸರಲ್ಲಿ 4.42 ಕೋಟಿ ವರ್ಗಾವಣೆ ಆಗಿತ್ತು.
- ವಿಜಯ್ ಕೃಷ್ಣ ಆರ್ ಮಾಲೀಕತ್ವದ ರಾಮ್ ಎಂಟರ್ ಪ್ರೈಸಸ್ ಖಾತೆಗೆ 5.7 ಕೋಟಿ ಹಣ ವರ್ಗಾವಣೆ .
- ರಾಘವೇಂದ್ರ ಅವರ ನೋವೆಲ್ ಸೆಕ್ಯೂರಿಟಿ ಸರ್ವಿಸಸ್ ಪ್ರೈ.ಲಿ.ಕಂಪನಿ ಹೆಸರಿನ ಖಾತೆಗೆ 4 ಕೋಟಿ ಹಣ ವರ್ಗಾವಣೆ.
- ರೇಖಾ ಎಂಬುವವರ ಮಾಲೀಕತ್ವದ ಸುಜಲ್ ಎಂಟರ್ ಪ್ರೈಸಸ್ ಹೆಸರಿನ ಖಾತೆಗೆ 5.63 ಕೋಟಿ ಹಣ ವರ್ಗಾವಣೆ.
ಎಲ್ಲಾ ಕಂಪನಿ ಹೆಸರಲ್ಲಿ ನಕಲಿ ಖಾತೆ ತೆಗೆದು ಹಣ ವರ್ಗಾವಣೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಹೈದರಾಬಾದ್‌ನ ಫಸ್ಟ್ ಫೈನಾನ್ಸ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಖಾತೆ ಓಪನ್ ಮಾಡಿದ್ದ ಆಸಾಮಿಗಳು, ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಖಾತೆಗಳಿಗೆ ಹಣ ಜಮೆ ಮಾಡಿಸಿಕೊಂಡಿದ್ದಾರೆ.
ಇದನ್ನೂ ಓದಿ | Baby Death : ಶವ ಸಾಗಿಸಲು ಹಣವಿಲ್ಲದೇ ರೈಲಿನಲ್ಲೇ ಶಿಶು ಬಿಟ್ಟು ಹೋದ ಪೋಷಕರು
ವಾಲ್ಮೀಕಿ ನಿಗಮ ಹಗರಣ; ಸಿಬಿಐನಿಂದ ಬಂಧನ ಆತಂಕದಲ್ಲಿ ಮಾಜಿ ಸಚಿವ ನಾಗೇಂದ್ರ
ಬೆಂಗಳೂರು: ಕರ್ನಾಟಕ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮದ (Valmiki Corporation Scam) ಪ್ರಕರಣದಲ್ಲಿ ರಾಜೀನಾಮೆ (Resignation) ನೀಡಿರುವ ಮಾಜಿ ಸಚಿವ ನಾಗೇಂದ್ರ (Ex Minister Nagendra) ಸಿಬಿಐ (CBI) ತನಿಖಾ ಸಂಸ್ಥೆಯಿಂದ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಇದೇ ಕಾರಣವಾಗಿ ನಾಗೇಂದ್ರ ಬಹುದಿನಗಳಿಂದ ಎಲ್ಲೂ ಕಾಣಿಸಿಕೊಂಡಿಲ್ಲ.
ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆಯ ಬಳಿಕ ನಿಗಮದ ಹಗರಣ ಬೆಳಕಿಗೆ ಬಂದಿತ್ತು. ನಿಗಮದ 186 ಕೋಟಿ ರೂ. ಹಣವನ್ನು ಅಕ್ರಮವಾಗಿ ಅನ್ಯ ರಾಜ್ಯದ ಖಾತೆಗಳಿಗೆ ವರ್ಗಾವಣೆ ಮಾಡಿಸಿದ್ದನ್ನು ಚಂದ್ರಶೇಖರ್ ಡೆತ್‌ನೋಟ್ ಬೆಳಕಿಗೆ ಬಂದಿತ್ತು. ನಂತರ ಈ ವಿಚಾರದಲ್ಲಿ ಬಿಜೆಪಿ ರಾಜ್ಯವ್ಯಾಪಿ ತೀವ್ರ ಪ್ರತಿಭಟನೆಗೆ ಇಳಿದಿತ್ತು. ಇದರಿಂದ ವಾಲ್ಮೀಕಿ ನಿಗಮದಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದ ಅಧಿಕಾರಿಗಳ ಮೇಲೆ ಸರಕಾರ ಕ್ರಮ ಕೈಗೊಂಡು ತನಿಖೆಗೆ ಎಸ್‌ಐಟಿ ರಚಿಸಿತ್ತು. ಒತ್ತಡ ಹೆಚ್ಚಿದ ಪರಿಣಾಮ ಸಚಿವ ನಾಗೇಂದ್ರ ತಲೆದಂಡವೂ ಆಗಿತ್ತು.
ಈ ನಡುವೆ, ಮಾಜಿ ಸಚಿವ ನಾಗೇಂದ್ರ ಮತ್ತು ಟೀಮ್, ಪ್ರಕರಣದಲ್ಲಿ ತಮ್ಮ ಹೆಸರು ಹೇಳದಂತೆ ಆರೋಪಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ಬಗ್ಗೆ ನ್ಯಾಯಾಧೀಶರ ಮುಂದೆಯೇ ಆರೋಪಿಯೊಬ್ಬ ಹೇಳಿಕೆ ಕೊಟ್ಟಿದ್ದಾನೆ. ಹೀಗಾಗಿ ಸಾಕ್ಷಿ ನಾಶ ಹಾಗೂ ಆರೋಪಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ನಾಗೇಂದ್ರಗೆ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ | Fahadh Faasil: ಮಲಯಾಳಂ ಸ್ಟಾರ್ ಫಹಾದ್ ಫಾಸಿಲ್ ವಿರುದ್ಧ ದೂರು ದಾಖಲು
ಈ ಪ್ರಕರಣದಲ್ಲಿ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ಆದರೆ ಹಗರಣದಲ್ಲಿ ಸಿಬಿಐ ಸಹ ಎಂಟ್ರಿ ಆಗಿದೆ. ನೂರು ಕೋಟಿಗೂ ಮಿಕ್ಕಿದ ಹಣದ ಅವ್ಯವಹಾರ ಆಗಿರುವುದರಿಂದ ಸಿಬಿಐ ತನ್ನದೇ ರೀತಿಯಲ್ಲಿ ತನಿಖೆ ಆರಂಭಿಸಿದೆ. ಹೀಗಾಗಿ ನಾಗೇಂದ್ರಗೆ ಬಂಧನದ ಭೀತಿ ಶುರುವಾಗಿದೆ. ರಾಜೀನಾಮೆ ಕೊಟ್ಟ ಬಳಿಕ ನಾಗೇಂದ್ರ ಎಲ್ಲೂ ಕಾಣಿಸಿಕೊಂಡಿಲ್ಲ. ಅತ್ತ ಪಕ್ಷದ ಕೆಲಸದಲ್ಲೂ ಕಾಣಿಸಿಕೊಳ್ಳುತ್ತಿಲ್ಲ; ಇತ್ತ ಕ್ಷೇತ್ರದಲ್ಲೂ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಿಲ್ಲ. ಹೀಗಾಗಿ, ಬಂಧನದ ಭೀತಿಯಿಂದ ಹಿನ್ನೆಲೆಯಲ್ಲಿ ಉಳಿದಿರಬಹುದು ಎಂದು ಭಾವಿಸಲಾಗಿದೆ.