ಬೆಂಗಳೂರು: ಸೋಶಿಯಲ್ ಮೀಡಿಯಾ ಹಾಗೂ ರಿಯಾಲಿಟಿ ಸ್ಟಾರ್ ಆಗಿರುವ ವಂಶಿಕಾ ಹೆಸರಿನಲ್ಲಿ (Vanshika Anjani kashyapa) ನಿಶಾ ನರಸಪ್ಪ ಎಂಬಾಕೆ ಹಣ ಲೂಟಿ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಮಾಸ್ಟರ್ ಆನಂದ್ ಕುಟುಂಬಸ್ಥರು ಠಾಣೆ ಮೆಟ್ಟಿಲೇರಿದ್ದರು. ಇದೀಗ ನಿಶಾ ನರಸಪ್ಪಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 39ನೇ ಎಸಿಎಮ್‌ಎಮ್ ಕೋರ್ಟ್ ಆದೇಶ ಹೊರಡಿಸಿದೆ.
ಏನಿದು ಪ್ರಕರಣ?
ವಂಶಿಕಾ ಅಂಜನಿ ಕಶ್ಯಪ ಕಿರುತೆರೆಯಲ್ಲಿ ತನ್ನದೆ ಛಾಪು ಮೂಡಿಸಿ ಎಲ್ಲರ ಮನ ಗೆಲುತ್ತಿರುವ ಪೋರಿ. ತಂದೆ ನಟ ಮಾಸ್ಟರ್ ಆನಂದ್‌ರಂತೆ (Master anadh) ಅರಳು ಹುರಿದಂತೆ ಮಾತನಾಡುವ ವಂಶಿಕಾ (Vanshika Anjani kashyapa) ಸೋಶಿಯಲ್ ಮೀಡಿಯಾದಲ್ಲೂ (Social Media) ಹೆಚ್ಚು ಸದ್ದು ಮಾಡುತ್ತಿದ್ದಾಳೆ.
ಈ ಬಾಲ ನಟಿ ವಂಶಿಕಾ ಹೆಸರನ್ನು ದುರುಪಯೋಗ (Fraud Case) ಮಾಡಿಕೊಳ್ಳಲಾಗುತ್ತಿದೆ ಎಂದು ತಾಯಿ ಯಶಸ್ವಿನಿ ಜು.13ರಂದು ಠಾಣೆ ಮೆಟ್ಟಿಲೇರಿದ್ದರು. ಆ್ಯಡ್ ಶೂಟ್, ಕಾರ್ಯಕ್ರಮಗಳು, ಮಕ್ಕಳ ಟ್ಯಾಲೆಂಟ್ ಶೋ, ಖಾಸಗಿ ಚಾನಲ್‌ನಲ್ಲಿ ಟ್ಯಾಲೆಂಟ್ ಶೋ ನೆಪದಲ್ಲಿ ವಂಚನೆ ಮಾಡುತ್ತಿರುವ ಆರೋಪ ಕೇಳಿ ಬಂದಿತ್ತು. ನಿಶಾ ನರಸಪ್ಪ ಎಂಬಾಕೆ ವಂಶಿಕಾ ಹೆಸರಿನಲ್ಲಿ ಹಲವರಿಂದ ಲಕ್ಷಾಂತರ ರೂಪಾಯಿ ಪಡೆದಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಸದಾಶಿವನಗರ ಠಾಣೆಯಲ್ಲಿ ವಂಶಿಕಾ ತಾಯಿ ಯಶಸ್ವಿನಿ ಆನಂದ್ ದೂರು ದಾಖಲಿಸಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಎನ್‌ಎನ್ ಪ್ರೊಡಕ್ಷನ್ ಎಂಬ ಪೇಜ್ ತೆರೆದು, ಪೋಷಕರಿಗೆ ವಂಚನೆ ಮಾಡುತ್ತಿದ್ದಾರೆ ಎನ್ನಲಾಗಿದೆ. ನಿಮ್ಮ ಮಕ್ಕಳಿಗೂ ಆಲ್ಬಂನಲ್ಲಿ ಫೋಟೊ ಶೂಟ್‌ಗೆ ಚಾನ್ಸ್ ಕೊಡಿಸುವುದಾಗಿ ಹೇಳಿ ನೂರಾರು ಪೋಷಕರಿಗೆ ವಂಚನೆ ಮಾಡಿದ್ದಾರೆ.
ಫ್ಯಾಮಿಲಿಗೆ ಒತ್ತಡ ಹೆಚ್ಚಾದಾಗ ದೂರು ಕೊಟ್ವಿ
ನಿಶಾ ನರಸಪ್ಪ ಕಳೆದ 6 ತಿಂಗಳಿಂದ ವಂಚಿಸುತ್ತಿದ್ದರು ಎಂದು ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಆರೋಪಿಸಿದ್ದಾರೆ. ಕಳೆದೆರಡು ತಿಂಗಳಿಂದ ಹಲವರು ನಮ್ಮ ಗಮನಕ್ಕೆ ತರುತ್ತಲೇ ಇದ್ದರು. ನಾವು ಠಾಣೆ ಮೆಟ್ಟಿಲೇರಿ ದೂರು ನೀಡಿದಾಗ ಮತ್ತಷ್ಟು ಪೋಷಕರು ನಮಗೆ ಸಾಥ್ ನೀಡಿದರು. ಈ ಮೊದಲು ಮೋಸ ಹೋದ ಪೋಷಕರಿಗೆ ಹಣ ಹಿಂದಿರುಗಿಸಿದರೆ ಕೇಸ್ ವಾಪಸ್ ತೆಗೆದುಕೊಳ್ಳುವುದಾಗಿ ನಿಶಾಗೆ ಹೇಳಲಾಗಿತ್ತು. ಆದರೆ ಯಾವಾಗ ಇದು ಸುದ್ದಿ ಎಲ್ಲೆಡೆ ಹರಡಲು ಶುರುವಾಯಿತೊ ನಿಶಾ ನರಸಪ್ಪಳಿಂದ ವಂಚನೆಗೊಳಗಾದ 125 ಜನರು ಮೆಸೇಜ್ ಮಾಡಿದ್ದರು. ಇದೊಂದು ದೊಡ್ಡ ಸ್ಕ್ಯಾಮ್‌ನಂತೆ ಕಾಣುತ್ತಿದೆ. ನಾವಂತೂ ಕೇಸ್ ಹಿಂಪಡೆಯಲ್ಲ ಎಂದು ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ಮಾಹಿತಿ ನೀಡಿದ್ದಾರೆ.
ಗೋಲ್ಡನ್ ಸ್ಟಾರ್ ಹೆಸರಲ್ಲೂ ಹಾಕಿದ್ಲಾ ಟೋಪಿ!
ರಿಯಾಲಿಟಿ ಸ್ಟಾರ್ ವಂಶಿಕಾ ಹೆಸರಲ್ಲಿ ಮೋಸ ಪ್ರಕರಣ ಸಂಬಂಧ, ಆರೋಪಿ ನಿಶಾ ಕಳ್ಳಾಟ ಕೆದಕಿದಷ್ಟು ಬಯಲಿಗೆ ಬರುತ್ತಿದೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ಹೆಸರಲ್ಲೂ ಮೋಸ ಮಾಡಿದ್ದಾಳೆ ಎಂದು ಪೋಷಕರೊಬ್ಬರು ಆರೋಪಿಸಿದ್ದಾರೆ. ಮೈಸೂರಿನಲ್ಲಿ ವಂಚನೆಯಿಂದ ಪಾರಾದ ಮಹಿಳೆಯೊಬ್ಬರು ನಿಶಾ ಕಳ್ಳಾಟ ಕುರಿತು ಮಾಹಿತಿ ನೀಡಿದ್ದಾರೆ. ಗಣೇಶ್ ಸಿನಿಮಾಗೆ ಅಭಿನಯಿಸಲು ಮಕ್ಕಳು ಬೇಕು. ಫೋಟೊ ಶೂಟ್ ಮಾಡಿಸಲು ಹಣ ನೀಡಿದರೆ ನಿಮ್ಮ ಮಕ್ಕಳಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಡಲಾಗುವುದು ಎನ್ನುತ್ತಿದ್ದರು.
ಇದನ್ನೂ ಓದಿ: Murder Case : ಆಸ್ತಿಗಾಗಿ ಅಣ್ಣನನ್ನೇ ಅಟ್ಟಾಡಿಸಿ ಚೂರಿ ಹಾಕಿದ ತಮ್ಮಂದಿರು
ನಿಶಾ ಖೆಡ್ಡಕ್ಕೆ ಬಿದ್ದಿದ್ದು ಹೇಗೆ?
ಹೆಸರು ದುರ್ಬಳಕೆ ಮಾಡಿಕೊಳ್ಳುವ ಸಂಬಂಧ ದೂರುಗಳು ಹೆಚ್ಚಾದಾಗ ಮಾಸ್ಟರ್ ಆನಂದ್ ಕುಟುಂಬಸ್ಥರು ಅಲರ್ಟ್ ಆಗಿದ್ದಾರೆ. ನಿಶಾ ನರಸಪ್ಪಳನ್ನು ಸಂಪರ್ಕಕ್ಕೆ ಮುಂದಾಗಿದ್ದಾರೆ. ಆದರೆ ಆಕೆ ಯಾರ ಕೈಗೂ ಸಿಗದೆ ಇರುವುದರು ಸಾಕಷ್ಟು ಅನುಮಾನ ಮೂಡಿಸಿದೆ.
ಈ ನಡುವೆ ಹಲವು ಸೆಲೆಬ್ರಿಟಿಗಳ ಹೆಸರು ಬಳಸಿ ದೋಖಾ ಮಾಡಿರುವುದು ಗೊತ್ತಾಗಿದೆ. ಮೋಸ ಹೋದ ಪೋಷಕರು ಮಾಸ್ಟರ್ ಆನಂದ್ ಕುಟುಂಬಸ್ಥರನ್ನು ಸಂಪರ್ಕಿಸಿದ್ದಾರೆ. ಪೋಷಕರ ಸಹಾಯದಿಂದ ನಿಶಾ ಜಾಡು ಹಿಡಿದು ಬಾಕಿ ಹಣ ಕೊಡುವುದಾಗಿ ಹೇಳಿ ಸಾಕ್ಷ್ಯಾಧಾರದೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಬಂಧಿತಳಾಗಿರುವ ನಿಶಾಳನ್ನು ಕೋರ್ಟ್ ಜ್ಯೂಡಿಷಿಯಲ್ ಕಸ್ಟಡಿಗೆ ನೀಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ