ಬೆಂಗಳೂರು: ವಿಧಾನಸಭಾ ಚುನಾವಣೆಗೆ (Karnataka Election 2023) ಸ್ಪರ್ಧಿಸಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುತ್ತಿದ್ದಾರೆ. ಈ ನಡುವೆ ಬುಧವಾರ ಬಿಜೆಪಿ ನಾಯಕರಾದ ವಿ.ಸೋಮಣ್ಣ, ಬಿ.ಸಿ.ನಾಗೇಶ್, ಬಾಲಚಂದ್ರ ಜಾರಕಿಹೊಳಿ ಸೇರಿ ಹಲವು ನಾಯಕರು ನಾಮಪತ್ರ ಸಲ್ಲಿಸಿದರು. ಸಾವಿರಾರು ಬೆಂಬಲಿಗರು, ಕಾರ್ಯಕರ್ತರ ಜತೆಗೆ ಬಿಜೆಪಿ ಅಭ್ಯರ್ಥಿಗಳು ಬೃಹತ್ ಮೆರವಣಿಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಚಾಮರಾಜನಗರ ಕ್ಷೇತ್ರದಲ್ಲಿ ವಿ.ಸೋಮಣ್ಣ ನಾಮಪತ್ರ ಸಲ್ಲಿಕೆ
ಚಾಮರಾಜನಗರ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಚಿವ ವಿ.ಸೋಮಣ್ಣ ನಾಮಪತ್ರ ಸಲ್ಲಿಸಿದರು. ಚಾಮರಾಜನಗರದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದ ಬಳಿಕ ಸೋಮಣ್ಣ ನಾಮಪತ್ರ ಸಲ್ಲಿಸಿದರು. ಸಂಸದ ಪ್ರತಾಪ ಸಿಂಹ, ಬಿಜೆಪಿ ಮುಖಂಡರಾದ ನಾಗಶ್ರೀ ಪ್ರತಾಪ್, ಫ್ರೊ.ಮಲ್ಲಿಕಾರ್ಜುನಪ್ಪ, ಆರ್.ರಾಮಚಂದ್ರು ಭಾಗಿಯಾಗಿದ್ದರು. ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧೆಸುತ್ತಿರುವ ಸೋಮಣ್ಣ, ಈಗಾಗಲೇ ವರುಣ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಕಲ್ಪತರು ನಾಡು ತಿಪಟೂರಿನಲ್ಲಿ ಬಿ.ಸಿ.ನಾಗೇಶ್ ಶಕ್ತಿ ಪ್ರದರ್ಶನ
ತುಮಕೂರು: ಕಲ್ಪತರು ನಾಡು ತಿಪಟೂರಿನಲ್ಲಿ ಸಚಿವ ಬಿ.ಸಿ. ನಾಗೇಶ್ ಶಕ್ತಿ ಪ್ರದರ್ಶನ ಮಾಡಿದರು. ಇದಕ್ಕೂ ಮುನ್ನ ನಗರದ ಕೋಡಿ ಸರ್ಕಲ್‌ನಿಂದ ತಾಲೂಕು ಕಚೇರಿವರೆಗೆ ಬೃಹತ್ ರೋಡ್ ಶೋ ಮೂಲಕ ಬಿ.ಸಿ. ನಾಗೇಶ್ ತೆರಳಿದರು. ಅಪಾರ ಸಂಖ್ಯೆಯ ಕಾರ್ಯಕರ್ತರು, ಬೆಂಬಲಿಗರು, ಅಭಿಮಾನಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯಾ, ಸಚಿವ ಜೆ.ಸಿ. ಮಾಧುಸ್ವಾಮಿ, ಬಿಜೆಪಿ ಒಬಿಸಿ ಮೋರ್ಚಾ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರ ಬಾಬು ಉಪಸ್ಥಿತರಿದ್ದರು.
ಇದನ್ನೂ ಓದಿ | Karnataka Election 2023 : ಅಶೋಕ್ ವಿರುದ್ಧ ಸುರೇಶ್ ಸ್ಪರ್ಧೆ; ಕುತೂಹಲ ಉಳಿಸಿಕೊಂಡ ಕಾಂಗ್ರೆಸ್!
ಅರಭಾವಿ ಅಭ್ಯರ್ಥಿ ಬಾಲಚಂದ್ರ ಜಾರಕಿಹೊಳಿ ನಾಮಪತ್ರ ಸಲ್ಲಿಕೆ
ಬೆಳಗಾವಿ: ಅರಭಾವಿ ಕ್ಷೇತ್ರದ ಬಿಜೆಪಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಮೂಡಲಗಿಯ ತಹಸೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಪ್ರಭಾವತಿ ಎಫ್. ಅವರಿಗೆ ನಾಮಪತ್ರ ಸಲ್ಲಿಸಿದರು. ಯಾವುದೇ ಮೆರವಣಿಗೆ ಅಬ್ಬರವಿಲ್ಲದೆ ಬಾಲಚಂದ್ರ ಜಾರಕಿಹೊಳಿ ನಾಮಪತ್ರ ಸಲ್ಲಿಸಿದರು. ಅವರಿಗೆ ಸ್ಥಳೀಯ ನಾಯಕರು ಸಾಥ್ ನೀಡಿದರು.
ಕೇಸರಿಮಯವಾದ ಯಲಹಂಕ
ಬೆಂಗಳೂರಿನ ಯಲಹಂಕದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಆರ್ ವಿಶ್ವನಾಥ್ ಅವರು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಯಲಹಂಕ ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ವಿಶ್ವನಾಥ್, ಬೆಂಬಲಿಗರು, ಕಾರ್ಯಕರ್ತರ ಜತೆ ಯಲಹಂಕ ಓಲ್ಡ್ ಟೌನ್‌ನಿಂದ ಎನ್.ಇ.ಎಸ್ ಸರ್ಕಲ್‌ವರೆಗೂ ಬೃಹತ್ ರೋಡ್ ಶೋ ನಡೆಸಿದರು. ರೋಡ್ ಶೋದಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕರ್ತರು ಭಾಗಿಯಾಗಿದ್ದರು. ಶಾಸಕರ ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಯಲಹಂಕ ಕೇಸರಿಮಯವಾಗಿತ್ತು.
ಬ್ಯಾಟರಾಯನಪುರದಲ್ಲಿ ತಮ್ಮೇಶ್ ಗೌಡ ನಾಮಪತ್ರ
ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ತಮ್ಮೇಶ್ ಗೌಡ ನಾಮಪತ್ರ ಸಲ್ಲಿಸಿದರು. ಸಹಕಾರ ನಗರದಲ್ಲಿರುವ ಗುಂಡಾಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ, ಗೋವುಗಳಿಗೆ ಪೂಜೆ ಸಲ್ಲಿಸಿ
ಸಾವಿರಾರು ಜನ ಬೆಂಬಲಿಗರ ಜತೆಗೆ ತಮ್ಮೇಶ್ ಗೌಡ ತೆರಳಿ ನಾಮಪತ್ರ ಸಲ್ಲಿಸಿದರು. ಅವರಿಗೆ ಸಂಸದ ಸದಾನಂದ ಗೌಡ ಸಾಥ್ ನೀಡಿದರು.
ಚಾಮರಾಜಪೇಟೆಯಲ್ಲಿ ಭಾಸ್ಕರ್ ರಾವ್ ಉಮೇದುವಾರಿಕೆ
ಬೆಂಗಳೂರು: ಚಾಮರಾಜಪೇಟೆಯಲ್ಲಿ ಬಿಜೆಪಿ ಅಭ್ಯರ್ಥಿ ಭಾಸ್ಕರ್ ರಾವ್ ಅವರು ನಾಮಪತ್ರ ಸಲ್ಲಿಸಿದರು. ಈ ವೇಳೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಂಸದ ಪಿ.ಸಿ.ಮೋಹನ್ ಮತ್ತಿತರರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಕೆ ಬಳಿಕ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಭಾಸ್ಕರ್ ರಾವ್ ದಕ್ಷ ಪೊಲೀಸ್ ಕಮಿಷನರ್ ಆಗಿದ್ದರು. ಈಗ ಚಾಮರಾಜಪೇಟೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕ್ಷೇತ್ರದ ಜನರಿಂದ ಅವರಿಗೆ ಪ್ರೀತಿ ಲಭಿಸುತ್ತದೆ. ಕಳೆದ 30 ವರ್ಷದಿಂದ ಚಾಮರಾಜಪೇಟೆ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಭಾಸ್ಕರ್ ರಾವ್ ದೊಡ್ಡ ಅಂತರದಿಂದ ಗೆಲ್ಲಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಹೇಳಿದರು.
ಭಾಸ್ಕರ್ ರಾವ್ ಮಾತನಾಡಿ, ಈ ಬಾರಿ ಚಾಮರಾಜಪೇಟೆ ಜನ ಬಿಜೆಪಿಯ ಕೈ ಹಿಡಿಯುತ್ತಾರೆ. 30 ವರ್ಷದ ಹಿಂದೆ ಬಿಜೆಪಿ ಇಲ್ಲಿ ಗೆದ್ದಿತ್ತು. ಶಿಕ್ಷಣ, ಉದ್ಯೋಗ, ಆರೋಗ್ಯ ಸೇರಿ ಸರ್ಕಾರದ ಸೌಲಭ್ಯ, ಅನುದಾನವನ್ನು ಮನೆಮನೆಗೂ ತಲುಪಿಸುತ್ತೇನೆ ಎಂದರು.
ಸೈಲೆಂಟ್ ಸುನಿಲ್ ಮನೆಗೆ ಹೋಗುವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ರೌಡಿ ರೌಡಿ ಅಂತ ಯಾರಿಗೂ ಪಟ್ಟ ಕಟ್ಟಬೇಡಿ. ಬದಲಾಗಲು ಅವಕಾಶ ಇದೆ. ಜೀವನದಲ್ಲಿ ಎಲ್ಲರಿಗೂ ಬದುಕುವ ಅಧಿಕಾರ ಇದೆ. ಪ್ರಜಾಪ್ರಭುತ್ವದಲ್ಲಿ ಯಾರು ಯಾರ ಮನೆಗೆ ಬೇಕಾದರೂ ಹೋಗಿ ಮತ ಕೇಳಬಹುದು. ಪ್ರಜಾಪ್ರಭುತ್ವದಲ್ಲಿ ಮತದಾರರೇ ಕಿಂಗ್ ಎಂದು ಹೇಳಿದರು.
ವಿಜಯನಗರ ಕ್ಷೇತ್ರದಲ್ಲಿ ಸಿದ್ಧಾರ್ಥ ಸಿಂಗ್ ಉಮೇದುವಾರಿಕೆ
ವಿಜಯನಗರ: ವಿಜಯನಗರ ಕ್ಷೇತ್ರದಲ್ಲಿ ಸಚಿವ ಆನಂದ್ ಸಿಂಗ್ ಅವರ ಪುತ್ರ ಸಿದ್ಧಾರ್ಥ ಸಿಂಗ್ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಹೊಸಪೇಟೆಯ ಪುನೀತ್ ರಾಜಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿರುವ ಬೃಹತ್ ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸಿ ಭಾರಿ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.
ಸಿ.ಸಿ. ಪಾಟೀಲ್ ಶಕ್ತಿಪ್ರದರ್ಶನ, ನಾಮಪತ್ರ
ಗದಗ: ಬಂಡಾಯದ ನಾಡು ನರಗುಂದದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಿದೆ. ಸಚಿವ ಸಿ.ಸಿ.ಪಾಟೀಲ ಅವರು ಬೃಹತ್ ರೋಡ್ ಶೋ ನಡೆಸುವ ಮೂಲಕ ಶಕ್ತಿಪ್ರದರ‍್ಸನ ಮಾಡಿದರು. ಅದ್ಧೂರಿ ಮೆರವಣಿಗೆಯಲ್ಲಿ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಜತೆ ತೆರಳಿ ನಾಮಪತ್ರ ಸಲ್ಲಿಸಿದರು.
ಇದನ್ನೂ ಓದಿ | Karnataka Election 2023: ಕಾಂಗ್ರೆಸ್ ಅಂದರೆ ಕರಪ್ಷನ್, ಕಮಿಷನ್, ಕ್ರಿಮಿನಲೈಸೇಷನ್: ಗುಡುಗಿದ ಜೆ.ಪಿ. ನಡ್ಡಾ
ವಿವಿಧ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿಗಳು
ಕಾಗವಾಡ- ಶ್ರೀಮಂತ ಪಾಟೀಲ್
ರಾಮನಗರ- ಗೌತಮ್ ಗೌಡ
ಮುದ್ದೇಬಿಹಾಳ- ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ
ಚಿತ್ರದುರ್ಗ- ಬಿಜೆಪಿ ಶಾಸಕ ತಿಪ್ಪಾರೆಡ್ಡಿ
ಕನಕಗಿರಿ- ಬಸವರಾಜ ದಢೇಸೂಗೂರು
ಕಲಬುರಗಿ- ಮಣಿಕಂಠ್ ರಾಠೋಡ್
ಖಾನಾಪುರ- ವಿಠ್ಠಲ್ ಹಲಗೇಕರ್
ಗೌರಿಬಿದನೂರು-ಡಾ. ಶಶಿಧರ್
ರಾಯಚೂರು ಗ್ರಾಮೀಣ- ತಿಪ್ಪರಾಜ್ ಹವಾಲ್ದಾರ್
ಸಿಂದಗಿ- ಶಾಸಕ ರಮೇಶ ಭೂಸನೂರ