ಬೆಂಗಳೂರು: ತಮ್ಮ ರಾಜಕೀಯ ಎರಡನೇ ಇನಿಂಗ್ಸ್ ಗಂಗಾವತಿಯಿಂದಲೇ ಆರಂಭಿಸಲು ಸಜ್ಜಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಭಾನುವಾರ ತಮ್ಮ ಹೊಸ ಪಕ್ಷ ʼಕಲ್ಯಾಣ ರಾಜ್ಯ ಪ್ರಗತಿ ಪಕ್ಷʼ ಘೋಷಣೆ ಮಾಡಿದ್ದಾರೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೂಲಕ ಗಂಗಾವತಿ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ರೆಡ್ಡಿ ಘೋಷಣೆ ಮಾಡಿರುವುದು ಗಂಗಾವತಿ ರಾಜಕಾರಣದಲ್ಲಿ ಸಂಚಲನ ಉಂಟು ಮಾಡಿದೆ. ರೆಡ್ಡಿ ರಾಜಕೀಯ ಎಂಟ್ರಿಯಿಂದ ಗಂಗಾವತಿ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾದಂತಾಗಿದೆ.
ಸಕ್ರಿಯ ರಾಜಕಾರಣಕ್ಕೆ ಮರಳುವ ಉದ್ದೇಶದೊಂದಿಗೆ ಕೊಪ್ಪಳ ಜಿಲ್ಲೆಯ ಗಂಗಾವತಿಯನ್ನು ಆಯ್ಕೆ ಮಾಡಿಕೊಂಡಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಗಂಗಾವತಿಯಲ್ಲಿಯೇ ಮನೆ ಮಾಡುವ ಮೂಲಕ ಸ್ಥಳೀಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.
ತಮ್ಮ ರಾಜಕೀಯ ನಿಲುವಿನ ಬಗ್ಗೆ ಕುತೂಹಲ ಹುಟ್ಟು ಹಾಕಿ ಇಂದು ತಮ್ಮ ಮನದ ಇಂಗಿತವನ್ನು ಬೆಂಗಳೂರಿನಲ್ಲಿ ಸುದೀರ್ಘ ಪತ್ರಿಕಾಗೋಷ್ಠಿ ನಡೆಸುವ ಮೂಲಕ ಹೊಸ ಪಕ್ಷದ ಘೋಷಣೆಯ ಜೊತೆಗೆ ಗಂಗಾವತಿಯಿಂದಲೇ ಸ್ಪರ್ಧೆ ಮಾಡುವುದಾಗಿ ಜನಾರ್ದನ ರೆಡ್ಡಿ ಘೋಷಣೆ ಮಾಡಿದ್ದಾರೆ. ತಮ್ಮ ಪತ್ನಿಯೂ ಸಾರ್ವಜನಿಕ ಬದುಕಿಗೆ ಬರುವ ಸುಳಿವನ್ನೂ ಸಹ ರೆಡ್ಡಿ ನೀಡಿದ್ದಾರೆ.
ಇನ್ನು ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ಮನೆ ಮಾಡಿದಾಗಲೇ ಗಂಗಾವತಿ ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿತ್ತು. ಅದರಲ್ಲೂ ಸ್ಥಳೀಯ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿಗೆ ತಳಮಳ ಶುರುವಾಗಿತ್ತು. ಈಗ ರೆಡ್ಡಿ ಹೊಸ ಪಕ್ಷ ಸ್ಥಾಪನೆಯ ಘೋಷಣೆ ಮಾಡಿದ್ದರಿಂದ, ತಮಗೆ ಟಿಕೆಟ್ ಕೈತಪ್ಪುವುದಿಲ್ಲ ಎಂದು ಪರಣ್ಣ ಮುನವಳ್ಳಿ ಕೊಂಚ ನಿರಾಳರಾದಂತಾಗಿದೆ. ಆದರೆ ಮತ್ತೊಬ್ಬ ಪ್ರಬಲ ಅಭ್ಯರ್ಥಿ ಕಣಕ್ಕಿಳಿಯುವದರಿಂದ ಗಂಗಾವತಿ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಡಲಿದೆ. ಜನಾರ್ದನರೆಡ್ಡಿ ಗಂಗಾವತಿಯಿಂದ ಸ್ಪರ್ಧೆ ಮಾಡುವ ಕುರಿತು ಘೋಷಣೆ ಹಿನ್ನೆಲೆಯಲ್ಲಿ ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಈ ಬಗ್ಗೆ ಏನೂ ಮಾತನಾಡುವುದಿಲ್ಲ. ಅವರು ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ. ನಾನಂತೂ ಬಿಜೆಪಿಯ ಅಭ್ಯರ್ಥಿ ಎಂದಷ್ಟೆ ಹೇಳಿದ್ದಾರೆ.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುತ್ತಿತ್ತು. ಈಗ ಜನಾರ್ದನರೆಡ್ಡಿ ತಮ್ಮ ಹೊಸ ಪಕ್ಷದೊಂದಿಗೆ ಎಂಟ್ರಿ ಕೊಡುತ್ತಿರುವುದರಿಂದ ಹೈವೋಲ್ಟೇಜ್ ಜೊತೆಗೆ ತ್ರಿಕೋನ ಸ್ಪರ್ಧೆಗೆ ಅಖಾಡ ರೆಡಿಯಾದಂತಾಗಿದೆ.
ಈ ಕುರಿತು ಶಾಸಕ ಪರಣ್ಣ ಮುನವಳ್ಳಿ ಪ್ರತಿಕ್ರಿಯಿಸಿ, ಪಕ್ಷ ಕಟ್ಟುವುದು ಅವರ ವೈಯಕ್ತಿಕ ವಿಷಯ, ಅದು ನಮಗೆ ಸಂಬಂಧವಿಲ್ಲದ ವಿಷಯ. ನಾನಂತೂ ಎರಡು ಬಾರಿ ಶಾಸಕನಾಗಿದ್ದೇನೆ. ಈ ಬಾರಿಯೂ ಬಿಜೆಪಿ ಟಿಕೇಟ್‌ನ ಪ್ರಬಲ ಆಕಾಂಕ್ಷಿ. ಈ ಕುರಿತು ಹೈಕಮಾಂಡ್ ಡಿಸೈಡ್ ಮಾಡುತ್ತದೆ. ನಮ್ಮದು ರಾಷ್ಟ್ರೀಯ ಪಕ್ಷ. ರೆಡ್ಡಿ ಹೊಸ ಪಕ್ಷ ಸ್ಥಾಪನೆ ಕುರಿತು ನಾನು ಏನೂ ಮಾತನಾಡೋದಿಲ್ಲ. ನಮ್ಮ ಪಕ್ಷದ ಅನೇಕ ಹಿರಿಯರಿದ್ದಾರೆ. ಈ ಬಗ್ಗೆ ಏನು ಹೇಳಬೇಕೋ ಅವರು ಹೇಳುತ್ತಾರೆ. ಗಂಗಾವತಿಯಲ್ಲಿ ಅವರು ಚುನಾವಣೆಗೆ ಸ್ಪರ್ಧಿಸುವುದು ಅವರ ಸ್ವಾತಂತ್ರ್ಯ. ಬೇಡ ಎನ್ನುವುದಕ್ಕೆ ನಾವು ಯಾರು ಎಂದಿದ್ದಾರೆ.
ವಿವಿಧ ನಾಯಕರ ಪ್ರತಿಕ್ರಿಯೆ
ಬಳ್ಳಾರಿಯಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಶ್ರೀರಾಮುಲು, ನಾನು ಅವರ ಜತೆಗೆ ಒಂದು ದೊಡ್ಡ ಶಕ್ತಿಯಾಗಿ ಬಂಡೆ ರೀತಿ ನಿಂತಿದ್ದೇನೆ. ಸ್ನೇಹವೇ ಬೇರೆ, ರಾಜಕಾರಣವೇ ಬೇರೆ. ಅವರು ಶಕ್ತಿವಂತರಲ್ಲ ಎಂದು ನಾನು ಎಂದಿಗೂ ಹೇಳಿಲ್ಲ. ಅವರು ಈ ಭಾಗದ ನೆಚ್ಚಿನ ನಾಯಕರು. ಅವರು ಬಿಜೆಪಿಗೂ ಒಂದು ಶಕ್ತಿಯಾಗಿದ್ದರು. ಇಂದು ಅವರದ್ದೇ ಬೇರೆ ಪಕ್ಷವಾಗಿರುವ ಸಂದರ್ಭದಲ್ಲಿ ನಮ್ಮ ಸಿದ್ಧಾಂತದಲ್ಲಿ ಮುಂದುವರಿಯುತ್ತೇವೆ ಎಂದಿದ್ದಾರೆ.
ಹುಬ್ಬಳ್ಳಿ ಹಾಗೂ ಧಾರವಾಡದಲ್ಲಿ ಪ್ರತ್ಯೇಕವಾಗಿ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಯಾವುದೇ ಪ್ರಾದೇಶಿಕ ಪಕ್ಷ ರಾಜ್ಯದಲ್ಲಿ ಯಶಸ್ಸು ಕಂಡಿಲ್ಲ. ಜನಾರ್ದನ ರೆಡ್ಡಿ ಪಕ್ಷ ಕಟ್ಟಿರುವ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಇದರ ಬಗ್ಗೆ ಮಾಹಿತಿ ಪಡೆದುಕೊಂಡು ಮಾತನಾಡುತ್ತೇನೆ ಎಂದರು. ಜನಾರ್ದನ ರೆಡ್ಡಿ ಅವರ ಮನವೊಲಿಕೆಯಲ್ಲಿ ಬಿಜೆಪಿ ವಿಫಲವಾಯಿತೇ ಎಂಬ ವಿಚಾರದ ಕುರಿತು ಪ್ರತಿಕ್ರಿಯೆಗೆ ನಿರಾಕರಣೆ ಮಾಡಿದರು. ನಾನು ಎಲ್ಲವನ್ನೂ ತಿಳಿದುಕೊಂಡೇ ಮಾತನಾಡುತ್ತೇನೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಯಶಸ್ಸು ಕಂಡಿಲ್ಲ ಅಂತಷ್ಟೆ ಎಂದು ಪುನರುಚ್ಚರಿಸಿದರು.
ಯಾರು ಯಾರ ಬಿ ಟೀಮ್, ಎ ಟೀಮ್ ಎನ್ನುವುದನ್ನು ಮುಂದೆ ಜನ ತಿರ್ಮಾನ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪಾರ್ಟಿ ಕಟ್ಟಲು ಚುನಾವಣೆ ಮಾಡಲು ಎಲ್ಲರಿಗೂ ಅಧಿಕಾರ ಇದೆ. ನಮ್ಮ ಚುನಾವಣೆ ಕಾನೂನಿನಲ್ಲಿ 25 ವರ್ಷ ಆಗಿರಬೇಕು, ಭಾರತೀಯ ಆಗಿರಬೇಕು ಹಾಗೂ ಆತ ಹುಚ್ಚ ಇರಬಾರದು ಎಂದು ಇದೆ. ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು. ಬಿಜೆಪಿ ಸೈದ್ಧಾಂತಿಕ ಆಧಾರದ ಪಕ್ಷ. ಈ ವಿಷಯವಾಗಿ ಸಿಎಂ ಆಗಲಿ ರಾಜ್ಯಾಧ್ಯಕ್ಷರಾಗಲಿ ಚರ್ಚೆ ಮಾಡಲು ಸಿಕ್ಕಿಲ್ಲ. ನಾನು ನಂತರ ಅವರ ಜತೆ ಮಾತನಾಡುತ್ತೇನೆ. ಸಿಎಂ ನಾಳೆ ದೆಹಲಿಗೆ ಬರಲಿದ್ದಾರೆ, ದೆಹಲಿಯಲ್ಲಿ ನಾನು ಸಿಗುತ್ತೇನೆ ಎಂದರು.
ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಮುನಿರತ್ನ, ಯಾವ ಪಕ್ಷ ಕಟ್ಟಿದ್ದಾರೋ ಗೊತ್ತಿಲ್ಲ.…ಹೊಸ ಪಕ್ಷದಿಂದ ಬಿಜೆಪಿಗೆ ಯಾವುದೇ ದಕ್ಕೆ ಆಗುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಹೊಸ ಪಕ್ಷದಿಂದ ನಮಗೇನೂ ತೊಂದರೆ ಇಲ್ಲ ಎಂದು ಹೇಳಿದರು.
ಅವರೇ ಆತ್ಮಾವಲೋಕನ ಮಾಡಿಕೊಳ್ಳಲಿ
ದಾವಣಗೆರೆಯಲ್ಲಿ ಮಾತನಾಡಿದ ಹೊನ್ನಾಳಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಜನಾರ್ದನ ರೆಡ್ಡಿ ಹೊಸ ಪಕ್ಷ ಘೋಷಣೆಯ ಬಗ್ಗೆ ಅವರೇ ಆತ್ಮವಲೋಕನ ಮಾಡಿಕೊಳ್ಳಬೇಕು. ಇದರಿಂದ ಅವರ ವರ್ಚಸಿಗೇ ದಕ್ಕೆ ಬರುತ್ತದೆ. ಬಿಜೆಪಿ ಜನಾರ್ಧನ ರೆಡ್ಡಿಗೆ ಎಲ್ಲವನ್ನೂ ನೀಡಿದೆ. ರೆಡ್ಡಿ ಅವರನ್ನು ಉಳಿಸಿಕೊಳ್ಳುತ್ತೇವೆ ಎಂದು ಶ್ರೀರಾಮುಲು ಹೇಳಿದ್ದರು. ಯಡಿಯೂರಪ್ಪ ಕೂಡ ರೆಡ್ಡಿ ಜತೆ ಮಾತನಾಡಿದ್ದಾರೆ. ಆದರೆ, ಜನಾರ್ದನ ರೆಡ್ಡಿ ಯಾವುದೋ ಭ್ರಮೆಯಲ್ಲಿ ಬದುಕುತ್ತಿದ್ದಾರೆ. ಅವರು ಹೊಸ ಪಕ್ಷ ಕಟ್ಟುವುದರಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ. ಬಿಜೆಪಿ ರಾಜ್ಯದಲ್ಲಿ ಸದೃಢವಾಗಿದೆ ಎಂದರು.
ಕೊಪ್ಪಳದಲ್ಲಿ ಮಾತನಾಡಿದ ಸಂಸದ ಸಂಗಣ್ಣ ಕರಡಿ, ಈ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಅವರು ಹೊಸ ಪಕ್ಷ ರಚನೆ ಮಾಡಿದ್ದಾರೆ ಎಂದರೆ ಅವರ ಉದ್ದೇಶ ಏನಿದೆ? ಗುರಿ ಏನಿದೆಯೋ ಅದಕ್ಕೆ ತಕ್ಕಂತೆ ಮಾಡಿರಬಹುದು. ಹೊಸ ಪಕ್ಷದ ಬಗ್ಗೆ ಈಗಲೇ ಏನೂ ಪರಿಣಾಮವಾಗುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಹೊಸ ಪಕ್ಷಗಳು ಉದಯವಾಗುವುದು ಸಹಜ. ಪಕ್ಷ ಸ್ಥಾಪನೆಗೆ ಅವರಿಗೆ ಸ್ವಾತಂತ್ರ್ಯವಿದೆ. ಹೊಸ ಪಕ್ಷದಿಂದ ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲವಾಗುತ್ತದೆ ಎಂದು ಹೇಳಲಿಕ್ಕೆ ಆಗುವುದಿಲ್ಲ. ಮುಂದೆ ನೇರ ಹಣಾಹಣಿಯೋ, ತ್ರಿಕೋನ ಸ್ಪರ್ಧೆ ಏರ್ಪಡುತ್ತದೆಯೋ ಎಂದು ಈಗಲೇ ಹೇಳಲು ಆಗುವುದಿಲ್ಲ. ಅವರು ನನ್ನನ್ನು ಸಂಪರ್ಕಿಸಿಲ್ಲ. ನಾನು ಬಿಜೆಪಿಯಲ್ಲಿ ಹ್ಯಾಪಿಯಾಗಿರುವೆ. ಹೊಸ ಪಕ್ಷದ ಬಗ್ಗೆ ನಾವು ಏನಾದರೂ ಈಗ ರಿಯಾಕ್ಟ್ ಮಾಡಿದರೆ ಹೊಸ ಪಕ್ಷ ಕಟ್ಟಿದವರಿಗೆ ಹರ್ಟ್ ಆಗಬಹುದು. ಹೀಗಾಗಿ ಆ ಬಗ್ಗೆ ನಾನು ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ಕಾಲವೇ ನಿರ್ಣಯಿಸುತ್ತದೆ
ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಶಾಸಕ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಪ್ರಜಾಪ್ರಭುತ್ವದಲ್ಲಿ ಪಕ್ಷ ಕಟ್ಟಲು ಹಾಗೂ ಚುನಾವಣೆ ಸ್ಪರ್ಧಿಸಲು ಅವಕಾಶ ಇದೆ. ಇದರಲ್ಲಿ ಮತದಾರರೇ ಪ್ರಭುಗಳು. ಅವರು ಯಾರಿಗೆ ಆಶೀರ್ವಾದ ಮಾಡುತ್ತಾರೆಯೋ ನೋಡೋಣ. ಕೆಲವನ್ನು ಇವತ್ತೇ ಜಡ್ಜ್‌ಮೆಂಟ್ ಕೊಡಲು ಬರುವುದಿಲ್ಲ. ಕಾಲ ಕೆಲವನ್ನು ನಿರ್ಣಯ ಮಾಡುತ್ತದೆ. ಕಾಲವನ್ನು ನಾವೆಲ್ಲ ಕಾದು ನೋಡಬೇಕಾಗುತ್ತದೆ. ನಾನು ಅವರನ್ನು ವೈಯಕ್ತಿಕ ವಿಷಯದಲ್ಲಿ ಭೇಟಿಯಾಗಿಲ್ಲ. ಯಾರು ಬೇಕಾದರೂ ಸ್ಪರ್ದೆ ಮಾಡಲು ಅವಕಾಶ ಇದೆ ಎಂದರು.
ಮಂಡ್ಯ ಜಿಲ್ಲೆ ಕೆ. ಆರ್. ಪೇಟೆ ತಾಲೂಕಿನ ನಾಟನಹಳ್ಳಿಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಹೊಸ ಪಕ್ಷ ಘೋಷಣೆ ಮಾಡಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಅವರು ಬೇರೆ ಪಕ್ಷ ಮಾಡಬಹುದು ಎಂದು ಎಲ್ಲರೂ ನಿರೀಕ್ಷೆ ಇಟ್ಟಿದ್ದರು. ಅವರು ಬೇರೆ ಪಕ್ಷ ಮಾಡುವ ಬೆಳವಣಿಗೆ ಏನ್ ಆಗುತ್ತದೆ ಎನ್ನುವುದನ್ನು ನೋಡೋಣ ಎಂದರು.
ವಿಜಯನಗರದಲ್ಲಿ ಮಾತನಾಡಿದ ವಿಜಯನಗರ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸನೌಡ, ಜನಾರ್ದನ ರೆಡ್ಡಿ ಪಕ್ಷ ಘೋಷಣೆಯಿಂದ ಬಿಜೆಪಿ ಲಾಸ್ ಆಗುವುದಿಲ್ಲ. ನಮ್ಮ ಕಾರ್ಯಕರ್ತರು ಬಿಜೆಪಿ ಬಿಟ್ಟು ಹೋಗುವುದಿಲ್ಲ. ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳೂ ಇವೆ, ಅದರಂತೆ ಇದೂ ಒಂದು. ಬಿಜೆಪಿಗೆ ಕಾರ್ಯಕರ್ತರು ಇದ್ದಾರೆ. ಕೇಂದ್ರದಲ್ಲಿ, ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಉತ್ತಮ ಆಡಳಿತ ಕೊಟ್ಟಿರುವುದು ರಾಜ್ಯದ ಜನಕ್ಕೆ ಗೊತ್ತಿದೆ. ಹೊಸ ರಾಜಕೀಯ ಪಕ್ಷದಿಂದ ರಾಜ್ಯ ಅಭಿವೃದ್ಧಿ ಆಗಲು ಸಾಧ್ಯ ಇಲ್ಲ. ಬಿಜೆಪಿ ಉತ್ತಮ ನಾಯಕರನ್ನು ಹೊಂದಿದೆ. ಜಗತ್ತಿನಲ್ಲಿ ಅತಿ ಹೆಚ್ಚು ಸದಸ್ಯರನ್ನು ಬಿಜೆಪಿ ಹೊಂದಿದೆ ಎಂದರು.
ಇದನ್ನೂ ಓದಿ | Janardhan Reddy | ಬಿಜೆಪಿಗೆ ನಷ್ಟ, ಕಾಂಗ್ರೆಸ್ ಲಾಭದ ಲೆಕ್ಕ; ಟಿಕೆಟ್ ವಂಚಿತರಿಗೆ ವೇದಿಕೆಯಾಗಲಿದೆಯೇ ಹೊಸ ಪಕ್ಷ?