ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ನಿರಂತರ ಸುರಿಯುತ್ತಿರುವ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ 317 ಮನೆಗಳಿಗೆ ಹಾನಿಯಾಗಿದೆ. ರಾಮದುರ್ಗ, ಚಿಕ್ಕೋಡಿಯಲ್ಲಿ ಅತಿಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಚಿಕ್ಕೋಡಿಯಲ್ಲಿ 82, ಕಿತ್ತೂರಿನಲ್ಲಿ 39, ರಾಮದುರ್ಗ43, ಸವದತ್ತಿ 35, ಬೆಳಗಾವಿ 19, ಮೂಡಲಗಿ 22, ಕಾಗವಾಡ 24, ಬೈಲಹೊಂಗಲ 19 ಹಾಗೂ ಹುಕ್ಕೇರಿಯಲ್ಲಿ 16 ಮನೆಗಳಿಗೆ ಹಾನಿಯಾಗಿದೆ. ಮಣ್ಣಿನ ಗೋಡೆಯ ಮನೆಗಳಿಗೆ ಹೆಚ್ಚು ಹಾನಿಯಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿದ ವರದಿಯಾಗಿಲ್ಲ.
ರಾಜ್ಯದ ಕರಾವಳಿ, ಮಲೆನಾಡು ವ್ಯಾಪ್ತಿಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ರಾಜ್ಯದಲ್ಲಿ ಇನ್ನೂ ೫ ದಿನ ವ್ಯಾಪಕ ಮಳೆಯನ್ನು ನಿರೀಕ್ಷಿಸಲಾಗಿದೆ. ನೆರೆಯ ಮಹಾರಾಷ್ಟ್ರದಲ್ಲೂ ಧಾರಾಕಾರ ಮಳೆ ಸುರಿಯುತ್ತಿದೆ. ದಕ್ಷಿಣ ಕನ್ನಡ, ಕೊಡಗು, ಉತ್ತರಕನ್ನಡ, ಚಿಕ್ಕಮಗಳೂರು, ಹಾಸನದಲ್ಲಿ ವ್ಯಾಪಕ ಮಳೆ ಮಂದುವರಿದಿದೆ. ಹಲವೆಡೆ ಭೂಕುಸಿತ ಸಂಭವಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ. ಕೊಡಗು, ದಕ್ಷಿಣ ಕನ್ನಡ, ಕಾರವಾರ ಮೊದಲಾದ ಜಿಲ್ಲೆಗಳಿಗೆ ಭೇಟಿ ನೀಡಲಿದ್ದು, ಪರಿಹಾರ ಕಾರ್ಯಾಚರಣೆಯನ್ನು ಪರಿಶೀಲಿಸಲಿದ್ದಾರೆ.