ಬೆಂಗಳೂರು: ಕಾಂಗ್ರೆಸ್ ಸರ್ಕಾರ (Congress Government) ಕೊಟ್ಟಿರುವ ಶಕ್ತಿ ಯೋಜನೆಯಿಂದ (Shakti scheme) ಮಹಿಳೆಯರಿಗೆ ಫ್ರೀ ಓಡಾಟಕ್ಕೆ (Free Bus Service) ಅವಕಾಶ ಸಿಕ್ಕಿದೆ. ಬಸ್ ಫ್ರೀ ಅಂತ ಹೆಂಗಸರು, ಮಕ್ಕಳು ಯಾರ ಮಾತೂ ಕೇಳ್ತಿಲ್ಲ ಮನೇಲಿ. ಗಂಡಸರ ಮಾತೇ ಕೇಳ್ತಿಲ್ಲ- ಎಂದು ಕನ್ನಡಪರ ಹೋರಾಟಗಾರ, ಮಾಜಿ ಶಾಸಕ ವಾಟಾಳ್ ನಾಗರಾಜ್ (Vatal Nagaraj) ಅವರು ಹೇಳಿದ್ದಾರೆ.
ಇದರ ಜತೆಗೇ ʻʻಇದನ್ನು ನಾನು ವಿರೋಧ ಮಾಡೋಲ್ಲ. ಹೆಣ್ಣು ಮಕ್ಕಳಿಗೆ ಕೊಟ್ಟಿದ್ದೀರಾ ಸಂತೋಷ. ಆದರೆ, ಆದ್ರೆ ಗಂಡಸರಿಗೂ ಉಚಿತ ಕೊಡಿ. ಬಜೆಟ್ ಸಂದರ್ಭದಲ್ಲಿ ಗಂಡಸರಿಗೂ ಉಚಿತ ಪ್ರಯಾಣ ಘೋಷಣೆ ಮಾಡಿʼʼ ಎಂದು ಕೇಳಿಕೊಂಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ʻʻನೀವು ಮನೆಯನ್ನು ಎರಡು ಭಾಗ ಮಾಡಿದ್ದೀರಾ. ಬರೀ ಹೆಂಗಸರಿಗೆ ಕೊಟ್ಟರೆ ಅದು ನಮಗೆ ಅವಮಾನ. ಗಂಡಸರಿಗೂ ನೀವು ಕೊಡಲೇಬೇಕು. ನಾನು ಮುಂದಿನ ವಾರ ಕೆಂಪೇಗೌಡ ಗೌಡ ಬಸ್ ನಿಲ್ದಾಣದಲ್ಲಿ ಬಸ್ ಹತ್ತಿ ಕೇಳ್ತೀನಿ. ಗಂಡಸರಿಗೆ ಉಚಿತ ಬಸ್ ಟಿಕೆಟ್ ಕೊಡಬೇಕು. ನಾನು ಬಸ್ ಹತ್ತಿ ಎಲ್ಲರ ಪರವಾಗಿ ಟಿಕೆಟ್ ಕೇಳ್ತೀನಿʼʼ ಎಂದು ಹೇಳಿದ ಅವರು, ಗಂಡಸರು ವೋಟ್ ಮಾಡಿಲ್ವಾ ನಿಮಗೆ? ಎಂದು ಪ್ರಶ್ನಿಸಿದ್ದಾರೆ.
ಕಾಸರಗೋಡು ಕರ್ನಾಟಕ ಸೇರಲೇಬೇಕು
ಇದೇ ವೇಳೆ, ನಾಡು ನುಡಿ ಬಗ್ಗೆ ಹಲವು ವಿಚಾರಗಳನ್ನು ವಾಟಾಳ್ ಹಂಚಿಕೊಂಡರು. ʻʻಕಾಸರಗೋಡು ಕರ್ನಾಟಕದ ಅವಿಭಾಜ್ಯ ಅಂಗ. ಕರ್ನಾಟಕ ಏಕೀಕರಣ ವೇಳೆ ಅನೇಕರು ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ಒತ್ತಾಯ ಮಾಡಿದರು. ಈಗ ಅಲ್ಲಿ ಕನ್ನಡ ಮಾತನಾಡಬಾರದು, ಕನ್ನಡ ಪದ ಬಳಸಬಾರದು ಅಂತ ಹೇಳ್ತಿದ್ದಾರೆ. ಇದರ ಬಗ್ಗೆ ಯಾವ ಮಂತ್ರಿಗಳು ಈ ಬಗ್ಗೆ ಮಾತಾಡ್ತಿಲ್ಲʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕೇರಳ ಸರ್ಕಾರಕ್ಕೆ ಪತ್ರ ಬರೀಬೇಕು ಎಂದು ಮನವಿ ಮಾಡಿದರು.
ಕರ್ನಾಟಕದಲ್ಲಿ ಮಲೆಯಾಳಿಗಳ ಹಾವಳಿ ಜಾಸ್ತಿಯಾಗಿದ್ದು, ಕರ್ನಾಟಕವೇ ಕೇರಳ ಆಗುತ್ತಿದೆ. ಈ ಬಗ್ಗೆ ಸಿದ್ದರಾಮಯ್ಯ ಸರ್ಕಾರ ಕ್ರಮ ವಹಿಸಬೇಕು ಎಂದಿದ್ದಾರೆ ವಾಟಾಳ್.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿ ಜಿಲ್ಲೆಯನ್ನು ಮೂರು ಭಾಗ ಮಾಡೋಕೆ ಹೊರಟಿದ್ದಾರೆ. ಮಂತ್ರಿ ಆಗ್ಬೇಕು, ಶಾಸಕರು ಆಗ್ಬೇಕು ಅನ್ನೋ ಆಸೆಯಲ್ಲಿ ಯಾರ ಎಂಜಲು ತಿಂದರೂ ಪರವಾಗಿಲ್ಲ ಎಂದು ಅಂದುಕೊಂಡಿದ್ದಾರೆ. ಹಾಗಾಗಿ ಮರಾಠಿ ಎಂಜಿಲು ನೆಕ್ಕುತ್ತ ಇದ್ದಾರೆ ಎಂದು ಆಕ್ರೋಶದಿಂದ ಹೇಳಿದರು.
ಇದನ್ನೂ ಓದಿ: Free Bus Service: ಮಹಿಳೆಯರ ಉಚಿತ ಪ್ರಯಾಣಕ್ಕೆ ಇನ್ನು ಸ್ಮಾರ್ಟ್ ಕಾರ್ಡ್ ಕಡ್ಡಾಯ; ಎಲ್ಲಿ ಸಿಗಲಿದೆ ಇದು?
ʻʻಬೆಳಗಾವಿ ಸುವರ್ಣ ಸೌಧದಲ್ಲಿ ಭೂತಗಳು ಓಡಾಡುತ್ತಿವೆ. ಬೆಳಗಾವಿಯನ್ನು ಮೂರು ಭಾಗ ಮಾಡಿದ್ರೆ ಕತ್ತು, ಹೃದಯ, ಕಾಲು ಕತ್ತರಿಸಿದಂತಾಗುತ್ತದೆ. ನಿಮ್ಮ ನಿಮ್ಮ ಬಾಯಿ ತೀಟೆಗಾಗಿ ಬಾಯಿಗೆ ಬಂದಾಗೇ ಮಾತಾಡ್ಬೇಡಿ. ಬೆಳಗಾವಿ ಮೂರು ಭಾಗ ಆದ್ರೆ ಕರ್ನಾಟಕ ಮೇಲೆ ದಾಳಿ ಆಗುತ್ತದೆ. ಕರ್ನಾಟಕದಲ್ಲಿ ಪ್ರಳಯ ಆಗುತ್ತದೆ ಎಚ್ಚರʼʼ ಎಂದು ಅವರು ಹೇಳಿದರು.
ಬೆಂಗಳೂರನ್ನೂ ನಾಲ್ಕು ಭಾಗ ಮಾಡಲು ಹೋಗಬಾರದು. ಈಗಾಗಲೇ ಇಲ್ಲಿ ಕನ್ನಡ ಮರೆಯಾಗಿದೆ. ಮುಂದೆ ಅದು ಮಾರ್ವಾಡಿ, ತಮಿಳರು, ತೆಲುಗರು, ಗುಜರಾತಿ, ಸಿಂಗ್, ಮಲಯಾಳಿ ಸಹಿತ ಪರಭಾಷಿಗರ ಕೈಗೆ ಹೋಗುತ್ತದೆ ಎಂದು ಎಚ್ಚರಿಸಿದರು.