Site icon Vistara News

Padma Shri Dr.R L Kashyap | ವೇದಾಂಗ ವಿದ್ವಾನ್‌, ಪದ್ಮಶ್ರೀ ಡಾ. ಆರ್ ಎಲ್‌ ಕಶ್ಯಪ್ ನಿಧನ

kashyap

ಬೆಂಗಳೂರು : ವೇದಾಂಗ ವಿದ್ವಾನ್‌, ಪದ್ಮಶ್ರೀ ಪುರಸ್ಕೃತ ಡಾ. ಆರ್ ಎಲ್‌ ಕಶ್ಯಪ್‌ ಅವರು ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅವಿವಾಹಿತರಾಗಿದ್ದ ಅವರು (Padma Shri Dr.R L Kashyap) ವಯೋ ಸಹಜ ಅನಾರೋಗ್ಯದಿಂದ ಬಳಲುತಿದ್ದರು.

ವೇದ ಮತ್ತು ವೇದಾಂಗ ಪರಿಣಿತರಾಗಿದ್ದ ಡಾ. ಆರ್‌ ಎಲ್‌ ಕಶ್ಯಪ್‌ ( ರಂಗಸ್ವಾಮಿ ಲಕ್ಷ್ಮೀ ನಾರಾಯಣ ಕಶ್ಯಪ್)‌ ಅವರು ನಾಲ್ಕು ವೇದಗಳಿಗೆ ಭಾಷ್ಯ ಬರೆದಿದ್ದಾರೆ. ವೇದಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದ್ದರು. ಋಗ್ವೇದ ಸಂಹಿತೆ, ಮಂಡಲ-1, ಋಗ್ವೇದ ಶಬ್ದಾರ್ಥ, ವೇದ ಹಾಗೂ ಉಪನಿಷತ್ತು, ಪವಮಾನ, ಆಧುನಿಕ ಕಾಲಕ್ಕೆ ವೇದ ಜ್ಞಾನ, ತೈತ್ತಿರೀಯ ಅರಣ್ಯಕ, ಸಾಮವೇದ ಪೂರ್ವಾರ್ಚಿಕ ಮೊದಲಾದ ಕೃತಿಗಳನ್ನು ಅವರು ಬರೆದಿದ್ದಾರೆ.

ಆಧ್ಯಾತ್ಮಿಕ ಸಂಘಟನೆ ಸಾಕ್ಷಿ ಟ್ರಸ್ಟ್‌ನ ಸ್ಥಾಪಕರಾಗಿದ್ದ ಅವರಿಗೆ 2021ರಲ್ಲಿ ಪದ್ಮಶ್ರೀ ನೀಡಿ ಕೇಂದ್ರ ಸರ್ಕಾರ ಗೌರವಿಸಿತ್ತು.

ಎಲೆಕ್ಟ್ರಿಕಲ್‌ ಮತ್ತು ಕಂಪ್ಯೂಟರ್‌ ಎಂಜಿನಿಯರಿಂಗ್‌ ಓದಿದ್ದ ಕಶ್ಯಪ್‌ ಅವರು ಅಮೆರಿಕದ ಪರ್ಡ್ಯೂ ವಿವಿಯಲ್ಲಿ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸಿದ್ದರು. ಮೆಶೀನ್‌ ಇಂಟಲಿಜೆನ್ಸ್‌ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿದ್ದರು. ವಿವಿಯಲ್ಲಿ 33 ವರ್ಷಗಳ ಸೇವಾವಧಿಯಲ್ಲಿ 50 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮಾಡಲು ಮಾರ್ಗದರ್ಶಕರಾಗಿದ್ದರು. ಪ್ರತಿಷ್ಠಿತ ವಿಜ್ಞಾನ ನಿಯತಕಾಲಿಕೆಗಳಲ್ಲಿ 250ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದರು. ಶ್ರೀ ಅರಬಿಂದೊ ಕಪಾಲಿ ಶಾಸ್ತ್ರಿ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರಾಗಿದ್ದರು. ಒಂದು ಕಡೆ ಕಂಪ್ಯೂಟರ್‌ ವಿಜ್ಞಾನಕ್ಕೆ ಕೊಡುಗೆ ಸಲ್ಲಿಸಿದ್ದ ಕಶ್ಯಪ್‌ ಅವರಿಗೆ ವೇದಗಳಲ್ಲಿ ಅಪಾರ ಒಲವು ಇತ್ತು.

ವೇದ ವಿಜ್ಞಾನದಲ್ಲಿ ಆಳವಾದ ಅಧ್ಯಯನ ನಡೆಸಿದ್ದರು. ವೇದ ಸಾಹಿತ್ಯವನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದರು. ನಾಲ್ಕು ವೇದಗಳ ಸಂಹಿತೆಗಳನ್ನು ಇಂಗ್ಲಿಷ್‌ಗೆ ಅನುವಾದಿಸಿದರು. ಕನ್ನಡ, ತಮಿಳು, ತೆಲುಗು, ಭಾಷೆಗಳಿಗೆ ಅವುಗಳು ಅನುವಾದವಾಯಿತು. 2012ರಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಕೊನೆಯ ತನಕವೂ ವೇದ ಮಂತ್ರಗಳು ಮತ್ತು ಉಪನಿಷತ್ತುಗಳ ಬಗ್ಗೆ ನಿಯಮಿತವಾಗಿ ತರಗತಿಗಳನ್ನು ನಡೆಸುತ್ತಿದ್ದರು.

ವಿಜ್ಞಾನ-ತಂತ್ರಜ್ಞಾನಗಳ ಕ್ಷೇತ್ರದಲ್ಲಿ ಸೈ ಎನ್ನಿಸಿದ ಬಳಿಕ ವೇದಾಧ್ಯಯನದ ಕಡೆಗೆ, ಸನಾತನ ಭಾರತೀಯ ಸಂಸ್ಕೃತಿಯ ರಕ್ಷಣೆ ಮತ್ತು ಪೋಷಣೆಗೆ ತಮ್ಮದೇ ಕೊಡುಗೆ ನೀಡಿದರು. 25 ಸಾವಿರಕ್ಕೂ ಹೆಚ್ಚು ಮಂತ್ರಗಳಿಗೆ ಇಂಗ್ಲಿಷ್‌ನಲ್ಲಿ ಅರ್ಥ ಬರೆದಿದ್ದಾರೆ. ವೇದ ಸಾಹಿತ್ಯವನ್ನು ಪ್ರತಿ ಮನೆಗೂ ಮುಟ್ಟಿಸಬೇಕು ಎಂಬುದು ಅವರ ಆಶಯವಾಗಿತ್ತು. ಈ ಉದ್ದೇಶಕ್ಕಾಗಿ 1997ರಲ್ಲಿ ಬೆಂಗಳೂರಿನಲ್ಲಿ ಕಪಾಲಿಶಾಸ್ತ್ರಿ ವೇದ ಸಂಸ್ಕೃತಿ ಸಂಸ್ಥೆಯನ್ನು ( ಸಾಕ್ಷಿ) ಸ್ಥಾಪಿಸಿದ್ದರು. ವೇದ ಜ್ಞಾನದ ಸಂರಕ್ಷಣೆ, ಸಂಶೋಧನೆ ಮತ್ತು ಪ್ರಸರಣ ಇದರ ಧ್ಯೇಯ.

ಅಮೆರಿಕದಲ್ಲಿ ಬೇರೆ ಬೇರೆ ಧರ್ಮಗಳ ಅಧ್ಯಯನಕ್ಕೆ ಬೇಕಾದಷ್ಟು ಗ್ರಂಥಗಳು ಸಿಗುತ್ತಿದ್ದರೂ, ಹಿಂದೂ ಧರ್ಮ, ವೇದ, ಉಪನಿಷತ್ತುಗಳಿಗೆ ಸಂಬಂಧಿಸಿ ಗ್ರಂಥಗಳ ಕೊರತೆ ಇತ್ತು. ಇದನ್ನು ಮನಗಂಡ ಕಶ್ಯಪರು ತಾವೇ ಅಧ್ಯಯನ ಮತ್ತು ಸಂಶೋಧನೆಗೆ ತೊಡಗಿಸಿಕೊಂಡರು. ಮೈಸೂರಿನಲ್ಲಿ 1938ರಲ್ಲಿ ಜನಿಸಿದ್ದ ಕಶ್ಯಪರು 1965ರಲ್ಲಿ ಹಾರ್ವರ್ಡ್‌ ವಿವಿಯಲ್ಲಿ ಪಿಎಚ್‌ಡಿ ಗಳಿಸಿದ್ದರು.

ಪರಿಸರ ಸಂರಕ್ಷಣೆಯಲ್ಲೂ ಆಸಕ್ತಿ ವಹಿಸಿದ್ದ ಕಶ್ಯಪರು ಬೆಂಗಳೂರಿನಿಂದ 30 ಕಿ.ಮೀ ದೂರದ ಯಡಮಡು ಗ್ರಾಮದಲ್ಲಿ ಹತ್ತು ಎಕರೆ ತೋಟದಲ್ಲಿ ಸಾವಿರಾರು ಗಿಡಮರಗಳನ್ನು ಬೆಳೆಸಿ ಪೋಷಿಸಿದ್ದರು.

Exit mobile version