Site icon Vistara News

ಹೋಟೆಲ್, ಮಾಲ್‌ಗಳಲ್ಲಿಯೂ ಸಿಗಲಿದೆ ಪುಸ್ತಕ, ಇದು ವೀರಕಪುತ್ರ ಶ್ರೀನಿವಾಸ್ ಸಾಹಸ

veerakaputra

ಬೆಂಗಳೂರು: ಪುಸ್ತಕ ಕ್ಷೇತ್ರದಲ್ಲೊಂದು ವಿಭಿನ್ನ ಬಗೆಯ ಪ್ರಯತ್ನಕ್ಕೆ ವೀರಕಪುತ್ರ ಶ್ರೀನಿವಾಸ್ ಮುನ್ನುಡಿ ಬರೆದಿದ್ದಾರೆ. ಕಾಫಿ ಶಾಪ್‌, ಹೋಟೆಲ್, ರೆಸ್ಟೋರೆಂಟ್, ಔಷಧ ಮಳಿಗೆ, ಆಸ್ಪತ್ರೆ, ಮಾಲ್‌, ಕಾರ್ಪೊರೇಟ್‌ ಕಂಪನಿಗಳ ಕಚೇರಿಗಳು ಸೇರಿದಂತೆ ವಿವಿಧೆಡೆ ಕನ್ನಡ ಪುಸ್ತಕಗಳು ದೊರೆಯುವಂತಹ ಅವಕಾಶವನ್ನು ಶ್ರೀನಿವಾಸ್ ಕಲ್ಪಿಸಿದ್ದಾರೆ.

ಇತ್ತೀಚೆಗೆ ಅದ್ಧೂರಿ ಸಮಾರಂಭದಲ್ಲಿ ವೀರಲೋಕ ಪ್ರಕಾಶನ ಹೊರತಂದಿರುವ ಹತ್ತು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಯಿತು. ಶ್ರೀನಿವಾಸ್ ʼವೀರಲೋಕʼ ಪ್ರಕಾಶನ ಸಂಸ್ಥೆ ಆರಂಭಿಸಿದ್ದು, ಈ ಮೂಲಕ ಕನ್ನಡ ಪುಸ್ತಕಗಳ ಓದುಗರಿಗೆ ಉತ್ತಮ ವೇದಿಕೆ ಒದಗಿಸಿ, ಓದುಗರ ಸಂಖ್ಯೆ ವೃದ್ಧಿಸಲು ಸಜ್ಜಾಗಿದ್ದಾರೆ.

ಕಾರ್ಯಕ್ರಮದಲ್ಲಿ ಕನ್ನಡದ ಸ್ಟಾರ್‌ ನಟರಾದ ರಮೇಶ್‌ ಅರವಿಂದ್‌ ಹಾಗೂ ಸುದೀಪ್‌ ಭಾಗವಹಿಸಿದರು. ಪುಸ್ತಕಗಳು ಜ್ಞಾನದ ಕೀಲಿಕೈ ಎಂಬ ಹೆಸರಿನಡಿ ನಡೆದ ಕಾರ್ಯಕ್ರಮವನ್ನು ಕನ್ನಡ ಪುಸ್ತಕಗಳ ರಾಯಭಾರಿಯಾಗಿರುವ ರಮೇಶ್ ಉದ್ಘಾಟಿಸಿದರು. ಕಿಚ್ಚ ಸುದೀಪ್ ಪುಸ್ತಕಗಳನ್ನು ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಮೇಶ್ ಅರವಿಂದ್, ಫೌಡ್ರಶಿಕ್ಷಣದಲ್ಲಿ ವಿದ್ಯಾಭ್ಯಾಸ ಮಾಡುವ ಸಮಯದಲ್ಲಿ ಸಿನಿಮಾವೊಂದರಲ್ಲಿ ನಟಿಸುವ ಅವಕಾಶ ಸಿಕ್ಕಿತು. ಆ ಪಾತ್ರಕ್ಕಾಗಿ ತಲೆ ಕೂದಲು ತೆಗೆದಿದ್ದೆ. ಹೀಗಾಗಿ ಶಾಲೆಗೆ ಹೋಗುವ ಬದಲು ಗ್ರಂಥಾಲಯಕ್ಕೆ ತೆರಳಿ ಪುಸ್ತಕ ಓದಲು ಶುರುಮಾಡಿದೆ. ನಂತರ ಅದು ಹವ್ಯಾಸವಾಯಿತು. ಹಲವು ಪುಸ್ತಕಗಳನ್ನು ಓದಿದ ಪರಿಣಾಮ ನಾನು ಈಗ ಪುಸ್ತಕ ಬರೆಯಲು ಶುರು ಮಾಡಿದ್ದೇನೆ ಎಂದರು.

ಸುದೀಪ್ ಮಾತಾನಾಡಿ, ನಾನು ಜಾಸ್ತಿ ಓದದೇ ಇದ್ದರೂ ಓದುವವರನ್ನು ಗೌರವಿಸುತ್ತೇನೆ. ಹೆಚ್ಚು ಪುಸ್ತಕ ಓದಲು ಸಾಧ್ಯವಾಗದಿದ್ದರೂ ಹಲವು ಪುಸ್ತಕಗಳನ್ನು ಒಮ್ಮೆಲೇ ಬಿಡುಗಡೆ ಮಾಡುವ ಒಳ್ಳೆಯ ಅವಕಾಶ ಸಿಕ್ಕಿದೆ. ಕನ್ನಡಿಗರು ಇವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

ವೀರಲೋಕದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್, ಕನ್ನಡ ಪುಸ್ತಕ ಎಲ್ಲಿ ಬೇಕಾದರೂ ಸಿಗುವಂತಾಗಲು ಮೊದಲ ಹಂತದಲ್ಲಿ 1 ಸಾವಿರ ಪುಸ್ತಕಗಳ ಸ್ಟ್ಯಾಂಡ್‌ಗಳನ್ನು ಬೆಂಗಳೂರಿನ ಮಾಲ್, ಅಂಗಡಿ ಮಳಿಗೆಗಳಲ್ಲಿ ಇರಿಸಲಾಗುವುದು. ಸ್ಥಳದಲ್ಲೇ ಖರೀದಿಗೆ ಅವಕಾಶ ಇದೆ ಎಂದರು. ಕನ್ನಡ ಪುಸ್ತಕಗಳನ್ನು ಪರಿಚಯಿಸಿ ಮಾರಾಟ ಮಾಡಲು ಕಾಲ್‌ಸೆಂಟರ್ ಸ್ಥಾಪಿಸಲಾಗಿದೆ. ನಮ್ಮ ಬಳಿ 11 ಲಕ್ಷ ಓದುಗರ ಮಾಹಿತಿ ಇದೆ. ಅವರನ್ನು ಸಂಪರ್ಕಿಸಿ ಪುಸ್ತಕ ಪರಿಚಯ, ಮಾರಾಟ ಮಾಡುತ್ತೇವೆ ಎಂದರು.

ಕೈಹಿಡಿದು ನೀ ನಡೆಸು ತಂದೆ(ವಿಶ್ವೇಶ್ವರ ಭಟ್), ಅವರು ಇವರು ದೇವರು(ಜೋಗಿ), ಲಾಸ್ಟ್ ಡೇಸ್ ಆಫ್ ಲೆಜೆಂಡ್ಸ್(ಗಣೇಶ್ ಕಾಸರಗೋಡು), ವಿಶ್ವ ಸುಂದರಿ(ಕುಂ. ವೀರಭದ್ರಪ್ಪ), ಸೋಲೆಂಬ ಗೆಲುವು(ದೀಪಾ ಹಿರೇಗುತ್ತಿ), ಮನಿ ಮನಿ ಎಕಾನಮಿ(ರಂಗಸ್ವಾಮಿ ಮೂಕನಹಳ್ಳಿ), ಆರ್ಟ್ ಆಫ್ ಸಕ್ಸಸ್( ರಮೇಶ್ ಅರವಿಂದ್), ನಿಮಗೆಷ್ಟು ಹಣ ಬೇಕು?(ಅನಂತ ಹುದೆಂಗಜೆ), ಒಳ್ಳೆಯ ಬದುಕಿನ ಸೂತ್ರಗಳು(ರವಿಕೃಷ್ಣಾ ರೆಡ್ಡಿ) ಕೃತಿಗಳು ಈ ಸಂದರ್ಭದಲ್ಲಿ ಬಿಡುಗಡೆಯಾದವು.

ಇದನ್ನೂ ಓದಿ: ಹೊಸ ಪುಸ್ತಕ: ಮನುಷ್ಯನನ್ನು ಓಡಿಸಿದ ಬಳಿಕ…

Exit mobile version