ಶಶಿಧರ ಮೇಟಿ, ಬಳ್ಳಾರಿ
ಅವಳಿ ಜಿಲ್ಲೆಗಳ ತರಕಾರಿ ಕಣಜಕ್ಕೆ ಪ್ರವಾಹದ ಭೀತಿ ಎದುರಾಗಿದೆ. ತಾರಾನಗರ ಜಲಾಶಯದಿಂದ ಏಕಾಏಕಿ ಹಳ್ಳಕ್ಕೆ ಬಿಡುವ ನೀರೇ ಕುರೇಕುಪ್ಪ, ಬಸಾಪುರ, ತಾಳೂರು ಗ್ರಾಮಗಳ ತರಕಾರಿ ಬೆಳೆಯುವ ರೈತರಿಗೆ ಶಾಪವಾಗಿ ಪರಿಣಮಿಸಿದೆ. ನೂರಾರು ಎಕರೆ ಪ್ರದೇಶದಲ್ಲಿ ಬೆಳೆಸಿರುವ ತರಕಾರಿ ನೀರು ಪಾಲಾಗಿ ಆತಂಕಗೊಂಡಿದ್ದು, ಮಳೆಯ ನೀರಿಗಿಂತ ಜಲಾಶಯದಿಂದ ಅನಿರೀಕ್ಷಿತವಾಗಿ ಬಿಡುವ ನೀರು ರೈತರನ್ನು ಪ್ರತಿಬಾರಿಯು ಆತಂಕಕ್ಕೆ ತಳ್ಳುತ್ತಿದೆ.
ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ತಾರಾನಗರ ಜಲಾಶಯ (ನಾರಿಹಳ್ಳ)ದ ಅನತಿ ದೂರದಲ್ಲಿಯೇ ಕುರೇಕುಪ್ಪ, ಬಸಾಪುರ, ತಾಳೂರು ಸೇರಿ ಇತರ ಗ್ರಾಮಗಳು ಬರುತ್ತವೆ. ಕುರೇಕುಪ್ಪದಲ್ಲಿ ಹೆಚ್ಚಾಗಿ ತರಕಾರಿ ಬೆಳೆಯುವುದರಿಂದ ಇದನ್ನು ಅಖಂಡ ಬಳ್ಳಾರಿ ಜಿಲ್ಲೆಯ ತರಕಾರಿ ಕಣಜ ಎಂದು ಕರೆಯುತ್ತಾರೆ. ಇಲ್ಲಿ ಬೆಳೆದ ತರಕಾರಿ ಬಳ್ಳಾರಿ ಮತ್ತು ಹೊಸಪೇಟೆ ಮಾರುಕಟ್ಟೆಗೆ ಹೋಗುತ್ತದೆ.
ಇದನ್ನೂ ಓದಿ | Ship Sinking | ನೋಡನೋಡುತ್ತಲೇ ಸಂಪೂರ್ಣ ಮುಳುಗಿದ ಬೋಟ್! ಮೀನುಗಾರರು ಪಾರು
ಏಕಾಏಕಿ ನೀರು ಬಿಡುಗಡೆ ತಂದ ಫಜೀತಿ
ಮಳೆಯಿಂದ ಹಳ್ಳ ತುಂಬಿ ಹರಿದರೆ ಹಳ್ಳದ ಎರಡು ಬದಿಯಲ್ಲಿರುವ ಜಮೀನುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ತಾರಾನಗರ ಜಲಾಶಯದಿಂದ ನೀರನ್ನು ಏಕಾಏಕಿ ಹಳ್ಳಕ್ಕೆ ಬಿಡುವುದರಿಂದ ಹಳ್ಳದ ಎರಡು ಬದಿಯಲ್ಲಿರುವ ಜಮೀನುಗಳು ಜಲಾವೃತ್ತವಾಗುತ್ತದೆ. ಜಲಾಶಯಕ್ಕೆ ಕಬ್ಬಿಣದ ಅದಿರಿನ ಗುಡ್ಡಗಳ ಮೂಲಕ ಕೆಂಪನೆಯ ನೀರು ಹರಿದು ಬರುತ್ತವೆ. ಜಲಾಶಯದಿಂದ ಇಂತಹ ನೀರು ಹಳ್ಳಕ್ಕೆ ಬಿಡುವುದರಿಂದ ಜಮೀನುಗಳ ಜಲಾವೃತ್ತವಾಗಿ ಬೆಳೆದಿರುವ ತರಕಾರಿ ಬೆಳೆಯು ಹಾನಿಯಾಗುತ್ತಿದೆ. ಹಳ್ಳದ ನೀರು ಕಡಿಮೆಯಾದ ಮೇಲೆ ಇಡೀ ಜಮೀನು ತುಂಬಾ ಕೆಂಪನೆಯ ಕೆನೆಯಾಕಾರದ ಪದರ ಜಮೀನಿನ ಮೇಲೆ ಹರಡಿ, ಬೆಳೆ ನಾಶವಾಗುತ್ತದೆ.
ನೀರಿನಲ್ಲಿ ಮುಳುಗಿದ ತರಕಾರಿ ಬೆಳೆ
ಜಲಾಶಯದಿಂದ ಆಗಾಗ ನೀರು ಹರಿದು ಬಿಟ್ಟರೆ ಏನು ಸಮಸ್ಯೆ ಇಲ್ಲ, ಆದರೆ ಒಮ್ಮೆಲೆ ಯಾವುದು ಸೂಚನೆ ಇಲ್ಲದೆ ಬಿಡುವುದು ರೈತರನ್ನು ಆತಂಕಕ್ಕೆ ತಳ್ಳಿದೆ. ಈ ಬಾರಿ ಜಲಾಶಯದಿಂದ ಹಳ್ಳಕ್ಕೆ ಬಿಟ್ಟಿರುವ ನೀರಿನಿಂದಾಗಿ ಕುರೇಕುಪ್ಪದ ಜಮೀನಿನಲ್ಲಿ ಬೆಳೆದಿರುವ ಹೂಕೋಸು, ಈರೇಕಾಯಿ, ತುಪ್ರೆಕಾಯಿ, ಚೌಳೇ ಕಾಯಿ, ಬೆಂಡೇಕಾಯಿ, ಈರುಳ್ಳಿ, ಟೊಮೊಟೋ, ಮೆಣಸಿಕಕಾಯಿ ಸೇರಿದಂತೆ ಸುಮಾರು 400 ಎಕರೆ ಪ್ರದೇಶದಲ್ಲಿ ಬೆಳೆದ ತರಿಕಾರಿ ಬೆಳೆ ಹಾನಿಗೊಳಗಾಗಿದೆ. ಇಲ್ಲಿನ ರೈತರಿಗೆ ತರಕಾರಿಯೇ ಪ್ರಮುಖ ಆಸರೆಯಾಗಿದೆ. ಈ ಆಸರೆಗೆ ತಾರಾನಗರ ಜಲಾಶಯದ ನೀರು ಕುತ್ತು ತಂದಿದೆ.
ಏಕಾಏಕಿ ನೀರು ಬಿಡುವುದರಿಂದ ತರಕಾರಿ ಸೇರಿದಂತೆ ಇತರೆ ಬೆಳೆ ಹಾನಿಯಾಗುವ ಜತೆಗೆ ಪ್ರಾಣಹಾನಿಯಾಗುವ ಸಾಧ್ಯತೆ ಇದೆ. ಕೆಲ ವರ್ಷಗಳ ಹಿಂದೆ ಜಲಾಶಯದಿಂದ ಹಳ್ಳಕ್ಕೆ ನೀರು ಬಿಟ್ಟಾಗ ನಾಲ್ಕು ಜನರು ಹಳ್ಳದಲ್ಲಿ ಸಿಲುಕಿಕೊಂಡಾಗ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಲಾಯಿತು. ಇಲ್ಲಿನ ಹಳ್ಳದ ಪ್ರವಾಹದ ನೀರಿನಿಂದ ಈ ಭಾಗದ ಜನರು ಪ್ರಾಣ ಮತ್ತು ಬೆಳೆ ಹಾನಿಯಿಂದ ಕಂಗಾಲಾಗಿದ್ದಾರೆ, ಇಂತಹ ಸಮಸ್ಯೆಗೆ ಪರಿಹಾರದ ಹಣ ನೀಡುವುದು ತಾತ್ಕಾಲಿಕ ಪರಿಹಾರ, ಶಾಶ್ವತ ಪರಿಹಾರಕ್ಕೆ ಒತ್ತು ನೀಡಬೇಕಾಗಿದೆ ಎಂದು ಸಂಡೂರು ತಾಲೂಕು ಕುರೇಕುಪ್ಪ ಗ್ರಾಮಸ್ಥರಾದ ತಿಮ್ಮಪ್ಪ, ಮಂಜುನಾಥ, ನಾಗರಾಜ, ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ | Rain News | ಮಳೆ ಪರಿಹಾರದಲ್ಲಿ ತಾರತಮ್ಯ: ಸಿಎಂ ವಿರುದ್ಧ ವಿವಿಧ ಜಿಲ್ಲೆಗಳ ಜನ, ಜನಪ್ರತಿನಿಧಿಗಳ ಆಕ್ರೋಶ