Site icon Vistara News

ಭೂಮಿಗೆ ಬಿದ್ದ ಮಳೆ, ಗಗನಕ್ಕೆ ಏರಿದ ತರಕಾರಿ ಬೆಲೆ; ಕೆಜಿಗೆ ಶತಕ ದಾಟಿದ ಬೀನ್ಸ್​, ಬಟಾಣಿ!

vegetable price

#image_title

ಬೆಂಗಳೂರು: ಮಳೆಗಾಲ ಶುರುವಾಗಿ ವಿಪರೀತ ಮಳೆಬೀಳಲು ಶುರುವಾಗುತ್ತಿದ್ದಂತೆ ತರಕಾರಿ ಬೆಲೆ (Vegetable Price)ಯೂ ಸಹಜವಾಗಿಯೇ ಗಗನಕ್ಕೆ ಏರುತ್ತದೆ. ಮಳೆ ಹೆಚ್ಚಾಗುತ್ತಿದ್ದಂತೆ ತರಕಾರಿಗಳು ಮಾರುಕಟ್ಟೆಗೆ ಸರಿಯಾಗಿ ಬರುವುದಿಲ್ಲ. ಇದೇ ಕಾರಣಕ್ಕೆ ಗ್ರಾಹಕರ ಜೇಬಿಗೂ ಹೊರೆಯಾಗುತ್ತದೆ. ಇದೀಗ ರಾಜ್ಯದಲ್ಲಿ ಮಳೆ ಶುರುವಾದ ಕಾರಣ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಬೆಂಗಳೂರು ನಗರದ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ (Vegetable Price in Bangalore) ಹೆಚ್ಚಳವಾಗಿದೆ. ಕೆಜಿ ಬೀನ್ಸ್​ ಬೆಲೆ 145 ರೂ. ಆಗಿದೆ. ಕೆಜಿ ನುಗ್ಗೆಕಾಯಿ ಬೆಲೆ, ಒಂದು ಲೀಟರ್​ ಪೆಟ್ರೋಲ್​​ ದರದತ್ತ ಸಾಗುತ್ತಿದೆ. ಬದನೆಕಾರಿ ಬೆಲೆಯೂ ನೂರರ ಸಮೀಪ ಬಂದು ನಿಂತಿದೆ. ಇನ್ನು ಸೊಪ್ಪಿನ ಬೆಲೆ ಕೂಡ ಜಾಸ್ತಿಯಾಗಿದೆ.

ಕೆಲ ದಿನಗಳ ಹಿಂದೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ ಸೇರಿ, ಬೆಂಗಳೂರಿನ ಸುತ್ತಮುತ್ತ ಸುರಿದ ಮಳೆಯಿಂದ ತರಕಾರಿ ಹಾಳಾಗಿದೆ. ಸೊಪ್ಪು ನೆಲಕಚ್ಚಿದೆ. ಇದೇ ಕಾರಣಕ್ಕೆ ಬೆಂಗಳೂರಿಗೆ ತರಕಾರಿ ಸರಿಯಾಗಿ ಪೂರೈಕೆ ಆಗುತ್ತಿಲ್ಲ. ಹೀಗಾಗಿ ತರಕಾರಿ/ಸೊಪ್ಪು ದರ ಏರಿಕೆಯಾಗುತ್ತಿದೆ. ಕಲಾಸಿಪಾಳ್ಯ, ಕೆ.ಆರ್‌.ಮಾರುಕಟ್ಟೆ ಅಷ್ಟೇ ಅಲ್ಲ, ಹಾಪ್‌ ಕಾಮ್ಸ್‌ನಲ್ಲೂ ಕೆಲ ತರಕಾರಿಗಳ ಬೆಲೆ ನೂರರ ಗಡಿ ದಾಟಿದೆ.

ಎಷ್ಟಿದೆ ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಸದ್ಯ ಮಾರುಕಟ್ಟೆ ಬೆಲೆ
ಬೀನ್ಸ್ (ಕೆಜಿಗೆ 145 ರೂಪಾಯಿ), ಮೂಲಂಗಿ (ಕೆಜಿಗೆ 46 ರೂಪಾಯಿ), ಗುಂಡುಬದನೆ (ಕೆಜಿಗೆ 78ರೂ., ಟೊಮೊಟೋ (ಕೆಜಿಗೆ 46 ರೂ.), ಬಟಾಣಿ (ಕೆಜಿಗೆ 148 ರೂ.), ಬ್ರೋಕೋಲಿ (ಕೆಜಿಗೆ 200 ರೂ.), ನವಿಲು ಕೋಸು (ಕೆಜಿಗೆ 63 ರೂ.), ನುಗ್ಗೆಕಾಯಿ (ಕೆಜಿಗೆ 80 ರೂಪಾಯಿ), ಕೊತ್ತಂಬರಿಸೊಪ್ಪು (ಕೆಜಿಗೆ 106 ರೂ.), ಬೆಂಡೆಕಾಯಿ (ಕೆಜಿಗೆ 54 ರೂಪಾಯಿ), ಶುಂಠಿ (ಕೆಜಿಗೆ 230 ರೂಪಾಯಿ), ಕ್ಯಾರೆಟ್ (ಕೆಜಿಗೆ 50 ರೂಪಾಯಿ).

Exit mobile version