ಶಿವಮೊಗ್ಗ: ಕಳೆದ ನಾಲ್ಕೈದು ದಿನಗಳಿಂದ ಮಲೆನಾಡು ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶರಾವತಿ ಹಿನ್ನೀರಿನಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ. ಈ ಕಾರಣಕ್ಕೆ ಸಿಗಂದೂರು (Sigandur) ಲಾಂಚ್‌ನಲ್ಲಿ ಹೇರಲಾಗಿದ್ದ ವಾಹನ ಸಾಗಾಟ (Vehicle Transportation) ನಿಷೇಧವನ್ನು ವಾಪಸ್ ಪಡೆಯಲಾಗಿದೆ. ಇದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು ನಿರಾಳವಾಗುವಂತೆ ಆಗಿದೆ.
ಹೀಗಾಗಿ ಶುಕ್ರವಾರದಿಂದ ಲಾಂಚ್‌ನಲ್ಲಿ ವಾಹನ ಸಾಗಾಟ ಪುನಾರಂಭವಾದಂತೆ ಆಗಿದೆ. ಮಳೆಯಿಲ್ಲದ ಕಾರಣ ಲಾಂಚ್‌ನಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ, ಕಲೆಕ್ಷನ್ ಮಾದರಿಯನ್ನು ಅನುಸರಿಸಲಾಗಿತ್ತು. ಕಲೆಕ್ಷನ್ ಮಾದರಿ ಎಂದರೆ ಕೇವಲ ಪ್ರಯಾಣಿಕರನ್ನು ಮಾತ್ರ ಹೊತ್ತೊಯ್ಯಲಾಗುತ್ತಿತ್ತು. ಬಳಿಕ ಪ್ರಯಾಣಿಕರಿಗೆ ಇನ್ನೊಂದು ಬದಿಯಲ್ಲಿ ಬಸ್ ವ್ಯವಸ್ಥೆ ಮಾಡಲಾಗುತ್ತಿತ್ತು.
ಒಂದು ವೇಳೆ ಈ ಭಾಗದಿಂದ ಇನ್ನೊಂದು ಕಡೆಗೆ ಸಂಚರಿಸಬೇಕಾದರೆ ಸುತ್ತಿಬಳಸಿ ಹೋಗಬೇಕಾಗಿತ್ತು. ಈಗ ಶರಾವತಿ ಹಿನ್ನೀರಿನಲ್ಲಿ ನೀರಿನ ಪ್ರಮಾಣದಲ್ಲಿ ಹೆಚ್ಚಳ ಕಂಡಿದೆ. ಇದರಿಂದ ಲಾಂಜ್‌ನ ಪ್ಲಾಟ್‌ಫಾರಂವರೆಗೆ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಲಾಂಚ್‌ನಲ್ಲಿ ವಾಹನಗಳ ಸಾಗಾಟಕ್ಕೆ ಪುನಃ ಅನುಮತಿ ನೀಡಲಾಗಿದೆ.
ಕಳಸವಳ್ಳಿ, ಅಂಬಾರಗೊಡ್ಡು, ಹೊಳೆಬಾಗಿಲಿನಲ್ಲಿ ನೀರು ಏರಿಕೆಯಾದಂತೆ ಆಗಿದೆ. ಹೀಗಾಗಿ ಲಾಂಚ್‌ನಲ್ಲಿ ಇನ್ನು ಸ್ಥಳೀಯರು ಸೇರಿದಂತೆ ಪ್ರವಾಸಿಗರು ತಮ್ಮ ವಾಹನಗಳನ್ನು ಸಾಗಾಟ ಮಾಡಬಹುದಾಗಿದೆ. ಬಸ್‌ಗಳು ಸಹ ಎಂದಿನಂತೆ ಸಂಚರಿಸಲಿದೆ. ಕಳೆದ 20 ದಿನಗಳಿಂದ ಲಾಂಚ್‌ನಲ್ಲಿ ಪ್ರಯಾಣಿಕರನ್ನು ಮಾತ್ರ ಸಾಗಿಸಲಾಗುತ್ತಿತ್ತು.
ಸ್ಥಳೀಯರು, ಪ್ರವಾಸಿಗರಿಗೆ ತೊಂದರೆಯಾಗುತ್ತಿತ್ತು
ಈ ರೀತಿಯಾಗಿ ವಾಹನ ಸಂಚಾರಕ್ಕೆ ನಿಷೇಧ ಹೇರುವುದರಿಂದ ಸ್ಥಳೀಯರಿಗೆ ತೀವ್ರ ತೊಡಕಾಗಿತ್ತು. ಅನಾರೋಗ್ಯದ ಸಂದರ್ಭದಲ್ಲಿ ತೊಂದರೆಯನ್ನು ಅನುಭವಿಸಬೇಕಿತ್ತು. ಅಲ್ಲದೆ, ಪ್ರವಾಸಿಗರು ಸಹ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಆಗುತ್ತಿರಲಿಲ್ಲ. ಈಗ ಪ್ರವಾಸಿಗರು ಸಹ ಸಿಂಗಧೂರು ಕ್ಷೇತ್ರದ ದರ್ಶನ ಪಡೆದು ಮುಂದೆ ಕೊಲ್ಲೂರು ಸೇರಿದಂತೆ ಇನ್ನಿತರ ಕಡೆಗಳಿಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: Weather Report : ಬೆಂಗಳೂರಿಗರು ಗಡಗಡ, ಕರಾವಳಿಗರು ತತ್ತರ; ಹೇಗಿರಲಿದೆ ಇಂದು ಮಳೆಯ ಅಬ್ಬರ
ಸೇತುವೆ ನಿರ್ಮಾಣಕ್ಕೂ ತೊಡಕಾಗಿತ್ತು
ಸುಮಾರು 2.14 ಕಿ.ಮೀ. ಉದ್ದ ಹಾಗೂ 16 ಮೀಟರ್ ಅಗಲದಲ್ಲಿ ಹೊಳೆಬಾಗಿಲು (ತುಮರಿ) ಸೇತುವೆ ನಿರ್ಮಾಣ ಕಾಮಗಾರಿಯು 2020ರ ಡಿಸೆಂಬರ್‌ನಲ್ಲಿ ಪ್ರಾರಂಭವಾಯಿತು. ಇದು 423.15 ಕೋಟಿ ರೂ. ವೆಚ್ಚದ ಪ್ರಾಜೆಕ್ಟ್ ಆಗಿದೆ. 2024ರ ನವೆಂಬರ್ ಒಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಆದರೆ, ಈ ಮಧೈ ಕೊರೊನಾ, ಭಾರಿ ಹಿನ್ನೀರಿದ್ದ ಕಾರಣಕ್ಕೆ ಮೊದಲೆರಡು ವರ್ಷ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಸದ್ಯ ಹಿನ್ನೀರಿನಲ್ಲಿ 17 ಪಿಲ್ಲರ್ಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ಪಿಲ್ಲರ್ಗಳ ನಡುವೆ ಪ್ರೀಕಾಸ್ಟ್ ಕಾಂಕ್ರೀಟ್ ಬ್ಲಾಕ್ಗಳನ್ನು ಜೋಡಿಸುವ ಕೆಲಸವೂ ನಡೆದಿತ್ತು. ಈ ಮಧ್ಯೆ ಲಿಂಗನಮಕ್ಕಿ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿದಿದ್ದರಿಂದ ಕೆಲ ಸಮಯ ಕಾಮಗಾರಿ ಸ್ಥಗಿತಗೊಂಡಿತ್ತು.