Site icon Vistara News

Hosanagara News: ಬಾಳೆ ಬರೆ ಘಾಟ್‌ ಕಾಂಕ್ರೀಟಿಕರಣ ಕಾಮಗಾರಿ ಪೂರ್ಣ; ವಾಹನ ಸಂಚಾರ ಪುನಾರಂಭ

Hosanagara News Vehicular traffic has started at Bale Bare Ghat

ಹೊಸನಗರ: ಕರಾವಳಿ ಹಾಗೂ ಮಲೆನಾಡಿಗೆ ಸಂಪರ್ಕ ಕಲ್ಪಿಸುವ ಬಾಳೆಬರೆ (ಹುಲಿಕಲ್‌) ಘಾಟ್‌ನ ‌(Bale Bare Ghat) ಕಾಂಕ್ರಿಟೀಕರಣ ಕಾಮಗಾರಿಯು ಪೂರ್ಣಗೊಂಡಿದ್ದು, ಶನಿವಾರ (ಏ.15) ರಾತ್ರಿಯಿಂದ ವಾಹನ ಸಂಚಾರ ಪುನಃ ಆರಂಭಗೊಂಡಿದೆ.

ಕಾಂಕ್ರಿಟೀಕರಣ, ರಕ್ಷಣೆಯ ತಡೆಗೋಡೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗಾಗಿ ಫೆ. 5 ರಿಂದ ಏ. 5ರ ವರೆಗೆ ಈ ಘಾಟಿಯಲ್ಲಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದರು. ಆ ಬಳಿಕ ಏ. 5ರಂದು ಕಾಮಗಾರಿ ಪೂರ್ಣಗೊಳ್ಳದ ಕಾರಣ ಮತ್ತೆ 10 ದಿನಗಳ ವರೆಗೆ ಸಂಚಾರ ಸ್ಥಗಿತಗೊಂಡಿತ್ತು. ಇದೀಗ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದನ್ನೂ ಓದಿ: Karnataka Elections : ಪಕ್ಷದ್ರೋಹ ಮಾಡಿಲ್ಲ, 10 ಬಾರಿ ಯೋಚಿಸಿ ಕಾಂಗ್ರೆಸ್‌ ಸೇರಿದ್ದೇನೆ; ಬಿ ಫಾರಂ ಸ್ವೀಕರಿಸಿದ ಜಗದೀಶ್‌ ಶೆಟ್ಟರ್‌

3.5 ಕಿ.ಮೀ. ಕಾಮಗಾರಿ

ಕುಂದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿ ಹಾದುಹೋಗುವ ಬಾಳೆಬರೆ ಘಾಟಿಯ ಉಡುಪಿ ಜಿಲ್ಲಾ ಯೋಜನೆಯು 3 ಕೋಟಿ ರೂ. ವೆಚ್ಚದಲ್ಲಿ ಅಂದಾಜು 1 ಕಿ.ಮೀ. ಹಾಗೂ ಶಿವಮೊಗ್ಗ ಜಿಲ್ಲಾ 10 ಕೋಟಿ ರೂ. ವೆಚ್ಚದಲ್ಲಿ 2.5 ಕಿ.ಮೀ. ಸೇರಿದಂತೆ ಒಟ್ಟು 3.5 ಕಿ.ಮೀ. ದೂರದವರೆಗೆ ರಸ್ತೆ ಅಗಲ, ಕಾಂಕ್ರಿಟೀಕರಣ, ರಕ್ಷಣೆಯ ತಡೆಗೋಡೆ ನಿರ್ಮಾಣ ಕಾರ್ಯ ನಡೆದಿದೆ.

3.5 ಕಿ.ಮೀ. ಅಭಿವೃದ್ಧಿ ಬಾಕಿ

ಬಾಳೆಬರೆ ಘಾಟಿಯು ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆ ಸೇರಿ ಹುಲಿಕಲ್ ಚೆಕ್ ಪೋಸ್ಟ್‌ನಿಂದ ಹೊಸಂಗಡಿಯ ಘಾಟಿಯ ಬುಡದ ವರೆಗೆ 14.5 ಕಿ.ಮೀ. ದೂರವಿದೆ. ಶಿವಮೊಗ್ಗ ಜಿಲ್ಲೆ 8 ಕಿ.ಮೀ. ಹೊರಗೆ ಈ ಹಿಂದೆ ಸ್ವಲ್ಪ ಕಾಂಕ್ರಿಟೀಕರಣ ಆಗಿದ್ದು, ಈಗ ಬಾಕಿ ಇರುವ 2.5 ಕಿ.ಮೀ.ನೊಂದಿಗೆ ಕಾಮಗಾರಿಯು ಪೂರ್ಣಗೊಂಡಿದೆ. ಉಡುಪಿ ಜಿಲ್ಲೆ 6.5 ಕಿ.ಮೀ. ಘಾಟಿಯ ಹೊರಗೆ ಈ ಹಿಂದೆ 2 ಕಿ.ಮೀ., ಈಗ 1 ಕಿ.ಮೀ. ಸೇರಿದಂತೆ ಒಟ್ಟು 3 ಕಿ.ಮೀ. ಕಾಂಕ್ರಿಟೀಕರಣಗೊಂಡಂತಾಗಿದೆ. ಇನ್ನು ಉಡುಪಿ ಜಿಲ್ಲೆಯ ಭಾಗ 3.5 ಕಿ.ಮೀ. ಘಾಟಿ ರಸ್ತೆ ಕಾಂಕ್ರಿಟೀಕರಣ ಬಾಕಿ ಇದೆ.

ಇದನ್ನೂ ಓದಿ: Karnataka Elections : ಒಂದು ಟಿಕೆಟ್‌ಗಾಗಿ ಸಿದ್ಧಾಂತ ಬದಲಿಸ್ತೀರಾ ಶೆಟ್ಟರೇ? ಗೋಹತ್ಯೆ ಬೆಂಬಲಿಸ್ತೀರಾ? ಪಿಎಫ್‌ಐ ಒಪ್ತೀರಾ?: ರಾಜಧರ್ಮ ಬೋಧಿಸಿದ ಈಶ್ವರಪ್ಪ

ಸಂಚಾರ ಆರಂಭ: ಸಂತಸ

ಬಾಳೆಬರೆ (ಹುಲಿಕಲ್‌) ಘಾಟ್‌ನಲ್ಲಿ ವಾಹನ ಸಂಚಾರ ಪುನಃ ಆರಂಭಗೊಂಡಿರುವುದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ. ಜತೆಗೆ ಇನ್ನು ಬಾಕಿ ಉಳಿದಿರುವ ಉಡುಪಿ ಜಿಲ್ಲೆಯ ಭಾಗದ 3.5 ಕಿ.ಮೀ. ಘಾಟಿ ರಸ್ತೆಯನ್ನು ಆದಷ್ಟು ಶೀಘ್ರವೇ ಕಾಂಕ್ರಿಟೀಕರಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯ ನಿವಾಸಿಗಳ ಒತ್ತಾಯವಾಗಿದೆ.

Exit mobile version