Site icon Vistara News

ಸುರಪುರದಲ್ಲಿ ಸ್ವಇಚ್ಛೆಯಿಂದ 500 ಜನರಿಂದ ಬೌದ್ಧ ಧಮ್ಮ ದೀಕ್ಷೆ: ವೆಂಕಟೇಶ ಹೊಸಮನಿ

ಬೌದ್ಧ ಧಮ್ಮ

ಯಾದಗಿರಿ: ಹಿಂದು ಧರ್ಮದಲ್ಲಿ ದಲಿತರನ್ನು ಕೀಳಾಗಿ ಕಾಣಲಾಗುತ್ತಿದೆ. ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆ ಆಚರಣೆ ಇದೆ. ಇದರಿಂದ ಕೆಳವರ್ಗದವರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಸ್ವಇಚ್ಛೆಯಿಂದ 500 ಜನ ಬೌದ್ಧ ಧಮ್ಮ ದೀಕ್ಷೆ ಪಡೆಯುತ್ತಿದ್ದಾರೆ. ಇದು ಮತಾಂತರವಲ್ಲ, ಬೌದ್ಧ ದೀಕ್ಷೆಯಾಗಿದೆ ಎಂದು ಗೋಲ್ಡನ್‌ ಕೇವ್‌ ಬುದ್ಧ ವಿಹಾರ ಟ್ರಸ್ಟ್‌ನ ಅಧ್ಯಕ್ಷ ವೆಂಕಟೇಶ ಹೊಸಮನಿ ಹೇಳಿದರು.

ಜಿಲ್ಲೆಯ ಸುರಪುರದ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಹಾಗೂ ದಲಿತ ಸಂಘಟನೆಗಳ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬೌದ್ಧ ಧಮ್ಮ ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಾಬಾಸಾಹೇಬ್‌ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಹಲವು ಅನುಯಾಯಿಗಳು ಬೌದ್ಧ ದೀಕ್ಷೆ ಪಡೆಯಲು ಆಸಕ್ತಿ ಹೊಂದಿದ್ದಾರೆ. ಕಾರ್ಯಕ್ರಮದಲ್ಲಿ 500 ಮಂದಿ ಬೌದ್ಧ ಧಮ್ಮ ದೀಕ್ಷೆ ಪಡೆಯಲು ಮುಂದಾಗಿದ್ದಾರೆ. ದೀಕ್ಷೆ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ಬೌದ್ಧ ದೀಕ್ಷೆ ನೀಡಿ, ಟ್ರಸ್ಟ್‌ ವತಿಯಿಂದ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು.

ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಗೌರವಾಧ್ಯಕ್ಷ ವರಜ್ಯೋತಿ ಭಂತೇಜಿ ಮಾತನಾಡಿ, ಬೌದ್ಧ ಧರ್ಮವು ಚಾರಿತ್ರಿಕ, ಪರಂಪರೆ ಒಳಗೊಂಡ ಈ ನೆಲದ ಮೂಲ ಧಮ್ಮವಾಗಿದೆ. ಭಗವಾನ್‌ ಬುದ್ಧ ಪ್ರತಿಪಾದಿಸಿರುವ ಧರ್ಮಕ್ಕೆ 1956 ಅಕ್ಟೋಬರ್‌ 14ರಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅವರು 5 ಲಕ್ಷ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಭೌದ್ಧ ಧಮ್ಮ ದೀಕ್ಷೆ ಸ್ವೀಕರಿಸಿದರು. ಅದೇ ರೀತಿ ಸುರಪುರದಲ್ಲಿ 500 ಜನರಿಗೆ ದೀಕ್ಷೆ ನೀಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ | Kumbhamela | ಜಲಕ್ಕೆ ಕೃತಜ್ಞತೆ ಸಲ್ಲಿಸೋಣ; ನೀರಿನ ಮಹತ್ವ ಬಗ್ಗೆ ಪಾಠ ಮಾಡಿದ ಡಾ. ವೀರೇಂದ್ರ ಹೆಗ್ಗಡೆ

Exit mobile version