ಮಂಗಳೂರು: ಹಿರಿಯ ರಂಗಕರ್ಮಿ, ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಸದಾನಂದ ಸುವರ್ಣ (92) (Sadananda Suvarna) ಅವರು ಜುಲೈ 16ರಂದು (ಮಂಗಳವಾರ) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು. ಸದಾನಂದ ಸುವರ್ಣ ಅವರು 1991ರಲ್ಲಿ ದೂರದರ್ಶನದಲ್ಲಿ (ಡಿಡಿ ಚಾನೆಲ್) 13 ಭಾಗಗಳಲ್ಲಿ ಪ್ರದರ್ಶನಗೊಂಡ ಧಾರಾವಾಹಿ ‘ಗುಡ್ಡದ ಭೂತ’ ನಿರ್ಮಾಣ ಮಾಡಿದ ಪ್ರಖ್ಯಾತಿ ಪಡೆದಿದ್ದರು. ಅದೇ ರೀತಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೆ.ಶಿವರಾಮ ಕಾರಂತರ ಕುರಿತು 8 ಭಾಗಗಳ ಸಾಕ್ಷ್ಯಚಿತ್ರ ನಿರ್ಮಿಸಿ ಕನ್ನಡದ ಸಾಂಸ್ಕೃತಿಕ ಲೋಕದಲ್ಲಿ ಚಿರಸ್ಥಾಯಿಯಾದವರು. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರೊಂದಿಗಿನ ಅವರ ಸಹಯೋಗ ಹಲವಾರು ಅದ್ಭುತ ಸಿನಿಮಾಗಳಿಗೆ ಕಾರಣವಾಯಿತು.
ಹಿರಿಯ ರಂಗಕರ್ಮಿ, ಚಲನಚಿತ್ರ ನಿರ್ದೇಶಕ- ನಿರ್ಮಾಪಕ ಸದಾನಂದ ಸುವರ್ಣರ ನಿಧನದ ಸುದ್ದಿ ಕೇಳಿ ದು:ಖವಾಯಿತು.
— CM of Karnataka (@CMofKarnataka) July 16, 2024
ಸದಾನಂದ ಸುವರ್ಣರು ನಿರ್ಮಿಸಿದ್ದ ‘‘ಘಟಶ್ರಾದ್ಧ’’ ಚಿತ್ರ ಮತ್ತು ನಿರ್ದೇಶಿಸಿದ್ದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ‘’ಕುಬಿ ಮತ್ತು ಇಯಾಲ’’ ಕತೆಯನ್ನಾಧರಿಸಿದ ಚಿತ್ರಗಳೆರಡೂ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳಿಗೆ ಭಾಜನವಾಗಿವೆ.… pic.twitter.com/JiVMZiQK2a
ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯವರಾದ ಸುವರ್ಣ ಅವರು ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಮುಂಬೈನಲ್ಲಿ ಮುಗಿಸಿದ್ದರು. ಅಲ್ಲೇ 30 ವರ್ಷ ಪೇಂಟ್ ವ್ಯಾಪಾರಿಯಾಗಿ ಕೆಲಸ ಮಾಡುವ ಮೊದಲು ಅವರು ಮುಂಬೈನ ಸಂಜೆ ಹೈಸ್ಕೂಲ್ನಲ್ಲಿ ಐದು ವರ್ಷಗಳ ಕಾಲ ಶಿಕ್ಷಕರಾಗಿ ಕೆಲಸ ಮಾಡಿದ್ದರು. ಮುಂಬೈನ ಕನ್ನಡ ರಂಗಭೂಮಿಯಲ್ಲಿ ಸಂದಾನಂದ ಸುವರ್ಣ ಅವರದ್ದು ಮರೆಯಲಾಗದ ಹೆಸರು. ನಂತರದ ವರ್ಷಗಳಲ್ಲಿ, ಅವರು ಮಂಗಳೂರಿಗೆ ಸ್ಥಳಾಂತರಗೊಂಡಿದ್ದರು. ಅಲ್ಲಿಯೂ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ಅವರು ಕನ್ನಡ ಮತ್ತು ತುಳು ಭಾಷೆಗಳಲ್ಲಿ ನೂರಾರು ನಾಟಕಗಳನ್ನು ನಿರ್ದೇಶಿಸಿ ಪ್ರದರ್ಶಿಸಿದ್ದಾರೆ.
ಇದನ್ನೂ ಓದಿ: Money Guide: ಹಿರಿಯರಿಗೆ ಆರೋಗ್ಯ ವಿಮೆ: ಯಾಕಾಗಿ? ಏನಿದರ ಉಪಯೋಗ?
ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರಗಳಾದ ‘ತಬರನ ಕಥೆ, ಮನೆ ಹಾಗೂ ʼಕ್ರೌರ್ಯʼ ಚಿತ್ರಗಳಿಗೆ ಸುವರ್ಣ ಕಾರ್ಯಕಾರಿ ನಿರ್ಮಾಪಕರಾಗಿ ಸೇವೆ ಸಲ್ಲಿಸಿದ್ದಾರೆ. 1989ರಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆಯನ್ನು ಆಧರಿಸಿದ ‘ಕುಬಿ ಮತ್ತು ಇಯಾಲ’ ಚಿತ್ರದ ಮೂಲಕ ನಿರ್ದೇಶನ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ಶ್ರೀ ನಾರಾಯಣ ಗುರು ಬಗ್ಗೆ ಸಾಕ್ಷ್ಯಚಿತ್ರ ನಿರ್ಮಿಸಲು ಮುಂದಾಗಿದ್ದರು. ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ತುಳುನಾಡಿನ ಶ್ರೀಮಂತ ಸಂಸ್ಕೃತಿಯನ್ನು ಪ್ರದರ್ಶಿಸುವ ಸಾಕ್ಷ್ಯಚಿತ್ರ ‘ತುಳುನಾಡು ಒಂದು ಇಣುಕುನೋಟ’ ಅವರ ಪ್ರಸಿದ್ಧ ಕೃತಿಗಳಲ್ಲಿ ಒಂದಾಗಿದೆ.
ಸಿನಿಮಾ ಚಳವಳಿ
ಮುಂಬೈನಲ್ಲಿದ್ದಾಗ ಅವರು ‘ಸೃಷ್ಟಿ’ ಎಂಬ ಫಿಲ್ಮ್ ಸೊಸೈಟಿ ನಡೆಸುತ್ತಿದ್ದರು. ಅಲ್ಲಿ ಭಾರತೀಯ ಭಾಷೆಯ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸಲಾಗುತ್ತಿತ್ತು. ಯಾಕೆಂದರೆ ಆ ವೇಳೆ ಅಲ್ಲಿ ಇತರ ಫಿಲ್ಮ್ ಸೊಸೈಟಿಗಳು ವಿದೇಶಿ ಭಾಷಾ ಚಲನಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಿದ್ದವು. ಫಿಲ್ಮ್ ಸೊಸೈಟಿ ಚಳವಳಿಯ ಮೂಲಕ ಅವರು 1970ರ ದಶಕದ ಸಿನೆಮಾ ಚಳವಳಿಗೆ ಅಡಿಯಿಟ್ಟಿದ್ದರು.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥೆಯನ್ನು ಆಧರಿಸಿದ ‘ಕುಬಿ ಮತ್ತು ಇಯಾಲ’ ಎಂಬ ಏಕೈಕ ಚಿತ್ರವನ್ನು ಸದಾನಂದ ಸುವರ್ಣ ನಿರ್ದೇಶಿಸಿದ್ದರು. ಮನೆ, ಕ್ರೌರ್ಯ ಮತ್ತು ತಬರನ ಕಥೆ ಸೇರಿದಂತೆ ಅನೇಕ ಚಲನಚಿತ್ರಗಳಿಗೆ ಕಾರ್ಯನಿರ್ವಾಹಕ ನಿರ್ಮಾಪಕರಾಗಿ ಕೆಲಸ ಮಾಡಿದರು. ಇವೆಲ್ಲವೂ ಕಾಸರವಳ್ಳಿ ನಿರ್ದೇಶಿಸಿದ ಸಿನಿಮಾಗಳು. ಇವುಗಳು ಹಲವಾರು ಪ್ರಶಸ್ತಿಗಳನ್ನು ಗೆದ್ದವು. ಅಂದ ಹಾಗೆ ಕಾಸರವಳ್ಳಿಯವರು ʼಗುಡ್ಡದ ಭೂತʼ ಧಾರಾವಾಹಿಯಲ್ಲಿ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು.
ಕಾಸರವಳ್ಳಿ ಹಾಗೂ ಸುವರ್ಣ ಅವರು ಹಲವಾರು ಯೋಜನೆಗಳಲ್ಲಿ ಕೆಲಸ ಮಾಡಿದ್ದರು. ಆದರೆ ಅವುಗಳಲ್ಲಿ ಹೆಚ್ಚಿನವು ಕಾರ್ಯರೂಪಕ್ಕೆ ಬರಲಿಲ್ಲ. ಸದಾನಂದ ಅವರು ಮಾತೃಭಾಷೆ ತುಳುವಿನಲ್ಲಿ ಒಂದು ಚಿತ್ರ ಮಾಡಲು ಬಯಸಿದ್ದರು. ಅನೇಕ ಸ್ಕ್ರಿಪ್ಟ್ ಗಳನ್ನು ಬರೆದಿದ್ದರು. ಸದಾನಂದ ಸುವರ್ಣ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾನಾ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.