ಶಿವಮೊಗ್ಗ: ನಾಡಿನ ಖ್ಯಾತ ಧಾರ್ಮಿಕ ಬರಹಗಾರ, ಧಾರ್ಮಿಕ ಚಿಂತಕ ಕೆ.ಆರ್. ಪ್ರಕಾಶ್ ಬಾಬು ಮಂಡಗದ್ದೆ (65) ಅವರು (Mandagadde Prakash Babu KR) ನಿಧನರಾಗಿದ್ದಾರೆ. ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶನಿವಾರ ನಿಧನರಾಗಿದ್ದಾರೆ.
ಅವಿವಾಹಿತರಾಗಿಯೇ ಉಳಿದಿದ್ದ ಮಂಡಗದ್ದೆ ಪ್ರಕಾಶ್ ಬಾಬು ಅವರು ಜ್ಯೋತಿಷ, ಹಬ್ಬ, ಧಾರ್ಮಿಕ ಆಚರಣೆಗಳ ಕುರಿತು ಅಪಾರ ಜ್ಞಾನ ಹೊಂದಿದ್ದರು. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಯವರಾದ ಇವರು 30ಕ್ಕೂ ಅಧಿಕ ವರ್ಷಗಳಿಂದ ಜ್ಯೋತಿಷ ಶಾಸ್ತ್ರ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ್ದಾರೆ.
ಜ್ಯೋತಿಷ ಶಾಸ್ತ್ರದ ಅಧ್ಯಯನಕ್ಕಾಗಿ ‘ಜ್ಯೋತಿಷ ಶಾಸ್ತ್ರ’ ಎಂಬ ಗ್ರಂಥವನ್ನೂ ಇವರು ರಚಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿರುವ ಕೆ.ಆರ್. ಪ್ರಕಾಶ್ ಬಾಬು ಮಂಡಗದ್ದೆ ಅವರು ಭಾಗ್ಯದೇವತೆ ಬನಶಂಕರಿ, ಹಬ್ಬಗಳು ಮತ್ತು ಜಯಂತಿಗಳು, ಶೃಂಗೇರಿ ಗುರು ಪರಂಪರೆ, ಅಮರನಾಥೇಶ್ವರ ಸೇರಿ ಹಲವು ಕೃತಿಗಳನ್ನು ಕೂಡ ರಚಿಸಿದ್ದಾರೆ.
ಇದನ್ನೂ ಓದಿ: KC Raghu : ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಆಹಾರ ತಜ್ಞ ಕೆ.ಸಿ.ರಘು ಇನ್ನಿಲ್ಲ
ಕೆ.ಆರ್. ಪ್ರಕಾಶ್ ಬಾಬು ಮಂಡಗದ್ದೆ ಅವರು ಜ್ಯೋತಿಷ ಶಾಸ್ತ್ರದಲ್ಲಿ ಮಾಡಿದ ಗಣನೀಯ ಸಾಧನೆಗೆ 2019ರಲ್ಲಿ ಅವರಿಗೆ ಕರ್ನಾಟಕ ಸರ್ಕಾರವು ಸಾಹಿತ್ಯ ರತ್ನ ಪುರಸ್ಕಾರ ನೀಡಿ ಗೌರವಿಸಿದೆ. ಅಧ್ಯಾತ್ಮಿಕ ಚಿಂತಕರಾಗಿ, ಪತ್ರಿಕಾ ಅಂಕಣಕಾರರಾಗಿಯೂ ಕೆ.ಆರ್. ಪ್ರಕಾಶ್ ಬಾಬು ಮಂಡಗದ್ದೆ ಅವರು ಗುರುತಿಸಿಕೊಂಡಿದ್ದರು. ಇವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.