Site icon Vistara News

Sandalwood New Movie | ಸದ್ದು! ವಿಚಾರಣೆ ನಡೆಯುತ್ತಿದೆ; ಪಶು ವೈದ್ಯನ ಸಿನಿಮಾ ಕನಸು ಕೊನೆಗೂ ನನಸು

Sandalwood New Movie

ಬೆಂಗಳೂರು: ಬಣ್ಣದ ಲೋಕವೆಂದರೆ ಹಾಗೆ, ಒಮ್ಮೆ ಕೈಬೀಸಿ ಕರೆದರೆ ಮುಗಿಯಿತು! ಸಿನಿ ಕ್ಷೇತ್ರದ ಸೆಳೆತ ಎಷ್ಟು ವರ್ಷವಾದರೂ ಮನಸ್ಸಿಂದ ಮರೆಯಾಗದು. ಇದೇ ರೀತಿ ಬಣ್ಣದ ಲೋಕಕ್ಕೆ ಬರಲೇಬೇಕೆಂಬ ಹಠ ಹಾಗೂ ಛಲದಿಂದ 20 ವರ್ಷಗಳ ಸತತ ಪ್ರಯತ್ನದ ಫಲವಾಗಿ ಪಶು ವೈದ್ಯರೊಬ್ಬರು ನಟನಾಗಿದ್ದಾರೆ. ಸಿನಿಮಾ (Sandalwood New Movie) ಸೆಳೆತ ಕಡೆಗೂ ಅವರನ್ನು ಬಣ್ಣ ಹಚ್ಚುವಂತೆ ಮಾಡಿದ್ದು, ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಸ್ಪೆಷಲ್ ಟೈಟಲ್​ನಡಿ ಚಂದನವನದಲ್ಲಿ ರಿಲೀಸ್​ಗೆ ರೆಡಿಯಾಗಿರುವ ‘ಸದ್ದು! ವಿಚಾರಣೆ ನಡೆಯುತ್ತಿದೆ’ ಚಿತ್ರ ಮತ್ತಷ್ಟು ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಮಧುನಂದನ್ ಅವರ ನಟನೆಯ ಕನಸು 20 ವರ್ಷಗಳ ಬಳಿಕ ನನಸಾಗಿದೆ. ಮಂಡ್ಯದ ಸಾಮಾನ್ಯ ಹುಡುಗನೊಬ್ಬನ ಸಾಧನೆಗೂ ನಾಂದಿ ಹಾಡಿದೆ ಈ ಚಿತ್ರ. ಹೀಗಾಗಿ ಬಿಡುಗಡೆಗೆ ಮೊದಲೇ ಸೌಂಡ್ ಮಾಡುತ್ತಿದೆ.

ವೃತ್ತಿಯೊಂದಿಗೆ ಸಿನಿಮಾ
ಅಂದಹಾಗೆ ಪಶು ವೈದ್ಯನಾಗಿ ಕೆಲಸ ನಿರ್ವಹಿಸಿ, ಪ್ರಸ್ತುತ ಸಹಾಯಕ ಪ್ರಾಧ್ಯಾಪಕನಾಗಿರುವ ಮಧುನಂದನ್ ನಟನಾಗಬೇಕು ಎಂಬ ಕನಸು ಕಂಡಿದ್ದರು. 20 ವರ್ಷಗಳ ಹಿಂದೆ ಕಂಡಿದ್ದ ಕನಸು ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ಮೂಲಕ ನನಸಾಗುತ್ತಿದೆ. ತಮ್ಮ ವೃತ್ತಿ ಜತೆಗೆ ನಟನೆ ಮಾಡಲು ವೈದ್ಯಕೀಯ ವಿವಿ ಅನುಮತಿ ಸಿಕ್ಕಿದೆ. ಈ ಮೂಲಕ ಕೊನೆಗೂ ಕಲಾವಿದನಾಗಿ ಬಣ್ಣ ಹಚ್ಚಿದ್ದಾರೆ ಮಧುನಂದನ್. ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಧುನಂದನ್ ನಟಿಸಿದ್ದಾರೆ. ಈ ಸಿನಿಮಾ ಇದೇ ನವೆಂಬರ್​ಗೆ ರಿಲೀಸ್ ಆಗಲು ಸಜ್ಜಾಗಿದೆ.

‘ಸದ್ದು ವಿಚಾರಣೆ ನಡೆಯುತ್ತಿದೆ’ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರವನ್ನ ಒಳಗೊಂಡಿದೆ. ಒಂದಷ್ಟು ನೈಜ ಘಟನೆಗಳ ಸ್ಪೂರ್ತಿ ಈ ಸಿನಿಮಾಗಿದೆ. ಭಾಸ್ಕರ್ ನೀನಾಸಂ ಡೈರೆಕ್ಷನ್ ಮಾಡಿದ್ದಾರೆ. ಹಿರಿಯ ನಟ ಅಚ್ಯುತ್ ಕುಮಾರ್, ರಾಕೇಶ್ ಮಯ್ಯ, ಪಾವನಾ ಗೌಡ, ರಾಘು, ಜಹಾಂಗೀರ್ ಮತ್ತಿತರರು ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಹಾಗೇ ಎಂ.ಎಂ. ಸಿನಿಮಾಸ್ ಬ್ಯಾನರ್​ನಡಿ ಸುರಭಿ ಲಕ್ಷ್ಮಣ್ ನಿರ್ಮಾಣ ಮಾಡಿದ್ದಾರೆ. ರಾಜ್ ಕಾಂತ ಕ್ಯಾಮೆರಾ ವರ್ಕ್, ಸಚಿನ್ ಬಸ್ರೂರು ಸಂಗೀತ, ಶಶಿಧರ್ ಸಂಕಲನ ಚಿತ್ರಕ್ಕಿದೆ.

ಇದನ್ನೂ ಓದಿ: Janardhan Reddy Son | ಜನಾರ್ದನ ರೆಡ್ಡಿ ಪುತ್ರನ ಸಿನಿಮಾ ಟೈಟಲ್ ರಿವೀಲ್

Exit mobile version