ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯಿಂದ (Victoria Hospital) ವಜಾ ಅಗಿದ್ದ 55 ಸಿಬ್ಬಂದಿಯನ್ನು ಮರುನೇಮಕ ಮಾಡಲಾಗಿದೆ. ಕೆಲಸ ಕೂಲಿ ಕೇಳಿದ್ದಕ್ಕೆ ವಜಾ ಮಾಡಿದ್ದಾರೆ ಎಂದು ಆಡಳಿತ ಮಂಡಳಿ ವಿರುದ್ಧ ಸಿಬ್ಬಂದಿ ಪ್ರತಿಭಟನೆ ನಡೆಸಿ ಅಕ್ರೋಶ ಹೊರಹಾಕಿದ್ದರು. ಇದೀಗ ಮಾನವೀಯತೆ ಆಧಾರದ ಮೇಲೆ ಎಲ್ಲಾ 55 ಹೊರಗುತ್ತಿಗೆ ಸಿಬ್ಬಂದಿಯನ್ನು ಮರುನೇಮಕ ಮಾಡಲಾಗಿದೆ.
ಸಿಬ್ಬಂದಿ ವಜಾ ಬಗ್ಗೆ ಈ ಬಗ್ಗೆ ಮೇ 11ರಂದು ವಿಸ್ತಾರ ನ್ಯೂಸ್ ವಿಶೇಷ ವರದಿ ಪ್ರಸಾರ ಮಾಡಿ ಮೇಲಧಿಕಾರಿಗಳ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತುಕೊಂಡ ವಿಕ್ಟೋರಿಯಾ ಆಸ್ಪತ್ರೆ ಆಡಳಿತ ಮಂಡಳಿ, ವಜಾಗೊಂಡಿದ್ದ ಸಿಬ್ಬಂದಿಯನ್ನು ಮರು ನೇಮಕ ಮಾಡಿದೆ.
ಹೊಸ ಏಜೆನ್ಸಿ ಬಂದ ಹಿನ್ನೆಲೆ ಸುಮಾರು 55 ಮಂದಿಯನ್ನು ಕೈಬಿಡಲಾಗಿತ್ತು. ಏಜೆನ್ಸಿ ಹಾಗೂ ಆಡಳಿತ ಮಂಡಳಿ ನಿರ್ಲಕ್ಷ್ಯದ ಹಿನ್ನೆಲೆ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ಹೀಗಾಗಿ ವೈದ್ಯಕೀಯ ಶಿಕ್ಷಣ ಸಚಿವರ ಸೂಚನೆ ಬೆನ್ನಲ್ಲೇ ಸಭೆ ನಡೆಸಿದ್ದ ಹಿರಿಯ ಅಧಿಕಾರಿಗಳು, ಮಾನವೀಯತೆ ಆಧಾರದ ಮೇಲೆ ಎಲ್ಲಾ 55 ಹೊರಗುತ್ತಿಗೆ ಸಿಬ್ಬಂದಿಯನ್ನು ಮರುನೇಮಕ ಮಾಡಿದ್ದಾರೆ.
ಇದನ್ನೂ ಓದಿ | Hebbal flyover: ಬಿಡಿಎ ಕಾಮಗಾರಿ; ಹೆಬ್ಬಾಳ ಮೇಲ್ಸೇತುವೆಗೆ ಕೆ.ಆರ್.ಪುರಂನಿಂದ ಬರುವ ವಾಹನಗಳಿಗೆ ನಿರ್ಬಂಧ
ವಜಾ ಮಾಡಿದ್ದ ಸಿಬ್ಬಂದಿಯನ್ನು ಮರು ನೇಮಕ ಮಾಡಿದ್ದು, ಕಳೆದ ಎರಡು ತಿಂಗಳ ಸಂಬಳ ಸಹ ಶೀಘ್ರ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು & ಸಂಶೋಧನಾ ಸಂಸ್ಥೆ ನಿರ್ದೇಶಕ ರಮೇಶ್ ಕೃಷ್ಣ ಮಾಹಿತಿ ನೀಡಿದ್ದಾರೆ.
ಕಳೆದ 20 ವರ್ಷಗಳಿಂದ ಸಿಬ್ಬಂದಿ ಡಿ ಗ್ರೂಪ್ ನೌಕರರಾಗಿ ಹೊರಗುತ್ತಿಗೆ ಆಧಾರದಲ್ಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳು ಹಿಂದೆ ಏಜೆನ್ಸಿ ಬದಲಾದ ಹಿನ್ನೆಲೆ ಈ ಎಲ್ಲರನ್ನೂ ಕೈ ಬಿಡುವ ಮಾತು ಕೇಳಿಬಂದಿತ್ತು. ಆದರೆ ಕೆಲಸದಿಂದ ಕೈ ಬಿಡಲ್ಲ ಅಂತ ಹೇಳಿದ್ದ ಹೊಸ ಏಜೆನ್ಸಿ ಇವರೆಲ್ಲರನ್ನೂ ಮುಂದುವರಿಸಿತ್ತು. ಆದರೆ ಕೆಲಸ ಮಾಡಿಸಿಕೊಂಡಿತೇ ಹೊರತು ಸಂಬಳ ಮಾತ್ರ ನೀಡಿರಲಿಲ್ಲ.
ಇದನ್ನೂ ಓದಿ | Silicon City Hospital: ಲಕ್ಷಕ್ಕೆ ಇಬ್ಬರಿಗೆ ಬರುವ ಮೆದುಳಿನ ರಕ್ತನಾಳ ಒಡೆಯುವ ಕಾಯಿಲೆ; ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಬಾಲಕಿ ಪಾರು
ಯಾಕೆ ಸಂಬಳ ನೀಡಿಲ್ಲ ಅಂತ ಕಳೆದ 4 ದಿನಗಳ ಹಿಂದೆ ಕೇಳಿದಾಗ ನಿಮ್ಮನ್ನು ಕೆಲಸದಿಂದ ಕೈಬಿಡಲಾಗಿದೆ ಅಂತ ಏಜೆನ್ಸಿ ಹೇಳಿದೆ. ಈ ವಿಷಯ ಕೇಳಿ ದಿಗ್ಭ್ರಾಂತರಾದ ಸಿಬ್ಬಂದಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸ್ಪಷ್ಟನೆ ಕೇಳಲು ಮುಂದಾಗಿದ್ದರು. ಬಳಿಕ ವಿವಿ ಪುರಂ ಪೊಲೀಸರು ಅಲ್ಲಿಂದ ಎಲ್ಲರನ್ನೂ ಬೇರೆಡೆಗೆ ಕರೆದೊಯ್ದು ಪರಿಸ್ಥಿತಿ ತಿಳಿಗೊಳಿಸಿದ್ದರು. ಮರು ನೇಮಕ ಮಾಡಿದ್ದರಿಂದ ಕೆಲಸ ಕಳೆದುಕೊಂಡು ಕಂಗಾಲಾಗಿದ್ದ ಸಿಬ್ಬಂದಿ ನಿರಾಳರಾಗಿದ್ದಾರೆ.