Site icon Vistara News

Video Viral : ಆಟವಾಡುತ್ತಾ ಕಾರಿಡಾರ್‌ನಿಂದ ಪಲ್ಟಿ ಹೊಡೆದು ಬಿದ್ದ 3 ವರ್ಷದ ಬಾಲಕ!

3-year-old boy falls off corridor while playing

ಮಂಗಳೂರು: ಪೋಷಕರು ಯಾವುದೇ ಕೆಲಸದಲ್ಲಿ ಇದ್ದರು ಮಕ್ಕಳ ಮೇಲೆ ಒಂದು ಕಣ್ಣು ಇಡಲೇಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಇಲ್ಲಿನ ಮಂಗಳೂರಿನ ಉಳ್ಳಾಲ ತಾಲೂಕಿನ ಮಂಜನಾಡಿ ಎಂಬಲ್ಲಿ ಕಟ್ಟಡದ ಮೇಲಿನಿಂದ 3 ವರ್ಷದ ಬಾಲಕ ಪಲ್ಟಿ ಹೊಡೆದು ಬಿದ್ದಿದ್ದಾನೆ. ಈ ಎಲ್ಲವೂ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವೈರಲ್‌ (Video Viral) ಆಗಿದೆ.

ಕಳೆದ ಆ.25 ರಂದು ಈ ಘಟನೆ ನಡೆದಿದೆ. ತಾಯಿ ಜತೆ ಮೂರು ವರ್ಷದ ಬಾಲಕ ಬ್ಯಾಂಕ್‌ಗೆ ಬಂದಿದ್ದ. ತಾಯಿ ಬ್ಯಾಂಕ್‌ ಒಳಗಿರುವಾಗ ಆಟವಾಡುತ್ತಾ ಹೊರಗೆ ಬಂದಿದ್ದ. ಕಾರಿಡಾರ್‌ಗೆ ಬಂದವನೇ ಅಲ್ಲಿದ್ದ ಕಬ್ಬಿಣದ ಗ್ರಿಲ್‌ ಹಿಡಿದುಕೊಂಡು ಆಟವಾಡುತ್ತಿದ್ದ. ಈ ವೇಳೆ ಗ್ರಿಲ್‌ ಹತ್ತುವಾಗ ಆಯತಪ್ಪಿ ಮೊದಲ ಮಹಡಿಯಿಂದ ಗ್ರೌಂಡ್ ಫ್ಲೋರ್‌ಗೆ ಬಿದ್ದಿದ್ದಾನೆ.

ಬಿದ್ದ ರಭಸಕ್ಕೆ ತಲೆ, ಕೈಗೆ ಗಾಯವಾಗಿದ್ದು, ಬಾಲಕ ಬಿದ್ದ ಶಬ್ಧ ಕೇಳಿ ಎಲ್ಲರೂ ಓಡಿ ಬಂದಿದ್ದಾರೆ. ಕೂಡಲೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಪ್ರಾಣಪಾಯದಿಂದ ಪಾರಾಗಿದ್ದರೂ, ಗಂಭೀರ ಗಾಯಗೊಂಡಿರುವ ಬಾಲಕನಿಗೆ ಚಿಕಿತ್ಸೆ ಮುಂದುವರಿದಿದೆ. ಮಗು ಬಿದ್ದ ದೃಶ್ಯ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಲ್ಲಿದೆ ನೋಡಿ ವಿಡಿಯೊ

ಇದನ್ನೂ ಓದಿ: Lover Murder : ಕುಕ್ಕರ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ ಪ್ರೇಮಿ!

ಆಟವಾಡುತ್ತಾ ಬಾವಿಯಲ್ಲಿ ಬಿದ್ದ 3 ವರ್ಷದ ಬಾಲಕಿ ದಾರುಣ ಸಾವು

ಕಾರವಾರ: ಬಾವಿಯಲ್ಲಿ (Drowned in well) ಕಾಲು ಜಾರಿ ಬಿದ್ದು 3 ವರ್ಷದ ಬಾಲಕಿ (Child Death) ಮೃತಪಟ್ಟಿರುವ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಹರಿದೇವ ನಗರದಲ್ಲಿ ಈ ದುರ್ಘಟನೆ ನಡೆದಿದೆ. ಸ್ತುತಿ (3) ಮೃತ ದುರ್ದೈವಿ.

ಮನೆಯ ಬಳಿ ಆಟವಾಡುತ್ತಿದ್ದ ಸ್ತುತಿ, ಗಣಪತಿ ಮೂರ್ತಿ ಎಂದು ಮಣ್ಣನ್ನು ಬಾವಿಯಲ್ಲಿ ಹಾಕಲು ಮುಂದಾಗಿದ್ದಾಳೆ. ಈ ವೇಳೆ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾಳೆ.

Child susthi dead in Drowned in well

ಇತ್ತ ಮನೆ ಮುಂದೆ ಆಟವಾಡುತ್ತಿದ್ದ ಮಗು ಕಾಣದೆ ಇದ್ದಾಗ ಗಾಬರಿಗೊಂಡ ಪೋಷಕರು ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ, ಎಲ್ಲಿ ಹುಡುಕಿದರೂ ಕಾಣಿಸಲಿಲ್ಲ. ಬಡಾವಣೆಯ ನಿವಾಸಿಗಳೆಲ್ಲ ಹುಡುಕಾಡುವಾಗ ಕೊನೆಗೆ ಬಾವಿಯೊಳಗೆ ಇಣುಕಿ ನೋಡಿದ್ದಾರೆ. ಆಗ ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಷ್ಟರಲ್ಲಿ ಮಗು ಉಸಿರುಗಟ್ಟಿ ಮೃತಪಟ್ಟಿದೆ. ಸ್ಥಳಕ್ಕೆ ಕಾರವಾರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ಇತ್ತ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version