ಚಿತ್ರದುರ್ಗ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ “ಶಕ್ತಿ” ಯೋಜನೆಯು ಒಂದಿಲ್ಲೊಂದು ಅವಾಂತರವನ್ನು ಮಾಡುತ್ತಲೇ ಬರುತ್ತಿದೆ. ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ಸಾರಿಗೆ ಬಸ್‌ನಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಸದುಪಯೋಗವಾಗುತ್ತಿದ್ದುದರ ಜತೆಗೆ ದುರುಪಯೋಗವೂ ಆಗುತ್ತಿದೆ. ಇನ್ನು ಅಲ್ಲಲ್ಲಿ ನಾಗರಿಕರ ನಡುವೆ ಹೊಡೆದಾಟ, ಬಸ್ ಹತ್ತುವಾಗ ಬಸ್‌ಗೆ ಹಾನಿ, ಸಾರಿಗೆ ಸಿಬ್ಬಂದಿ ಜತೆಗೆ ವಾಗ್ವಾದಗಳು ನಡೆಯುತ್ತಿರುವ ವರದಿ ಆಗಾಗ ಆಗುತ್ತಲೇ ಇವೆ. ಈಗ ಚಳ್ಳಕೆರೆಯಲ್ಲಿ ಸಾರಿಗೆ ಬಸ್ ತಡೆದು ಬಸ್ ನಿರ್ವಾಹಕನಿಗೆ ಥಳಿಸಿದ ಘಟನೆ ನಡೆದಿದೆ. ಈ ವಿಡಿಯೊ ವೈರಲ್ (Video Viral) ಆಗಿದೆ.
ಏನಿದು ಘಟನೆ?
ಸಾರಿಗೆ ಬಸ್ ಬುಧವಾರ ರಾಯದುರ್ಗದಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ದಾಬಸ್ ಪೇಟೆಯಿಂದ ಬರುವಾಗ ಮಹಿಳೆಯೊಬ್ಬರು ಬಸ್‌ಗೆ ಕೈ ಅಡ್ಡ ಮಾಡಿದ್ದಾರೆ. ಆಗ ಕಂಡಕ್ಟರ್ ಬಸ್‌ನಲ್ಲಿ ಸೀಟ್ ಇಲ್ಲ ಎಂದು ಹೇಳಿ ಬಸ್ ನಿಲ್ಲಿಸದೇ ಹೋಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: PM Modi US Visit: ಮೋದಿಗೆ ಜೋ ಬೈಡೆನ್ ಬೋಧನೆ ಮಾಡುವುದಿಲ್ಲ ಎಂದ ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ
ಸೀಟ್ ಇಲ್ಲ ಎಂದು ಹೇಳಿ ಸ್ಟಾಪ್ ಕೊಡದೇ ಕಂಡಕ್ಟರ್ ಬಸ್ ಅನ್ನು ಮುಂದಕ್ಕೆ ಹೋಗಲು ಹೇಳಿದ್ದಕ್ಕೆ ತೀವ್ರ ಆಕ್ರೋಶಗೊಂಡ ಮಹಿಳೆಯು ಈ ವಿಷಯವನ್ನು ತನ್ನ ಸಂಬಂಧಿಕರಿಗೆ ತಿಳಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಸಂಬಂಧಿಕರು ಆಕೆಯನ್ನು ಕರೆದುಕೊಂಡು ಗುರುವಾರ ಬಸ್ ಅನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ಚಳ್ಳಕೆರೆಯಲ್ಲಿ ಆ ಬಸ್ ಅನ್ನು ತಡೆದಿದ್ದಾರೆ. ಈ ವೇಳೆಯೇ ಗಲಾಟೆ ನಡೆದಿದೆ.
ಬಸ್‌ನಿಂದ ನಿರ್ವಾಹಕರನ್ನು ಕೆಳಕ್ಕೆ ಇಳಿಸಿ ಮೊದಲಿಗೆ ವಿಚಾರಿಸಿದ್ದಾರೆ. ಬುಧವಾರ ಏಕೆ ಬಸ್ ನಿಲ್ಲಿಸಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ನಿರ್ವಾಹಕರಿಗೆ ಮತ್ತು ಬಂದಿದ್ದ ಯುವಕರ ಮಧ್ಯೆ ವಾಗ್ವಾದ ಆಗಿದೆ. ಕೊನೆಗೆ ಸಿಟ್ಟಿಗೆದ್ದ ಯುವಕರು ಏಕಾಏಕಿ ನಿರ್ವಾಹಕನ ಮೇಲೆ ಹಲ್ಲೆ ಮಾಡಿದ್ದಾರೆ.
ಪದೇ ಪದೆ ಹೊಡೆದರು
ಒಮ್ಮೆಲೆಗೆ ತಮ್ಮ ಮೇಲೆ ಹಲ್ಲೆ ಮಾಡುತ್ತಿದ್ದರಿಂದ ಸಿಟ್ಟಿಗೆದ್ದ ನಿರ್ವಾಹಕರು ಅದನ್ನು ಪ್ರಶ್ನೆ ಮಾಡಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಯುವಕರು, ಮತ್ತೆ ಮತ್ತೆ ಹಲ್ಲೆ ಮಾಡಿದ್ದಾರೆ. ಬಸ್‌ನ ಉದ್ದಕ್ಕೂ ಕರೆದುಕೊಂಡು ಹೋಗಿ ಹೊಡೆದಿದ್ದಾರೆ. ಜತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಸಹಾಯಕ್ಕೆ ಬಾರದ ಪ್ರಯಾಣಿಕರು, ಸಾರ್ವಜನಿಕರು
ಯುವಕರ ಗುಂಪೊಂದು ಹೀಗೆ ಹಲ್ಲೆ ಮಾಡುತ್ತಿದ್ದರೂ ಯಾರೂ ಸಹ ಇವರ ಸಹಾಯಕ್ಕೆ ಬಾರಲೇ ಇಲ್ಲ. ಎಲ್ಲರೂ ಬಸ್‌ನ ಕಿಟಕಿಯಿಂದ ವೀಕ್ಷಿಸಿದರೆ, ಮತ್ತೆ ಹೊರಗಡೆ ಇದ್ದವರು ನೋಡುತ್ತಾ ನಿಂತಿದ್ದರು. ಇನ್ನು ಕೆಲವರು ಇದನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಈ ವಿಡಿಯೊ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: CM Siddaramaiah: ರಾಜ್ಯಕ್ಕೆ ಅಕ್ಕಿಗಾಗಿ ಮುಂದುವರಿದ ಜಟಾಪಟಿ, ಸಿಗದ ಕೇಂದ್ರ ಆಹಾರ ಸಚಿವ, ಅನ್ನಭಾಗ್ಯ ಫಲಾನುಭವಿಗಳು ಅತಂತ್ರ
ಪ್ರಯಾಣ ಸ್ಥಗಿತ
ಕಂಡಕ್ಟರ್‌ಗೆ ಯುವಕರ ಗುಂಪು ಥಳಿಸಿದ ಹಿನ್ನೆಲೆಯಲ್ಲಿ ಪ್ರಯಾಣವನ್ನು ಸ್ಥಗಿತ ಮಾಡಿದ ಆ ಬಸ್‌ನ ಸಾರಿಗೆ ಸಿಬ್ಬಂದಿ ಸೀದಾ ಬಸ್ ಅನ್ನು ಸ್ಥಳೀಯ ಪೊಲೀಸ್ ಠಾಣೆಗೆ ಚಲಾಯಿಸಿಕೊಂಡು ಹೋಗಿದ್ದರು. ಅಲ್ಲಿ ಕೆಲ ಕಾಲ ಪೊಲೀಸರ ಜತೆ ಮಾತನಾಡಿ, ದೂರು ನೀಡಿದ ಬಳಿಕ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.