ತುಮಕೂರು: ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಮೊದಲ ಭಾಗವಾದ “ಶಕ್ತಿ” ಯೋಜನೆಗೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಹಿಳೆಯರು ಇದರ ಸಂಪೂರ್ಣ ಲಾಭ ಪಡೆಯಲು ಪುಣ್ಯಕ್ಷೇತ್ರಗಳಿಗೆ ತಂಡೋಪ ತಂಡವಾಗಿ ಭೇಟಿ ನೀಡುತ್ತಿದ್ದಾರೆ. ಹೀಗೆ ಕೊಳ್ಳೇಗಾಲದಿಂದ ತುಮಕೂರಿನ ಗೊರವನಹಳ್ಳಿ ಮಹಾಲಕ್ಷ್ಮಿ ದರ್ಶನಕ್ಕೆ ಬಂದಿದ್ದ ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಚಾಲಕನೊಬ್ಬ ಅನಾಗರಿಕವಾಗಿ ವರ್ತಿಸಿದ್ದಾನೆ. ಈ ವಿಡಿಯೊ ವೈರಲ್ (Video Viral) ಆಗಿದೆ.
ಜೂನ್ 15ರಂದು ತುಮಕೂರಿನ ಕೊರಟಗೆರೆಯ ನಾಗೇನಹಳ್ಳಿ ಗೇಟ್ ಬಳಿ ಮಹಾಲಕ್ಷ್ಮಿ ದರ್ಶನ ಮುಗಿಸಿ ಐದಾರು ಮಹಿಳೆಯರು ಊರಿಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್ಸಿಗೆ ಕೈ ತೋರಿಸಿದರೂ, ಯಾವ ಬಸ್ ಚಾಲಕನು ಬಸ್ ನಿಲ್ಲಿಸಿಲ್ಲ.ಸಂಜೆಯಿಂದ ಎರಡು ತಾಸುಕಾದರೂ ಯಾವ ಬಸ್ ನಿಲ್ಲಿಸುತ್ತಿಲ್ಲ. ಹೀಗಾಗಿ ಮಹಿಳೆಯರು ಬಸ್‌ವೊಂದನ್ನು ತಡೆಯಲು ಮುಂದಾಗಿದ್ದರು.
ಈ ವೇಳೆ ಚಾಲಕ ಕಲೆಕ್ಷನ್ ಆಗಲ್ಲ ಎಂದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆಯರು ಚಾಲಕನನ್ನು ಪ್ರಶ್ನಿಸಲು ಮುಂದಾಗಿದ್ದಾರೆ. ಆಗ ಏಕಾಏಕಿ ಚಾಲಕ ಮಹಿಳಾ ಪ್ರಯಾಣಿಕರತ್ತ ಬಸ್ಸನ್ನು ಚಲಾಯಿಸಿದ್ದಾನೆ. ಪುಟ್ಟ ಕಂದಮ್ಮನನ್ನು ಎತ್ತಿಕೊಂಡು ನಿಂತಿದ್ದ ಮಹಿಳೆಯನ್ನು ಕಂಡರೂ ಚಾಲಕನ ಮನಸ್ಸು ಕರಗಿಲ್ಲ. ಸ್ಥಳೀಯರೊಬ್ಬರು ಇದನ್ನು ರೆಕಾರ್ಡ್ ಮಾಡಿಕೊಂಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸಾರಿಗೆ ಬಸ್ ಚಾಲಕನ ಅನಾಗರಿಕ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ತಹಸೀಲ್ದಾರ್ ಮೊರೆ ಹೋದ ಮಹಿಳೆಯರು
ಹೀಗೆ ಬಸ್‌ಗಾಗಿ ಕಾದು ಸುಸ್ತಾದ ಮಹಿಳೆಯರು ಕೊನೆಗೆ ತಹಸೀಲ್ದಾರ್ ಬಳಿ ಹೋಗಿದ್ದಾರೆ. ನಡೆದ ಎಲ್ಲ ಘಟನೆಯನ್ನು ವಿವರಿಸಿ, ಚಾಲಕನ ವರ್ತನೆಗೆ ಕಿಡಿಕಾರಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಮುನಿಶಾಮಿ ರೆಡ್ಡಿ ಭೇಟಿ ನೀಡಿ ಮಹಿಳೆಯರನ್ನು ಸಮಾಧಾನಿಸಿ ಬಸ್ ಹತ್ತಿಸಿ ಕಳುಹಿಸಿದ್ದಾರೆ.
ಚಾಲಕನಿಗೆ ಎಚ್ಚರಿಕೆ ಕೊಟ್ಟ ಅನ್ಬುಕುಮಾರ್
ನಿಗಮದ ಚಾಲಕರೊಬ್ಬರು ಮಹಿಳಾ ಪ್ರಯಾಣಿಕರತ್ತ ಬಸ್ಸನ್ನು ಚಲಾಯಿಸಿದರು ಎಂದು ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಕೆಎಸ್‌ಆರ್‌ಟಿಸಿ ಎಂಡಿ ಅನ್ಬುಕುಮಾರ್ ವಿಷಾಧ ವ್ಯಕ್ತಪಡಿಸಿದ್ದಾರೆ. ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದ್ದು, ಚಾಲನಾ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ: Free Bus Service : ಟಿಕೆಟ್ ಬುಕಿಂಗ್‌ಗೆ ಮಹಿಳೆಯರ ಮೇಲಾಟ; KSRTC ಸರ್ವರೇ ಡೌನ್!
ನಿಗಮದ ಹಿರಿಯ ಅಧಿಕಾರಿಗಳಿಗೆ ವಿಭಾಗಗಳಿಗೆ ಉಸ್ತುವಾರಿಗೆ ಕಳುಹಿಸಿ, ಚಾಲನಾ ಸಿಬ್ಬಂದಿಗೆ ಈ ಬಗ್ಗೆ ಮತ್ತಷ್ಟು ಅರಿವು ಮತ್ತು ಜಾಗೃತಿ ಮೂಡಿಸಲಾಗುವುದು. ಮಹಿಳಾ ಪ್ರಯಾಣಿಕರೊಂದಿಗೆ ಸೌಹಾರ್ದತೆಯಿಂದ ಸ್ಪಂದಿಸಲು ತಿಳುವಳಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ