ಚಿತ್ರದುರ್ಗ: ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬ ಬರಹ ಕೇವಲ ಶಾಲಾ-ಕಾಲೇಜಿನ ಬೋರ್ಡ್‌ನಲ್ಲಿ ಅಷ್ಟೇ ಸೀಮಿತವಾಗಿದೆ. ಜ್ಞಾನ ದೇಗುಲದಿಂದ ಹೊರಗೆ ಹೋಗಬೇಕು ಎಂದರೆ ಕೈನಲ್ಲಿ ಹಣ ಹಿಡಿದುಕೊಂಡೆ ಒಳಗೆ ಹೋಗಬೇಕು. ಸರ್ಕಾರಿ ಕಚೇರಿಯಲ್ಲಿ ಕಾಣುತ್ತಿದ್ದ ಲಂಚದ ಪ್ರಕರಣಗಳು ಈಗ ಸರ್ಕಾರಿ ಶಾಲಾ-ಕಾಲೇಜಿಗೂ ಕಾಲಿಟ್ಟಿದೆ. ಕಾಲೇಜು ವಿದ್ಯಾರ್ಥಿನಿಯರಿಗೆ ಟಿ.ಸಿ ಪ್ರಮಾಣ ಪತ್ರ (Transfer Certificate) ನೀಡಲು ಸರ್ಕಾರಿ ಕಾಲೇಜು ಸಿಬ್ಬಂದಿ ನೂರು ರೂಪಾಯಿ ಲಂಚ ಪಡೆದಿರುವ ವಿಡಿಯೊ ವೈರಲ್ ಆಗಿದೆ.
ಚಿತ್ರದುರ್ಗ ನಗರದ ಬಾಲಕಿಯರ ಸರ್ಕಾರಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪಿಯುಸಿ ಪಾಸ್ ಆಗಿ ಕಾಲೇಜು ಬದಲಾವಣೆಗಾಗಿ ವಿದ್ಯಾರ್ಥಿನಿಯರು ಟಿಸಿ ಕೊಡಿ ಎಂದು ಕೇಳಿದ್ದಾರೆ. ಕಾಲೇಜು ಸಿಬ್ಬಂದಿ ಎಸ್. ಬಿ ಬೂದಿಹಾಳ ಎಂಬಾತ ಪ್ರತಿಯೊಬ್ಬ ವಿದ್ಯಾರ್ಥಿನಿಯರಿಂದ ನೂರು ರೂಪಾಯಿ ಹಣ ಪಡೆದು ಟಿಸಿ ನೀಡಿದ್ದಾರೆ. ಎಸ್. ಬಿ ಬೂದಿಹಾಳ ಲಂಚ ಪಡೆಯುತ್ತಿರುವ ದೃಶ್ಯವನ್ನು ಕಾನೂನು ವಿದ್ಯಾರ್ಥಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಟಿಸಿ ಬೇಕಾದರೆ ಹಣ ಕೊಡಿ ಎಂದು ಆವಾಜ್ ಹಾಕಿದ್ದು, ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಪೋಷಕರ ಮೇಲೆ ಗರಂ ಆಗಿದ್ದಾನೆ. ಸಿಬ್ಬಂದಿಯ ನಡೆಗೆ ಪೋಷಕರು ಹಾಗೂ ವಿದ್ಯಾರ್ಥಿನಿಯರು ಆಕ್ರೋಶ ಹೊರಹಾಕಿದ್ದು, ಕೂಡಲೇ ಲಂಚ ಪಡೆದ ಸಿಬ್ಬಂದಿ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ. ಇನ್ನು ಈ ವಿಷಯ ತಿಳಿದು ಕಾಲೇಜಿಗೆ ವಿಸ್ತಾರ ನ್ಯೂಸ್ ವರದಿಗಾರರು ಭೇಟಿ ಕೊಟ್ಟಾಗ, ಕ್ಯಾಮೆರಾ ಕಂಡು ತಕ್ಷಣ ಲಂಚ ಪಡೆಯುತ್ತಿದ್ದ ಎಸ್. ಬಿ.ಬೂದಿಹಾಳ ಕಾಲೇಜಿನಿಂದ ಕಾಲ್ಕಿತ್ತಿದ್ದಾರೆ.
ಇದನ್ನೂ ಓದಿ: Viral News: ಅಜ್ಜಿ ಸತ್ತಳೆಂದು ಮಣ್ಣು ಮಾಡಲು ಹೊರಟರೆ, ಶವಪೆಟ್ಟಿಗೆಯಲ್ಲಿ ಎದ್ದು ಕುಳಿತಳು!
ಶಾಲಾ-ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಟಿಸಿ ನೀಡಲು ವಿಳಂಬ ಮಾಡುವಂತಿಲ್ಲ ಜತೆಗೆ ಇದಕ್ಕಾಗಿ ಶುಲ್ಕವನ್ನು ಪಡೆಯುವಂತಿಲ್ಲ. ಆದರೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರ ಮೇಲೆ ಕಾಲೇಜು ಸಿಬ್ಬಂದಿ ಅಂದಾ ದರ್ಬಾರ್‌ಗೆ ಗ್ರಾಮಸ್ಥರು ಕಿಡಿಕಾರಿದ್ದಾರೆ. ಆರ್ಥಿಕವಾಗಿ ಸಂಕಷ್ಟ ಇರುವುದರಿಂದಲೇ ಮಧ್ಯಮ ವರ್ಗದವರು, ಬಡವರ ಮಕ್ಕಳು ದೊಡ್ಡ ದೊಡ್ಡ ಕಾಲೇಜಿನಲ್ಲಿ ಓದಿಸಲು ಆಗದೆ ಸರ್ಕಾರಿ ಕಾಲೇಜಿಗೆ ಕಳುಹಿಸುತ್ತಾರೆ. ಆದರೆ ಇಲ್ಲೂ ಲಂಚ ಕೇಳುತ್ತಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ