ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ “ಶಕ್ತಿ”ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಮಹಿಳೆಯರು ಅತ್ಯುತ್ಸಾಹದಿಂದ ಬಸ್ ಏರುತ್ತಿದ್ದಾರೆ. ಆದರೆ, ಈಗ ಕೆಲವು ಕಡೆ ಸಾರಿಗೆ ಸಿಬ್ಬಂದಿಗೆ ಸಂಕಷ್ಟ ತಂದೊಡ್ಡಿದೆ. ಜತೆಗೆ ಎಲ್ಲ ಕಡೆಯೂ ರಶ್.. ರಶ್.. ಎಂಬ ಸ್ಥಿತಿ ನಿರ್ಮಾಣ ಆಗಿದೆ. ಈಚೆಗಷ್ಟೇ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗುವ ಬಸ್‌ನಲ್ಲಿ ಮಹಿಳೆಯರು ಬಡಿದಾಡಿಕೊಂಡಿದ್ದರು. ಇನ್ನು ಮಂಡ್ಯ, ಚಾಮರಾಜನಗರದಲ್ಲಿ ಬಸ್ ಡೋರ್ ಅನ್ನೇ ಕಿತ್ತು ಹಾಕಿದ್ದರು. ಈಗ ಚಿಕ್ಕಬಳ್ಳಾಪುರದಲ್ಲಿ ಬಸ್ ರಶ್ ಇದ್ದ ಕಾರಣ ಡ್ರೈವರ್ ಸೀಟಿನ ಬಾಗಿಲಿನಿಂದ ಮಹಿಳೆಯರು ಹತ್ತಿದ್ದಾರೆ! ಈ ವಿಡಿಯೊ ಈಗ ವೈರಲ್ (Video Viral) ಆಗಿದೆ.
ಚಿಂತಾಮಣಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಶಕ್ತಿ ಯೋಜನೆ ಬಂದ ಮೇಲೆ ಮಹಿಳೆಯರ ಸಂಚಾರ ಹೆಚ್ಚಾಗಿದೆ. ಚಿಂತಾಮಣಿ ಬಸ್ ನಿಲ್ದಾಣಕ್ಕೆ ಬಸ್ ಬರುತ್ತಿದ್ದಂತೆ ಜನರು ಓಡೋಡಿ ಬಂದಿದ್ದಾರೆ. ಎಲ್ಲರಿಗೂ ಸೀಟು ಹಿಡಿಯುವ ತವಕ. ಹೀಗಾಗಿ ಕೆಲವರು ಕಿಟಕಿ ಒಳಗಿನಿಂದ ಸೀಟ್ ಮೇಲೆ ತಮ್ಮ ಬ್ಯಾಗ್, ಕರ್ಚೀಫ್‌ಗಳನ್ನು ಒಗೆದರೆ, ಮತ್ತೆ ಕೆಲವರು ಡೋರ್ ಮೂಲಕ ಬೇಗ ಹೋಗಿ ಸೀಟ್ ಹಿಡಿಯುವ ದಾವಂತದಲ್ಲಿದ್ದರು. ಆದರೆ, ಮತ್ತೆ ಕೆಲವು ಮಹಿಳೆಯರು ಹೆಚ್ಚಿಗೆ ಸ್ಮಾರ್ಟ್ ಆಗಲು ಹೋಗಿ ಹೀಗಿ ಮಾಡಿದ್ದಾರೆ.
ಇನ್ನು ಬಸ್‌ನ ಮೇನ್ ಡೋರ್‌ನಿಂದ ಹೋದರೆ ಪ್ರಯೋಜನ ಇಲ್ಲ ಎಂದು ಲೆಕ್ಕ ಹಾಕಿದ ಕೆಲವು ಮಹಿಳೆಯರು ಸೀದಾ ಡ್ರೈವರ್ ಸೀಟ್ ಬಳಿಗೆ ಓಡಿದ್ದಾರೆ. ಅಲ್ಲಿ ಹೋದವರೇ ಡೋರ್ ಓಪನ್ ಮಾಡಿ ಅದರಿಂದ ಹತ್ತಲಾರಂಭಿಸಿದ್ದಾರೆ. ಹಾಗೂ ಹೀಗೂ ನಾಲ್ಕೈದು ಮಹಿಳೆಯರು ಅದರ ಮೂಲಕ ನುಗ್ಗಿಬಿಟ್ಟಿದ್ದಾರೆ. ಈ ವಿಚಾರ ತಿಳಿದ ಬಸ್ ನಿರ್ವಾಹಕ ಸೀದಾ ಬಂದು ಬೈದಿದ್ದು, ಮತ್ತೆ ಹತ್ತಲು ಮುಂದಾದ ಕೆಲವರನ್ನು ಕೆಳಗೆ ಇಳಿಸಿ ಕಳಿಸಿದ್ದಾರೆ.
ಚಿಂತಾಮಣಿಯಿಂದ ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಿಗೆ ತೆರಳುವ ಬಸ್‌ಗಳಿಗೆ ಭಾರಿ ಬೇಡಿಕೆ ಬಂದಿದ್ದು, ಸಿಕ್ಕ ಸಿಕ್ಕ ಬಸ್‌ಗಳನ್ನು ಜನರು ಹತ್ತುತ್ತಿದ್ದಾರೆ. ಹೀಗಾಗಿ ಬಹುತೇಕ ಎಲ್ಲ ಬಸ್‌ಗಳು ತುಂಬಿ ತುಳುಕುತ್ತಿವೆ. ಇನ್ನು ಪ್ರಯಾಣಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ನೋಡಿ ಸ್ವಾಮಿ ನಾವ್ ಇರೋದೇ ಹೀಗೆ! ಈ ಮಹಿಳೆಯರು ಬಸ್ ಹತ್ತಿದ್ದು ಹೇಗೆ? ಇಲ್ಲಿದೆ ವಿಡಿಯೊ!
ಇದನ್ನೂ ಓದಿ: Video Viral: ಜಗದ ಪರಿವೇ ಇಲ್ಲದೆ ರೋಡಿನ ಮಧ್ಯೆ ಬಂದಳು; ವೇಗವಾಗಿ ಬಂದ ಬಸ್ ಇನ್ನೇನು ಗುದ್ದೇ ಬಿಡ್ತು?
ಬೆಳಗಾವಿಯಲ್ಲಿ ಬಸ್ ಹತ್ತಲು ಸರತಿ ಸಾಲು! ಇಲ್ಲಿದೆ ವಿಡಿಯೊ
ಇನ್ನು 15-20 ದಿನದಲ್ಲಿ ಜನಸಂದಣಿ ತಗ್ಗಬಹುದು- ರಾಮಲಿಂಗಾ ರೆಡ್ಡಿ
ಹೊಸತಾಗಿ ಯೋಜನೆ ಜಾರಿಯಾಗಿರುವುದರಿಂದ ಮಹಿಳೆಯರು ಹುರುಪಿನಿಂದ ಸಂಚಾರ ಮಾಡುತ್ತಿದ್ದಾರೆ. ಇನ್ನು 15-20 ದಿನದಲ್ಲಿ ಜನಸಂದಣಿ ತಗ್ಗಬಹುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವಿಸ್ತಾರ ನ್ಯೂಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಅವರು ಸಾರಿಗೆ ಇಲಾಖೆಗೆ ಸಂಬಂಧಪಟ್ಟಂತೆ ಇಲಾಖೆಯ ಹಾಗೂ ಜನರ ಸಮಸ್ಯೆ, ದೂರುಗಳ ಬಗ್ಗೆ ವಿಸ್ತಾರ ನ್ಯೂಸ್ ಏರ್ಪಡಿಸಿದ್ದ “ಹಲೋ ಸಚಿವರೇ” ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಪ್ರತಿಕ್ರಿಯೆ ನೀಡಿದ್ದರು.