Site icon Vistara News

Video Viral: 4 ನೈಂಟಿ ಕೊಡುವೆನೆಂದು ಹಣ ಪಡೆದು ಎರಡೇ ಕೊಟ್ಟವನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಟ್ಟಿದ ನಾರಿಯರು!

Women thrash man for not giving alcohol bottle in koppala

ಕೊಪ್ಪಳ: ಎಣ್ಣೆಯ ವಿಷ್ಯ ಬೇಡವೋ ಶಿಷ್ಯ! ಎಂಬಂತಿದೆ ಈ ವಿಷಯ. ಮದ್ಯದ ಅಮಲಿಗೆ ದಾಸರಾದವರು ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಸುಳ್ಳು ಹೇಳಲೂ ಇವರು ನಿಸ್ಸೀಮರು. ಒಟ್ಟಿನಲ್ಲಿ ತಮಗೆ ಬೇಕೆಂದ ಸಮಯದಲ್ಲಿ ಕುಡಿದು ಮಜಾ ಉಡಾಯಿಸಿದರೆ ಅಷ್ಟೇ ಸಾಕು. ಇನ್ನು ಕೆಲವರು ಬೇರೆ ವಿಷಯದಲ್ಲಿ ಅನ್ಯಾಯವಾದರೂ ಸಹಿಸಿಯಾರು, ಕುಡಿತದ ವಿಷಯದಲ್ಲಿ ಹಾಗಾದರೆ ಮಾತ್ರ ಪಿತ್ತ ನೆತ್ತಿಗೇರುತ್ತದೆ. ಇಲ್ಲಾಗಿದ್ದೂ ಅದೇ ಕಥೆ. ಇಲ್ಲೊಬ್ಬ ಮಹಾರಾಯ 4 ಮದ್ಯದ ಬಾಟಲಿಯನ್ನು ತಂದುಕೊಡುತ್ತೇನೆ ಎಂದು ಹೇಳಿ ಮಹಿಳೆಯರಿಂದ ಹಣ ಪಡೆದು ಮೋಸ ಮಾಡಿದ್ದಕ್ಕೆ ಅವರಿಂದ ಹೊಡೆತ ತಿಂದಿದ್ದಾನೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೊ ವೈರಲ್‌ (Video Viral) ಆಗಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಮೂವರು ಮಹಿಳೆಯರಿಗೆ ಮದ್ಯ ಸೇವನೆ ಮಾಡಬೇಕು ಎಂದು ಆಸೆಯಾಗಿದೆ. ಆದರೆ, ತಾವು ಬಾರ್‌ಗೆ ಹೋಗಿ ಖರೀದಿ ಮಾಡಿ ತರುವುದು ಅಷ್ಟಾಗಿ ಸರಿ ಕಾಣಲಿಲ್ಲ. ಪರಿಚಯದವರೋ, ನೆಂಟರಿಷ್ಟರೋ ನೋಡಿದರೆ ಸರಿ ಬಾರದು ಎಂದು ಅಂದುಕೊಂಡು ರಸ್ತೆಯಲ್ಲಿ ನಿಂತು ಯೋಚಿಸುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಒಬ್ಬ ಕುಡುಕ ಮಹಾಶಯ ಬಂದಿದ್ದಾನೆ.

ಇದನ್ನೂ ಓದಿ: Weather Report: ಉತ್ತರದಿಂದ ದಕ್ಷಿಣಕ್ಕೆ ಮಳೆ ಪ್ರದಕ್ಷಿಣೆ; ಮೈಸೂರಲ್ಲಿ ನೀರುಪಾಲಾದ ಜಮೀನು

ಕುಡುಕನಿಗೆ ಜೋರು ಮಾಡುತ್ತಿರುವ ಮಹಿಳೆಯರು

ಆತನನ್ನು ನೋಡಿದ ಮಹಿಳೆಯರಿಗೆ ಒಂದು ಯೋಚನೆ ಬಂದಿದೆ. ಈತನಿಗೆ ಹಣ ಕೊಟ್ಟು ಕಳಿಸಿದರೆ ಮದ್ಯವನ್ನು ತಂದು ಕೊಡುತ್ತಾನೆ. ಹಾಗಾಗಿ ತಾವು ಅಲ್ಲಿಗೆ ಹೋಗುವ ಪ್ರಮೇಯವೂ ತಪ್ಪುತ್ತದೆ ಎಂದು ಐಡಿಯಾ ಮಾಡಿ ದುಡ್ಡು ಕೊಟ್ಟು ನಾಲ್ಕು ನೈಂಟಿ ಬಾಟಲಿಯನ್ನು ತಂದುಕೊಡುವಂತೆ ಹೇಳಿದ್ದಾರೆ. ಆತನೋ ಬಹಳ ಖುಷಿಯಿಂದ ಹಣ ಪಡೆದು ಹೋಗಿದ್ದಾನೆ.

ಹೋದವನು ಪತ್ತೆಯೇ ಇಲ್ಲ!

ಹೀಗೆ ನೈಂಟಿಗಾಗಿ ಹಣ ಕೊಟ್ಟು ದಾರಿಯಲ್ಲಿ ಕಾದು ಕುಳಿತಿದ್ದ ಮಹಿಳೆಯರಿಗೆ ಅರ್ಧ ಗಂಟೆಯಾದರೂ ಆಸಾಮಿ ಪತ್ತೆಯೇ ಇರದಿರುವುದು ಗಾಬರಿ ಮೂಡಿಸಿದೆ. ಅರ‍್ರೇ, ಈತ ಎಲ್ಲಿ ಹೋದ? ಹಣ ತೆಗೆದುಕೊಂಡು ಓಡಿ ಹೋದನಾ? ಎಂದು ಅನ್ನಿಸಿ ಆತನನ್ನು ಹುಡುಕಿಕೊಂಡು ಬಾರ್‌ಗೇ ಬಂದಿದ್ದಾರೆ. ಅಲ್ಲಿ ಆಸಾಮಿ ಆರಾಮವಾಗಿ ಓಡಾಡಿಕೊಂಡಿದ್ದ. ಕೊನೆಗೆ ಹಿಡಿದು ಕೇಳಿದರೆ ತನ್ನ ಬಳಿ ಇದ್ದ ಎರಡು ಮದ್ಯದ ಬಾಟಲಿಯನ್ನು ಕೊಟ್ಟಿದ್ದಾನೆ.

ಸಿಟ್ಟಿಗೆದ್ದು ಪೆಟ್ಟು ಕೊಟ್ಟ ಮಹಿಳೆಯರು

ತಾವು ಹಣ ಕೊಟ್ಟಿದ್ದು ನಾಲ್ಕು ನೈಂಟಿ ತರಲು. ನೀನು ಎರಡೇ ಬಾಟಲಿಯನ್ನು ತಂದುಕೊಟ್ಟಿದ್ದೀಯ. ಇನ್ನೆರೆಡು ಎಲ್ಲಿ ಎಂದು ಕೇಳಿದ್ದಾರೆ. ಆದರೆ, ಅಷ್ಟರೊಳಗೆ ಆತ ಎರಡು ಬಾಟಲಿ ಸಾರಾಯಿಯನ್ನು ತಾನೇ ಕುಡಿದು ಬಿಟ್ಟಿದ್ದ. ಇದನ್ನು ಹೇಳದೇ, ಏನೇನೋ ಸಬೂಬು ಹೇಳಲು ಹೋಗಿದ್ದಾನೆ. ಇದನ್ನು ಸಹಿಸದ ಮಹಿಳೆಯರು ಆತನನ್ನು ಸುತ್ತುವರಿದು ಹಿಗ್ಗಾಮುಗ್ಗ ಜಾಡಿಸಿದ್ದಾರೆ, ಎಳೆದಾಡಿದ್ದಾರೆ. ಒಂದು ಹಂತದಲ್ಲಿ ತಾಳ್ಮೆ ಕೆಟ್ಟಿದ್ದು, ಆತನಿಗೆ ಬಾರಿಸಿದ್ದಾರೆ.

ಮದ್ಯದ ವಿಷಯಕ್ಕೆ ಮಹಿಳೆಯರಿಂದ ಏಟು ತಿಂದ ಮಹಾಪುರುಷ

ಇದನ್ನೂ ಓದಿ: Video Viral: ಮುಗಿಯದ ʼಶಕ್ತಿʼ ಹುಚ್ಚಾಟ; ಸಾರಿಗೆ ಸಿಬ್ಬಂದಿಗೆ ಪೀಕಲಾಟ! ಸೀಟು ಇಲ್ಲ ಎಂದ ಕಂಡಕ್ಟರ್‌ಗೆ ಏಟು!

ನಾಗರಿಕರ ಮಧ್ಯಪ್ರವೇಶ

ಈ ಗಲಾಟೆ ನೋಡಿದ ನಾಗರಿಕರು ಮಧ್ಯಪ್ರವೇಶಿಸಿ ಮದ್ಯದ ಗಲಾಟೆಯನ್ನು ಬಗೆಹರಿಸಿದ್ದಾರೆ. ಮಹಿಳೆಯರನ್ನು ಅತ್ತ ತಳ್ಳಿ ಅವರನ್ನು ಬೇರೆಡೆಗೆ ಕಳುಹಿಸಿದ್ದಾರೆ. ಈತನನ್ನೂ ಬಾಯಿ ಮುಚ್ಚಿಕೊಂಡು ಅಲ್ಲಿಂದ ಕಾಲ್ಕೀಳುವಂತೆ ಹೇಳಿದ್ದಾರೆ. ಈ ಎಲ್ಲ ದೃಶ್ಯಾವಳಿಗಳೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

Exit mobile version