Site icon Vistara News

Vijay Sankalp Yatre: ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಸಂಪೂರ್ಣ ನೆಲಸಮ ಮಾಡುವುದೇ ನನ್ನ ಗುರಿ: ಯಡಿಯೂರಪ್ಪ

Vijay Sankalp Yatra sagara Yediyurappa

#image_title

ಸಾಗರ: “ನನಗೆ ಬದುಕಿನಲ್ಲಿ ಏನೂ ಆಸೆ ಇಲ್ಲ. ಪಕ್ಷ ನನಗೆ ಎಲ್ಲವನ್ನೂ ಕೊಟ್ಟಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ (Assembly elections) ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಸಂಪೂರ್ಣ ನೆಲಸಮ ಮಾಡಬೇಕು ಎನ್ನುವುದು ನನ್ನ ಬಯಕೆಯಾಗಿದೆ” ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಇಲ್ಲಿನ ನೆಹರೂ ಮೈದಾನದಲ್ಲಿ ಶುಕ್ರವಾರ (ಮಾ.17) ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಕೇಂದ್ರದಲ್ಲಿ ನರೇಂದ್ರ ಮೋದಿಯವರು, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಾರೂ ಬೊಟ್ಟು ಮಾಡಿ ತೋರಿಸದಂತೆ ಆಡಳಿತ ನಡೆಸುತ್ತಿದ್ದಾರೆ” ಎಂದು ಹೇಳಿದರು.

“ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಎರಡೂವರೆ ತಿಂಗಳಿನಿಂದ ಪ್ರವಾಸ ಮಾಡುತ್ತಿದ್ದೇನೆ. ವಿಜಯ ಸಂಕಲ್ಪ ಯಾತ್ರೆ ನಡೆದ ಎಲ್ಲ ಕಡೆಯೂ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಹಣ, ಹೆಂಡ, ತೋಳ್ಬಲದಿಂದ, ಜಾತಿ ವಿಷಬೀಜ ಬಿತ್ತಿ ಅಧಿಕಾರ ಹಿಡಿಯುತ್ತಿದ್ದ ಕಾಂಗ್ರೆಸ್ ಕನಸು ನನಸಾಗುವುದಿಲ್ಲ. ಕಾಂಗ್ರೆಸ್ ಮುಕ್ತ ಭಾರತವಾಗುವ ದಿನ ದೂರ ಇಲ್ಲ” ಎಂದು ಹೇಳಿದರು.

“ಈ ಬಾರಿ ರಾಜ್ಯದಲ್ಲಿ ಬಿಜೆಪಿ 140ಕ್ಕೂ ಹೆಚ್ಚು ಸ್ಥಾನದಲ್ಲಿ ಜಯಗಳಿಸಿ ಮತ್ತೊಮ್ಮೆ ಅಧಿಕಾರಕ್ಕೇರಲಿದೆ. ಸಾಗರ ಕ್ಷೇತ್ರದಲ್ಲಿ ಶಾಸಕ ಹರತಾಳು ಹಾಲಪ್ಪ ಸುಮಾರು 2051 ಕೋಟಿ ರೂ. ಅನುದಾನ ತಂದು ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮೂಲಕ ಅಭಿವೃದ್ಧಿಪರ ಆಡಳಿತಕ್ಕೆ ಬೆಂಬಲ ನೀಡಬೇಕು” ಎಂದು ಮನವಿ ಮಾಡಿದರು.

ಇದನ್ನೂ ಓದಿ: Ugadi Kids Ethnicwear Fashion: ಯುಗಾದಿ ಹಬ್ಬಕ್ಕೆ ಎಂಟ್ರಿ ಕೊಟ್ಟ ಚಿಣ್ಣರ ಟ್ರೆಡಿಷನಲ್‌ವೇರ್ಸ್

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾತನಾಡಿ, “ದೇಶದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುವ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ ಪಕ್ಷದವರು ಶೇ. 40 ಕಮಿಷನ್ ಎಂದು ಭಾಷಣ ಹೊಡೆಯುತ್ತಾರೆ. ಕಮಿಷನ್ ಪಡೆದಿದ್ದಕ್ಕೆ ಒಂದು ದಾಖಲೆ ಒದಗಿಸಲು ಅವರ ಕೈನಿಂದ ಸಾಧ್ಯವಾಗಿಲ್ಲ. ಅರ್ಕಾವತಿಯಲ್ಲಿ 800 ಎಕರೆ ಡಿನೋಟಿಫೈ ಮಾಡಿ 8000 ಕೋಟಿ ರೂ. ಲೂಟಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ವರದಿಯಲ್ಲಿ ಸಾಬೀತಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದು ಬಂದದ್ದು ಜನರಿಗೆ ಗೊತ್ತಿದೆ. ಕಾಂಗ್ರೆಸ್ ಪಕ್ಷವನ್ನು ರಾಜ್ಯದ ಜನರು ನಂಬುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಸಹ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಕಾಂಗ್ರೆಸ್‍ನಿಂದ ಸಾಧ್ಯವಿಲ್ಲ” ಎಂದು ಹೇಳಿದರು.

ಇದನ್ನೂ ಓದಿ: Sleep Awareness Week: ನಿದ್ದೆಯ ಹೊತ್ತಿನಲ್ಲಿ ಜಾಗೃತರಾಗಿ ಇರಬೇಡಿ!

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, “ಕಳೆದ ಆರೇಳು ದಶಕಗಳಿಂದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಹಕ್ಕು ಪತ್ರ ಕೊಡಲು ವಿಫಲವಾಗಿರುವ ಕಾಂಗ್ರೆಸ್ ಪಕ್ಷ ಬಿಜೆಪಿ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ಕೊಡಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತಿದೆ. ಲೋಕಸಭೆಯಲ್ಲಿ ಕನಿಷ್ಠ ವಿರೋಧ ಪಕ್ಷ ಪಡೆಯುವ ಸ್ಥಾನವನ್ನು ಹೊಂದಿರದ ಕಾಂಗ್ರೆಸ್ ಪಕ್ಷ ಮನೆ ಮನೆಗೆ ತೆರಳಿ ಗ್ಯಾರೆಂಟಿ ಕಾರ್ಡ್ ಕೊಡುತ್ತಿದೆ. ಕಾಂಗ್ರೆಸ್ ಪಕ್ಷದ ವಾರೆಂಟಿ ಮುಗಿದಿದೆ. ಇನ್ನು ಅವರು ಕೊಡುವ ಗ್ಯಾರೆಂಟಿ ಕಾರ್ಡ್‍ಗೆ ಯಾವ ಬೆಲೆ ಇದೆ. ವಾರೆಂಟಿ ಎ‌ಕ್ಸ್‌ಪೈರ್ ಆಗಿರುವ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಮನೆಗೆ ಕಳುಹಿಸುತ್ತಾರೆ” ಎಂದು ಹೇಳಿದರು.

ಶಾಸಕ ಹರತಾಳು ಹಾಲಪ್ಪ ಮಾತನಾಡಿ, “ಐದು ವರ್ಷಗಳ ಹಿಂದೆ ನಾವು ಒಂದಷ್ಟು ಭರವಸೆಯೊಂದಿಗೆ ಚುನಾವಣೆ ಕಣಕ್ಕೆ ಇಳಿದಿದ್ದೆವು. ಕೊಟ್ಟ ಭರವಸೆಯಂತೆ ಗಣಪತಿ ಕೆರೆಯನ್ನು ಅಭಿವೃದ್ಧಿ ಮಾಡಿದ್ದೇವೆ. ಸಂಸದರ ಸಹಕಾರದಿಂದ ಬಿ.ಎಚ್.ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ಸೊರಬ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಪಕ್ಷಾತೀತ ಮತ್ತು ಜಾತ್ಯತೀತವಾಗಿ 888 ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. 423 ಕೋಟಿ ರೂ. ವೆಚ್ಚದಲ್ಲಿ ತುಮರಿ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಸುಂದರ ಸಾಗರ, ಆರೋಗ್ಯ ಸಾಗರ, ವಿದ್ಯಾ ಸಾಗರ ನಿರ್ಮಾಣದ ಉದ್ದೇಶವನ್ನು ಹೊಂದಲಾಗಿದೆ. ಇತಿಹಾಸ ಪ್ರಸಿದ್ಧವಾದ ಮಹಾಗಣಪತಿ ದೇವಸ್ಥಾನವನ್ನು 25 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಸಂಕಲ್ಪವನ್ನು ಕೈಗೊಳ್ಳಲಾಗಿದೆ” ಎಂದರು.

ಇದನ್ನೂ ಓದಿ: Karnataka Elections : ಕೋಲಾರ ಸೇಫಲ್ಲ ಎಂದ ರಾಹುಲ್‌; ಗೆಲ್ಲಿಸ್ತೀವಿ ಎಂದ ಕೈ ನಾಯಕರು, ಸೋಮವಾರ ಫೈನಲ್‌ ಎಂದ ಸಿದ್ದು

ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಮಾತನಾಡಿದರು. ಎಂಎಡಿಬಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಮಡಿವಾಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ರಾಜು ತಲ್ಲೂರು, ಮಧುರಾ ಶಿವಾನಂದ್, ವಿ.ಮಹೇಶ್, ಅರವಿಂದ ರಾಯ್ಕರ್, ಎಂ.ಹರನಾಥ ರಾವ್, ಚೇತನ ರಾಜ್ ಕಣ್ಣೂರು, ಯು.ಎಚ್.ರಾಮಪ್ಪ, ಕೆ.ಎನ್.ಶ್ರೀಧರ್, ನಾಗರಾಜ ಪೈ, ಪ್ರಸನ್ನ ಕೆರೆಕೈ, ಎಸ್.ದತ್ತಾತ್ರಿ, ಬಿ.ಸ್ವಾಮಿರಾವ್, ಕುಪೇಂದ್ರ ರೆಡ್ಡಿ ಇನ್ನಿತರರು ಹಾಜರಿದ್ದರು. ದಿವ್ಯಾ ಶ್ಯಾನಭಾಗ್ ಪ್ರಾರ್ಥಿಸಿದರು. ಕೆ.ಆರ್.ಗಣೇಶ ಪ್ರಸಾದ್ ಸ್ವಾಗತಿಸಿದರು. ಟಿ.ಡಿ.ಮೇಘರಾಜ್ ಪ್ರಾಸ್ತಾವಿಕ ಮಾತನಾಡಿದರು. ಲೋಕನಾಥ್ ಬಿಳಿಸಿರಿ ವಂದಿಸಿದರು. ಸಂತೋಷ್ ಶೇಟ್ ಮತ್ತು ಹು.ಭಾ.ಅಶೋಕ್ ನಿರೂಪಿಸಿದರು.

Exit mobile version