Site icon Vistara News

Vijay Sankalpa Yatre: ಮಾ.25ರಂದು ದಾವಣಗೆರೆಯಲ್ಲಿ ಮೋದಿ ಹವಾ; 10 ಲಕ್ಷ ಜನರ ನಿರೀಕ್ಷೆ

vijay sankalpa yatre concluding ceremony in davanagere

ಬೆಂಗಳೂರು: ಬಿಜೆಪಿ 4 ವಿಜಯ ಸಂಕಲ್ಪ ಯಾತ್ರೆಗಳು ಈಗಾಗಲೇ 151 ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಯಶಸ್ವಿಯಾಗಿ ಸಂಚರಿಸಿದ್ದು, ಮಾರ್ಚ್‌ 25ರಂದು ದಾವಣಗೆರೆಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಸುಮಾರು 10 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ವಿಜಯ ಸಂಕಲ್ಪ ಯಾತ್ರೆಯ ಸಹ ಸಂಚಾಲಕ ಎನ್‌. ರವಿಕುಮಾರ್‌ ತಿಳಿಸಿದ್ದಾರೆ.

ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರವಿಕುಮಾರ್‌, 24ರಂದು ದಾವಣಗೆರೆಯ ನಾಲ್ಕು ಕ್ಷೇತ್ರಗಳಲ್ಲಿ ರೋಡ್‌ ಶೋ ನಡೆಯಲಿದೆ. ಮಾರ್ಚ್‌ 25ರಂದು ಸಮಾರೋಪ ಕಾರ್ಯಕ್ರಮ ಇರಲಿದೆ. ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ. 10 ಲಕ್ಷಕ್ಕಿಂತ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಕಾಂಗ್ರೆಸ್‍ನದು ಪಂಕ್ಚರ್ ಯಾತ್ರೆ. ಅಲ್ಲಿ ಪ್ರಜೆಯೂ ಇಲ್ಲ; ಧ್ವನಿಯೂ ಇಲ್ಲ ಎಂದು ಟೀಕಿಸಿದರು.

ಬಿಜೆಪಿ 4 ವಿಜಯ ಸಂಕಲ್ಪ ಯಾತ್ರೆಗಳು ಈಗಾಗಲೇ 151 ವಿಧಾನಸಭಾ ಕ್ಷೇತ್ರಗಳಲ್ಲಿ ಈಗಾಗಲೇ ಯಶಸ್ವಿಯಾಗಿ ಸಂಚರಿಸಿವೆ. 3,745 ಕಿಮೀ ಉದ್ದದ ಯಾತ್ರೆ, ಸುಮಾರು 60 ಲಕ್ಷ ಜನರು ಭಾಗವಹಿಸಿದ್ದರು. ಈ ಪೈಕಿ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಸೇರಿದ್ದಾರೆ. 60 ಲಕ್ಷ ಜನರು ಯಾತ್ರೆಗೆ ಆಶೀರ್ವಾದ ಮಾಡಿದ್ದಾರೆ.

ಕೇಂದ್ರದ ನಾಯಕರಾದ ಅಮಿತ್ ಶಾ, ಜೆ.ಪಿ. ನಡ್ಡಾ, ರಾಜ್ಯದ ಯಡಿಯೂರಪ್ಪ, ಮುಖ್ಯಮಂತ್ರಿ, ಆರ್.ಅಶೋಕ್, ಗೋವಿಂದ ಕಾರಜೋಳ, ಈಶ್ವರಪ್ಪ, ಶ್ರೀರಾಮುಲು ಸೇರಿ ರಾಜ್ಯದ ಎಲ್ಲ ಪ್ರಮುಖರು ಸೇರಿ 45 ಜನ ನಾಯಕರು ಭಾಗವಹಿಸಿದ್ದಾರೆ; ಶಾಸಕರು, ಸಂಸದರು, ಸಚಿವರು, ಮಾಜಿ ಶಾಸಕರು, ಮೇಲ್ಮನೆ ಸದಸ್ಯರು ಸೇರಿ 335 ನಾಯಕರು ಭಾಗವಹಿಸಿದ್ದರು ಎಂದು ವಿವರಿಸಿದರು.

110 ರೋಡ್ ಷೋ ಮಾಡಿದ್ದೇವೆ. 41 ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗಿದೆ. 5 ಸಾವಿರದಿಂದ 40 ಸಾವಿರ ವರೆಗೆ ರೋಡ್ ಷೋದಲ್ಲಿ ಜನರು ಭಾಗವಹಿಸಿದ್ದರು ಎಂದು ತಿಳಿಸಿದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ, ಶಿಡ್ಲಘಟ್ಟ, ಗೌರಿಬಿದನೂರು ಕಡಿಮೆ ಜನ ಎಂದು ಭಾವಿಸಿದಲ್ಲಿ 10 ಸಾವಿರ, 15 ಸಾವಿರ ಜನರಿದ್ದರು. ಬಸವಕಲ್ಯಾಣದಲ್ಲಿ ಉದ್ಘಾಟನೆಗೆ 40 ಸಾವಿರ ಜನರು ಸೇರಿದ್ದರು ಎಂದರು.

ಎಲ್ಲ ಕಡೆ ಯಾತ್ರೆಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ದೇವಸ್ಥಾನ, ಮಠಗಳ, ದಲಿತ ಕಾಲೋನಿ ಭೇಟಿ ಸೇರಿ ಅನೇಕ ಚಟುವಟಿಕೆಗಳು ನಡೆಯುತ್ತಿವೆ. ಮಂಡ್ಯದ ಮೇಲುಕೋಟೆ, ಮದ್ದೂರು, ಮಂಡ್ಯ, ಹುಣಸೂರು ಮೊದಲಾದ ಕಡೆ ನಾವು ದುರ್ಬಲ ಎಂದು ಬೇರೆ ಪಕ್ಷಗಳು ಭಾವಿಸುವ ಕಡೆಗಳಲ್ಲಿ ಅತ್ಯಂತ ಯಶಸ್ವಿ ವಿಜಯ ಯಾತ್ರೆ ನಡೆದಿದೆ ಎಂದರು.

ಕಲ್ಯಾಣ ಕರ್ನಾಟಕದಲ್ಲಿ 3ನೇ ಯಾತ್ರೆಯಲ್ಲಿ ಎಲ್ಲೂ 5 ಸಾವಿರಕ್ಕಿಂತ ಕಡಿಮೆ ಜನರು ಇರಲೇ ಇಲ್ಲ. 41 ಯಾತ್ರೆಯಲ್ಲೂ ಭಾರಿ ಸ್ವಾಗತ ಸಿಕ್ಕಿದೆ. ಬೆಂಗಳೂರು ಯಾತ್ರೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ ಕಾರ್ಯಕ್ರಮ ನಡೆದಿದೆ. ಬಿಜೆಪಿ ಕಡಿಮೆ ಶಕ್ತಿ ಇರುವಲ್ಲಿ ಪ್ರಾಬಲ್ಯ ಹೆಚ್ಚಿಸುವ ಆಶಯವನ್ನು ಯಾತ್ರೆ ಈಡೇರಿಸಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ- ಹಳೆ ಮೈಸೂರು ಯಾತ್ರೆಗಳು ಅತ್ಯಂತ ಯಶಸ್ವಿಯಾಗಿ ಮುಂದುವರಿದಿವೆ. ಹೋಳಿ ಹಬ್ಬದ ಕಾರಣ ಯಾತ್ರೆ 3ಕ್ಕೆ 3 ದಿನ ರಜೆ ಕೊಟ್ಟಿದ್ದು, ಆ ಯಾತ್ರೆ ಇದೇ 20ರವರೆಗೆ ಮುಂದುವರಿಯಲಿದೆ. ತುಮಕೂರಿನಲ್ಲಿ 21ರಂದು ತುಮಕೂರು, ಗುಬ್ಬಿ, ತುಮಕೂರು ಗ್ರಾಮಾಂತರದಲ್ಲಿ ಯಾತ್ರೆ ಇರುತ್ತದೆ. 21ರವರೆಗೆ 224 ಕ್ಷೇತ್ರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೇವೆ. ಸಂಪೂರ್ಣ ಬಹುಮತದೊಂದಿಗೆ ಸರಕಾರ ರಚನೆಯ ಗುರಿ ಈಡೇರಲಿದೆ ಎಂದರು.

ಇದನ್ನೂ ಓದಿ: Fact Check: ಪ್ರಧಾನಿ ಮೋದಿ ನೊಬೆಲ್‌ ಶಾಂತಿ ಪ್ರಶಸ್ತಿಗೆ ಸ್ಪರ್ಧಿ ಎಂದು ನಾರ್ವೆಯ ತೊಜೆ ಹೇಳಿದ್ದು ನಿಜವೇ?

ಮಾರ್ಚ್ 1ರಿಂದ 3 ದಿನಗಳ ಕಾಲ ನಾವು ವಿಜಯ ಸಂಕಲ್ಪ ರಥ ಯಾತ್ರೆಯನ್ನು ಉದ್ಘಾಟಿಸಿದ್ದೇವೆ. ಮೊದಲನೇ ಯಾತ್ರೆ ಚಾಮರಾಜನಗರದ ಮಲೈ ಮಹದೇಶ್ವರ ಬೆಟ್ಟದಿಂದ ಆರಂಭವಾಗಿದ್ದು 15 ದಿನ ಪೂರೈಸಿದೆ. ಅದೇಥರ ಕಿತ್ತೂರು ರಾಣಿ ಚನ್ನಮ್ಮ ಮತ್ತು ನಂದಗಡದ ಸಂಗೊಳ್ಳಿ ಸಂಗೊಳ್ಳಿ ರಾಯಣ್ಣ ಅವರ ಹುತಾತ್ಮ ಸ್ಥಳದಿಂದ ಎರಡನೇ ಯಾತ್ರೆ ಆರಂಭವಾಗಿದ್ದು, 14 ದಿನಗಳಾಗಿದೆ ಎಂದರು.

ಯಾತ್ರೆ 3 ಮತ್ತು 4, ಇದೇ 3ರಂದು ಆರಂಭವಾಗಿದ್ದು, 13 ದಿನ ಆಗಿದೆ. 4 ಯಾತ್ರೆ ಯಾವುದೇ ಅಡೆತಡೆಗಳಿಲ್ಲದೆ, ಯಶಸ್ವಿಯಾಗಿ ನಡೆಯುತ್ತಿದೆ ಎಂದರು. ವಿಜಯದ ತಳಹದಿಗೆ ಯಾತ್ರೆ ಪೂರಕ ಎಂದರು. ರಾಜ್ಯ ಮುಖ್ಯ ವಕ್ತಾರ ಎಂ.ಜಿ. ಮಹೇಶ್, ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Exit mobile version