ಯಲ್ಲಾಪುರ: ಕನ್ನಡ ಪತ್ರಿಕಾ ರಂಗದಲ್ಲಿ ಹೊಸ ಸಾಹಸಗಳನ್ನು ಮೆರೆದ ಖ್ಯಾತ ಉದ್ಯಮಿ, ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಹೆಸರಿನಲ್ಲಿ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ವಿಶ್ವದರ್ಶನ ಎಜುಕೇಶನ್ ಸೊಸೈಟಿಯಲ್ಲಿ (viswadarshana education society) ಸ್ಥಾಪಿಸಿರುವ ʼಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ʼ (Dr Vijay Sankeshwar Media School) ಅನ್ನು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ಅವರು ಸೋಮವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು, ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಆರಂಭವಾಗುತ್ತಿರುವುದು ಕನ್ನಡ ಪತ್ರಿಕೋದ್ಯಮಕ್ಕೆ ಒಂದು ಕಳಶಪ್ರಾಯದಂತಿದೆ. ಕನ್ನಡ ಪತ್ರಿಕೋದ್ಯಮ ನಿಂತ ನೀರಾದ ಕಾಲದಲ್ಲಿ ಉತ್ತರ ಕನ್ನಡದ ಪ್ರೇರಣೆಯಿಂದ ಹೊಸ ಪತ್ರಿಕೆಯನ್ನು ಆರಂಭಿಸಿ, ಅವರ ಛಲದ ಪರಿಣಾಮವಾಗಿ ಒಂದು ಸಕ್ಷಮವಾದ ಪತ್ರಿಕೋದ್ಯಮವನ್ನು ಕಟ್ಟಿದ ಕೀರ್ತಿ ವಿಜಯ ಸಂಕೇಶ್ವರ್ ಅವರಿಗೆ ಸಲ್ಲುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತನಿಗೆ ಬಹುಮುಖ್ಯವಾಗಿ ಬೇಕಾಗಿರುವುದು ಸಾಮಾನ್ಯ ತಿಳಿವಳಿಕೆ. ಹೇಳಿದ್ದನ್ನೆಲ್ಲ ಒಪ್ಪುವ ಬದಲು, ಯಾಕೆ ಏನು ಎಂದು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ಆಧುನಿಕತೆಗೆ ತಕ್ಕಂತೆ ನಮ್ಮನ್ನು ತೊಡಗಿಸಿಕೊಂಡಾಗ, ಯಾವುದೇ ಮಾಧ್ಯಮವನ್ನು ಕಟ್ಟಿ ಬೆಳೆಸುವ ಸಾಮರ್ಥ್ಯ ನಮಗೆ ದೊರಕುತ್ತದೆ. ಸಾಕಷ್ಟು ಅವಕಾಶಗಳ ಫಲವಾಗಿ, ಭಾರತವು ಬರುವ 2-3 ವರ್ಷಗಳಲ್ಲಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ. ನಮ್ಮಲ್ಲಿನ ಮಾನವ ಸಂಪನ್ಮೂಲವೇ ಅತೀ ದೊಡ್ಡ ತಾಕತ್ತು. ಸ್ಕಿಲ್, ಸ್ಕೇಲ್ & ಸ್ಪೀಡ್ ನಮ್ಮಲ್ಲಿದ್ದರೆ ಯಾವುದೇ ಕೆಲಸವನ್ನು ಸಾಧಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದು ಹೇಳಿದರು.
ಇದನ್ನೂ ಓದಿ | APJ Abdul Kalam Birthday: ಪ್ರತಿ ಮಗುವಿನ ಕನಸಿನ ಮೇಷ್ಟ್ರು!
5ಜಿ ಹಾಗೂ 6ಜಿ ತಂತ್ರಜ್ಞಾನವು ಹೊರದೇಶದಿಂದ ತಂತ್ರಜ್ಞಾನವಾಗದೆ, ಭಾರತೀಯ ತಂತ್ರಜ್ಞಾನವಾಗಿ ಬೆಳೆಯಲಿದೆ. ನಾವು ಸಿಗುವ ಕೆಲಸದಲ್ಲಿ ಸಮಾಧಾನ ಪಡೆದುಕೊಳ್ಳುವ ಬದಲು, ಛಲ ಹಾಗೂ ಪರಿಶ್ರಮದಿಂದ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಬೆಳೆಯಬೇಕು. ಪತ್ರಿಕೆಯನ್ನು ಓದುವವರ ಸಂಖ್ಯೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು, ನಿಖರ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ನೀಡಲು ಸಕ್ರಿಯವಾಗಿ ಕಾರ್ಯ ನಿರ್ವಹಿಸಬೇಕು. ನಾವು ಯಾವ ರೀತಿಯಲ್ಲಿ ಸುಖವನ್ನು ಕಾಣಬೇಕು ಎನ್ನುವ ನಿರ್ಧಾರವನ್ನು ನಾವೇ ಮಾಡಬೇಕಿದೆ ಎಂದರು.
ಪತ್ರಿಕೋದ್ಯಮಕ್ಕೆ ಎಂದಿಗೂ ಸಾವಿಲ್ಲ: ಡಾ. ವಿಜಯ ಸಂಕೇಶ್ವರ
ವಿ.ಆರ್.ಎಲ್. ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಕಷ್ಟು ಬುದ್ಧಿವಂತ, ಶ್ರಮ ಪಡುವ ವಿದ್ಯಾರ್ಥಿಗಳಿದ್ದು, ಅವರಿಗೆ ಅಪಾರವಾದ ಅವಕಾಶ ದೊರಕುವ ಉದ್ದೇಶದಿಂದ ಈ ಮೀಡಿಯಾ ಸ್ಕೂಲ್ ಆರಂಭವಾಗಿದೆ. ಪತ್ರಿಕೋದ್ಯಮಕ್ಕೆ ಎಂದಿಗೂ ಸಾವಿಲ್ಲ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಇಂದಿಗೂ ತಮ್ಮ ನಿತ್ಯದ ದಿನಚರಿಯನ್ನು ಪತ್ರಿಕೆಗಳೊಂದಿಗೆ ಆರಂಭಿಸುತ್ತಾರೆ. ಇಲ್ಲಿನ ವಿದ್ಯಾರ್ಥಿಗಳು ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ, ನಿಮ್ಮ ಜ್ಞಾನವು ವಿಶ್ವದಾದ್ಯಂತ ಪ್ರಖರಿಸುವಂತಾಗಲಿ ಎಂದು ಆಶಿಸಿದರು.
ಕೇಂದ್ರ ಸರ್ಕಾರದ ಕೆಲ ನೀತಿಯಿಂದಾಗಿ ಪತ್ರಿಕೋದ್ಯಮವು ಇಂದು ಕಷ್ಟ ಎದುರಿಸುವಂತಾಗಿದೆ. ದೇಶವನ್ನು ರಕ್ಷಿಸುವ ಮೊದಲು ಪತ್ರಿಕೋದ್ಯಮವನ್ನು ರಕ್ಷಿಸಿಕೊಳ್ಳುವ ಅವಶ್ಯಕತೆ ಇದೆ. ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ಕೆಲ ಎಡಪಂಥೀಯರು ನಮ್ಮ ದೇಶದಲ್ಲಿ ಮೇಲುಗೈ ಸಾಧಿಸಲಿದ್ದಾರೆ. ಇಂದು ದೇಶದ ಕೆಲವೇ ಕೆಲ ಪತ್ರಿಕೋದ್ಯಮದ ಕಂಪನಿಗಳು ನೈಜತೆಯನ್ನು ಕಾಯ್ದುಕೊಂಡಿದೆ ಎಂದು ಹೇಳಲು ಬೇಸರವಾಗುತ್ತಿದೆ. ಈ ಕುರಿತು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಪಾರದರ್ಶಕ ಮಾಧ್ಯಮದ ಉಳಿವಿಕೆ ಕಷ್ಟ ಸಾಧ್ಯ ಎಂದರು.
ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಮೈಸೂರು ಮರ್ಕಂಟೈಲ್ ಕಂಪನಿಯ ಸ್ಥಾಪಕ ಹಾಗೂ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಚ್. ಎಸ್. ಶೆಟ್ಟಿ ಅವರು, ನಾನು ದೇಶಕ್ಕಾಗಿ, ಸಮಾಜಕ್ಕಾಗಿ ದುಡಿಯುವ ಪತ್ರಕರ್ತನಾಗಿ ಬೆಳೆಯುತ್ತೇನೆ ಎನ್ನುವ ಸಂಕಲ್ಪವನ್ನು ಇಂದು ವಿದ್ಯಾರ್ಥಿಗಳು ಮಾಡಬೇಕಿದೆ. ಉತ್ತರ ಕನ್ನಡವು ಒಂದು ಸಮಪರ್ಕವಾದ ನಾಯಕತ್ವದ ಕೊರತೆಯಿಂದಾಗಿ ಅಭಿವೃದ್ಧಿಯಿಂದ ವಂಚಿತವಾಗಿದೆ. ಈ ನಿಟ್ಟಿನಲ್ಲಿ ಹರಿಪ್ರಕಾಶ್ ಅವರ ಪ್ರಾಮಾಣಿಕ ಪ್ರಯತ್ನವನ್ನು ನಾವೆಲ್ಲ ಶ್ಲಾಘಿಸಲೇಬೇಕು. ಇಂದು ನಮ್ಮ ದೇಶದಲ್ಲಿ ಕಿತ್ತು ತಿನ್ನುವ ಬಡತವಿಲ್ಲ. ಹೀಗಾಗಿ ಎಲ್ಲಾರೂ ಸಹ ಶಿಕ್ಷಣಕ್ಕೆ ಒತ್ತು ನೀಡಬೇಕು. ಪಾಲಕರು ಸಹ ಕೇವಲ ದುಡಿಮೆಯ ಹಿಂದೆ ಬೀಳದೆ, ಮಕ್ಕಳ ಬೆಳವಣಿಗೆಯ ಮೇಲು ಕಾಳಜಿ ತೋರಬೇಕಿದೆ ಎಂದರು.
ನನ್ನ ಬೆಳವಣಿಗೆಗೆ ಕಾರಣವಾದ ವ್ಯಕ್ತಿ ಹೆಸರಲ್ಲಿ ಮೀಡಿಯಾ ಸ್ಕೂಲ್
ಪ್ರಾಸ್ತಾವಿಕ ಮಾತುಗಳನ್ನಾಡಿದ ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹಾಗೂ ವಿಶ್ವದರ್ಶನ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಅವರು, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವಿವಿಧ ಕೋರ್ಸುಗಳ ಸಮೂಹ ಗುಚ್ಛಕ್ಕೆ ಇಂದು ಡಾ.ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಸೇರ್ಪಡೆಯಾಗಿದೆ. ನನ್ನ ಬೆಳವಣಿಗೆಗೆ ಕಾರಣವಾದಂತಹ ವ್ಯಕ್ತಿ ಹೆಸರಿನಲ್ಲಿ ಮೀಡಿಯಾ ಸ್ಕೂಲ್ ತೆರೆದಿದ್ದೇವೆ. ಇಲ್ಲಿನ ವಿದ್ಯಾರ್ಥಿಗಳು ಸಾಮಾನ್ಯವಾಗಿ ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದು, ಸಂಸ್ಥೆಯು ಪತ್ರಿಕೋದ್ಯಮದಲ್ಲಿ ಹೊಸ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಲಿದೆ ಎಂದರು.
ವಿಶ್ವದರ್ಶನ ಶಿಕ್ಷಣ ಸಮೂಹ ನಿರ್ದೇಶಕರು, ಮೈಸೂರು ಮರ್ಕಂಟೈಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧ್ಯಕ್ಷರು, ವಿಸ್ತಾರ ನ್ಯೂಸ್ ಎಕ್ಸಿಕ್ಯೂಟಿವ್ ಚೇರ್ಮನ್ ಡಾ. ಎಚ್.ಎಸ್.ಶೆಟ್ಟಿ ಅವರ ತಾಂತ್ರಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಾಧನೆಯನ್ನು ಗುರುತಿಸಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ನೀಡಿ ಗೌರವಿಸಿದೆ. ಹೀಗಾಗಿ ಅವರಿಗೆ ವಿಶ್ವದರ್ಶನ ಬಳಗ ಮತ್ತು ಯಲ್ಲಾಪುರದ ನಾಗರಿಕರ ಪರವಾಗಿ ಕಾರ್ಯಕ್ರಮದಲ್ಲಿ ಸನ್ಮಾನ ಮಾಡಲಾಯಿತು.
ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಮಹಾನ್ ಬೌದ್ಧಿಕ ಕ್ಷತ್ರಿಯ ಸೀತಾರಾಮ ಗೋಯಲ್
ಕರ್ನಾಟಕದ ವಿಶ್ವ ವಿದ್ಯಾನಿಲಯದ ಕುಲಪತಿ ಕೆ. ಬಿ. ಗುಡಸಿ ಮಾತನಾಡಿದರು. ಮೀಡಿಯಾ ಸ್ಕೂಲ್‌ನ ಪ್ರಾಂಶುಪಾಲ ನಾಗರಾಜ ಇಳೆಗುಂಡಿ ಮೀಡಿಯಾ ಸ್ಕೂಲ್ ಕುರಿತಾಗಿ ಮಾಹಿತಿ ನೀಡಿದರು. ಶಿಕ್ಷಕಿ ವಿದ್ಯಾ ಭಟ್ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಪ್ರಸಿದ್ಧ ಕಲಾವಿದರಿಂದ ಕರ್ಣ ಭೇದನ ಪ್ರಸಂಗದ ತಾಳಮದ್ದಳೆ ನಡೆಯಿತು.