Site icon Vistara News

ಸಾಲ ಮರುಪಾವತಿಸಲು ವಿನಾಯಿತಿ ನೀಡಿ ಎಂದು ಸರ್ಕಾರಕ್ಕೆ ರೈತರ ಮನವಿ

ಬ್ಯಾಂಕುಗಳ ವಿಲೀನದಿಂದಾಗಿ

ವಿಜಯನಗರ: ಕೋವಿಡ್‌, ಅತಿವೃಷ್ಟಿ ಸೇರಿ ಅನೇಕ ಕಾರಣಗಳಿಂದಾಗಿ ಕೃಷಿ ಹಾಗೂ ಭೂಸಾಲ ಮರುಪಾವತಿ ಕಷ್ಟವಾಗಿದ್ದು, ಸರ್ಕಾರ ರಿಯಾಯಿತಿ ಕೊಡಿಸಬೇಕು ಎಂದು ರೈತರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಕಡ್ಲಬಾಳು, ಆನೆಕಲ್ಲು, ಆನೆಕಲ್ಲು ತಾಂಡ, ಹರೆಗೊಂಡನಹಳ್ಳಿ ಬ್ಯಾಲಾಳು, ಕೆ. ಓಬಳಾಪುರ, ಕಾತ್ಯಾಯಿನಿಮರಡಿ, ರಾಯರಾಳು ತಾಂಡ, ಉಪನಾಯಕನಹಳ್ಳಿ, ಹಲಗಾಪುರ, ಹಗರಿಬೊಮ್ಮನಹಳ್ಳಿ, ಆರಾಳು ಓಬಳಾಪುರ, ಕೇಶವರಾಯನಬಂಡಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ಈ ಹಿಂದೆ ಇದ್ದ ಕಾರ್ಪೋರೇಷನ್ ಬ್ಯಾಂಕ್ ಹೊಸಪೇಟೆ ಶಾಖೆಯಲ್ಲಿ ಬೆಳೆಸಾಲ ಹಾಗೂ ಭೂ ಅಭಿವೃದ್ಧಿ ಸಾಲ ಪಡೆದಿರುತ್ತೇವೆ.

ಇದೀಗ ಕಾರ್ಪೋರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾಗಿರುವುದು ತಮಗೆ ತಿಳಿದೇ ಇದೆ. ರೈತರು 2012 ರಿಂದ ವಿವಿಧ ಮೊತ್ತದ ಸಾಲ ಪಡೆದಿದ್ದೇವೆ. ಸತತ ಬರಗಾಲ, ಅತಿವೃಷ್ಟಿಯಿಂದಾಗಿ ಬೆಳೆ ಕೈಗೆ ಸಿಗದೆ ನಾವೆಲ್ಲ ನಷ್ಟ ಅನುಭವಿಸಿದ್ದೇವೆ.

ಇದನ್ನೂ ಓದಿ | ಆನೆ ಮತ್ತು ಮಾನವನ ಸಂಘರ್ಷ : ಆನೆಗಳನ್ನು ಕಾಡಿಗೆ ಓಡಿಸುವಂತೆ ರೈತ ಸಂಘ ಒತ್ತಾಯ

ನಮಗೆ ಸಾಲ ಮರುಪಾವತಿಸಲು ಬೇರೆ ಯಾವುದೇ ಆರ್ಥಿಕ ಮೂಲಗಳು ಇರುವುದಿಲ್ಲ. ಕೃಷಿಯನ್ನೇ ನಂಬಿರುವ ನಾವುಗಳು ಸಾಲ ಪಡೆದ ವರ್ಷದಿಂದ ಮೂರು ವರ್ಷಗಳವರೆಗೆ ಸಾಲ ಮರುಪಾವತಿಸಿದ್ದೇವೆ. ಆದರೆ ಸತತ ಬರ, ಅತಿವೃಷ್ಟಿಯಿಂದಾಗಿ ಬೆಳೆ ಬಾರದೆ ನಷ್ಟ ಅನುಭವಿಸಿದ್ದೇವೆ ಮತ್ತು ಕೋವಿಡ್ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಲ ಮರುಪಾವತಿಸಲು ಆಗಿರುವುದಿಲ್ಲ. ಇದೀಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹೊಸಪೇಟೆ ಶಾಖೆಯಿಂದ ಸಾಲ ಮರುಪಾವತಿಗೆ ನಮಗೆಲ್ಲ ಎನ್‌ಪಿಎ ನೋಟೀಸ್ ನೀಡಿರುತ್ತಾರೆ.

ಈ ಬಗ್ಗೆ ಅದಾಗಲೇ ಅನೇಕ ರೈತರು ನೋಟೀಸ್‌ಗೆ ಉತ್ತರಿಸಿದ್ದೇವೆ. ಅದಾಗ್ಯೂ ಮತ್ತೊಮ್ಮೆ ಎನ್‌ಪಿಎ ನೋಟೀಸ್ ನೀಡಿ ಸಾಲ ಮರುಪಾವತಿಸದಿದ್ದರೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವ ಎಚ್ಚರಿಗೆ ನೀಡಿದ್ದಾರೆ. ನಾವುಗಳು ಪಡೆದ ಸಾಲ ಮರುಪಾವತಿಸಲು ಸಿದ್ಧರಿದ್ದು, ಅಸಲಿಗೆ ಬಡ್ಡಿ ಸೇರಿದಂತೆ ಇನ್ನಿತರ ಯಾವುದೇ ದಂಡ, ಚಕ್ರಬಡ್ಡಿ ಪಾವತಿಸಲು ಆರ್ಥಿಕವಾಗಿ ನಾವುಗಳು ಶಕ್ತರಿಲ್ಲ.

ಈಗಾಗಲೇ ಸದರಿ ಬ್ಯಾಂಕ್‌ನಲ್ಲಿ ವಿಲೀನವಾದ ವಿವಿಧ ಬ್ಯಾಂಕ್ ಸೇರಿ ವಿವಿಧ ಬೇರೆ ಬ್ಯಾಂಕ್‌ಗಳಲ್ಲಿ ರೈತರು ಪಡೆದಿದ್ದ ಸಾಲಕ್ಕೆ ಈ ರೀತಿಯ ವಿನಾಯಿತಿ ನೀಡಿ ಸಾಲ ಕಟ್ಟಿಸಿಕೊಂಡಿರುವ ಅನೇಕ ಉದಾಹರಣೆಗಳು ಇವೆ. ತಾವುಗಳು ನಮ್ಮಿಂದ ಸಾಲ ಮರುಪಾವತಿಸಲು ಶಕ್ತವಿರುವ ಒಟ್ಟು ಸಾಲದ ಶೇ. 10ರಿಂದ 15ರಷ್ಟು ಹಣವನ್ನು ಮಾತ್ರ ಕಟ್ಟಿಸಿಕೊಂಡು ನಿಗದಿತ ಅವಧಿಯೊಳಗೆ ನಮ್ಮನ್ನು ಋಣಮುಕ್ತರನ್ನಾಗಿ ಮಾಡುವಂತೆ ಬ್ಯಾಂಕ್‌ನವರಿಗೆ ಸೂಚನೆ ನೀಡಬೇಕು ಎಂದು ರೈತರು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಸಾಲಬಾಧೆ ತಾಳಲಾರದೆ ರೈತನ ಆತ್ಮಹತ್ಯೆ

Exit mobile version