Site icon Vistara News

Congress Politics : ಡಿಕೆಶಿ ಒಬ್ರೇ ಅಲ್ಲ, ನಾನು ಕೂಡಾ ಸಿಎಂ ಸ್ಥಾನದ ಆಕಾಂಕ್ಷಿ ಎಂದ ಸಚಿವ ದರ್ಶನಾಪುರ

Sharanabasappa Darshanapur

ವಿಜಯನಗರ: ಡಿ.ಕೆ ಶಿವಕುಮಾರ್‌ ಅವರೊಬ್ಬರೇ ಯಾಕೆ ನಾನು ಕೂಡಾ ಮುಖ್ಯಮಂತ್ರಿ ಸ್ಥಾನದ ಅಕಾಂಕ್ಷಿ (CM Post Aspirant) ಎಂದು ಹೇಳಿದ್ದಾರೆ ಶಹಾಪುರ ಕ್ಷೇತ್ರದ ಶಾಸಕ ಹಾಗೂ ರಾಜ್ಯದ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ (Sharanabasappa Darshanapura) ಅವರು ಡಿ.ಕೆ. ಶಿವಕುಮಾರ್‌ (DK Shivakumar) ಅವರು ಮುಖ್ಯಮಂತ್ರಿ ಆಗಲು ಪ್ರಯತ್ನಿಸುತ್ತಿದ್ದಾರೆ (Congress Politics) ಎಂಬ ಸುದ್ದಿಗೆ ಪ್ರತಿಕ್ರಿಯಿಸುತ್ತಿದ್ದರು.

ʻʻನಾನು ಏಳು ಬಾರಿ ಎಲೆಕ್ಷನ್‌ಗೆ ನಿಂತಿದ್ದೇನೆ. ಸೋತಿದ್ದೇನೆ, ಗೆದ್ದಿದ್ದೇನೆ. ನಾನು ಕೂಡಾ ಸಿಎಂ ಸ್ಥಾನದ ಆಕಾಂಕ್ಷಿಯೇʼʼʼ ಎಂದು ಹೇಳಿದರು. ಹೊಸಪೇಟೆಯಲ್ಲಿ ಮಾತನಾಡಿದ ಸಚಿವ ಶರಣಬಸಪ್ಪ ದರ್ಶನಾಪುರ ಅವರು, ಡಿ.ಕೆ ಶಿವಕುಮಾರ್ ಸಿಎಂ ಆಗಲಿಕ್ಕೆ ಯೋಗ್ಯರಿದ್ದಾರೆ. ಪಕ್ಷ ಅಧಿಕಾರಕ್ಕೆ ಬರಲು ಅವರು ಪ್ರಧಾನ ಕಾರಣ ಎಂದರು.

ʻʻಕಾಂಗ್ರೆಸ್‌ನ 135 ಶಾಸಕರು ಕೂಡಾ ಮುಖ್ಯಮಂತ್ರಿ ಆಗಬಹುದು. ಅವರಿಗೆ ನಿಭಾಯಿಸಲು ಸಾಧ್ಯವೇ ಎನ್ನುವುದು ಕೊಟ್ಟ ಮೇಲೆ ಗೊತ್ತಾಗುತ್ತದೆʼʼ ಎಂದು ಹೇಳಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿದೆ. ನಾಳೆ ಏನಾಗುತ್ತದೆ ಅನ್ನೋದು ನನಗೂ ಗೊತ್ತಿಲ್ಲ ಎಂದರು.

ʻʻಇವತ್ತಿನ ದಿನದ ಪ್ರಕಾರ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ಆಗಿರ್ತಾರೆ ಅನ್ನೋದು ಸತ್ಯ. ಆದರೆ ಬಹಳಷ್ಟು ಜನರು ಕನಸು ಕಾಣ್ತಿದ್ದಾರೆ. ನಾವು ಡಿಸೆಂಬರ್‌ನಲ್ಲಿ ಸರ್ಕಾರ ಮಾಡ್ತೀವಿ, ಜನವರಿಯಲ್ಲಿ ಸರ್ಕಾರ ಮಾಡ್ತೀವಿ ಅಂತ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಯಾರು ಬೇಕಾದರೂ ಆಗಬಹುದು. ಸಿಎಂ ಆಗೋದಕ್ಕೆ ಶಾಸಕ ಆದ್ರೆ ಸಾಕಲ್ಲವೇ? ಹೀಗಾಗಿ 136 ಮಂದಿಯೂ ಸಿಎಂ ಆಗಲಿಕ್ಕೆ ಯೋಗ್ಯರಿದ್ದಾರೆʼʼ ಎಂದು ಶರಣಬಸಪ್ಪ ದರ್ಶನಾಪುರ ಹೇಳಿದರು.

ನಾವು ಅವರಂಥಲ್ಲ, ಯಾರಿಗೂ ಹಣ ಆಮಿಷ ತೋರಿಸಿಲ್ಲ

ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ಯಾರಿಗೂ ಹಣದ ಆಮಿಷ ತೋರಿಸಿ ಕರೆದಿಲ್ಲ. ಪಕ್ಷದ ತತ್ವ ಸಿದ್ದಾಂತ ಒಪ್ಪಿ ಬಂದ್ರೆ ಸ್ವಾಗತ ಅಂತ ನಮ್ಮ ನಾಯಕರೇ ಹೇಳಿದ್ದಾರೆ ಎಂದರು. ಈ ಹಿಂದೆ ಬಿಜೆಪಿಗೆ ಹೋದವರು ಹಣದ ಹಿಂದೆ ಹೋದವರು, ಅವರ ಪರಿಸ್ಥಿತಿ ಹೇಗಿದೆ ಅಂತ ನಿಮಗೇ ಗೊತ್ತಲ್ವಾ ಎಂದರು.

ಸರ್ಕಾರ ಕೆಡವಲು ಬಿಜೆಪಿ-ಜೆಡಿಎಸ್‌ ಮೈತ್ರಿ ಪ್ರಯತ್ನ

ʻʻಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ಸರ್ಕಾರ ಕೆಡವಲು ಯತ್ನಿಸುತ್ತಿವೆʼʼ ಎಂದು ಹೊಸಪೇಟೆಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ಬಾಂಬ್ ಹಾಕಿದರು.

ʻʻಜೆಡಿಎಸ್ – ಕಾಂಗ್ರೆಸ್ ಮೈತ್ರಿ ಎಷ್ಟು ದಿನ ನಡೆಯುತ್ತಿತ್ತೋ ಗೊತ್ತಿಲ್ಲ. ಆದರೆ, ಈಗ ಶಾಸಕರನ್ನು ಖರೀದಿ ಮಾಡುವ ಪ್ರಯತ್ನ ಮಾಡುತ್ತಿರುವುದು ಸರೀನಾ? ಯಾರ ದುಡ್ಡಿಂದ ಖರೀದಿ ಮಾಡೋದಕ್ಕೆ ಹೊರಟಿದ್ದಾರೆ. ಯಡಿಯೂರಪ್ಪನ ತಮ್ಮ ಅಕೌಂಟ್‌ನಿಂದ ದುಡ್ಡು ಕೊಟ್ಟಿದ್ದಾರಾʼʼ ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ: DK Shivakumar : ನನಗೆ ಜಾತಿ ರಾಜಕಾರಣ ಗೊತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್‌

ʻʻಕಾಂಗ್ರೆಸ್‌ ಬಿಟ್ಟು ಬರುವ ಎಲ್ಲರಿಗೂ 50 ಕೋಟಿ ಆಫರ್ ಮಾಡಿದ್ದಾರಂತೆ. ಹಿಂದೆಯೂ 17 ರಾಜೀನಾಮೆ ಕೊಡಿಸಿದ್ರು, ಮರು ಲೆಕ್ಷನ್ ಮಾಡಿಸಿದ್ರುʼʼ ಎಂದು ನೆನಪು ಮಾಡಿಕೊಂಡ ಅವರು, ಆಗ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಎಚ್.ಡಿ ಕುಮಾರಸ್ವಾಮಿ ಅವರು ಈಗ ಬಿಜೆಪಿ ಜತೆ ಸೇರಿಕೊಂಡಿದ್ದಾರೆ ಎಂದು ನೆನಪಿಸಿದರು.

Exit mobile version