ವಿಜಯನಗರ: ಆ ಏರಿಯಾ ಜನರು ಬೀದಿನಾಯಿಗಳ ಹಾವಳಿಗೆ ಬೇಸತ್ತು ಹೋಗಿದ್ದರು. ರಸ್ತೆಯಲ್ಲಿ ಓಡಾಡುವಾಗ ಹಿಂಬಾಲಿಸಿಕೊಂಡು ಬರುವ ನಾಯಿ ಸಿಕ್ಕ ಸಿಕ್ಕವರ ಮೇಲೆ ದಾಳಿ ನಡೆಸುತ್ತಿದೆ. ಹೀಗಾಗಿ ಬೀದಿನಾಯಿಗಳ ಹಾವಳಿ ತಪ್ಪಿಸಿ ಎಂದು ಯುಕೆಜಿ ಓದುತ್ತಿರುವ ಪುಟಾಣಿಯೊಬ್ಬಳು (Dog Bite) ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾಳೆ.
ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಪಂಚಾಯತ್ ಅಧಿಕಾರಿಗೆ ಪುಟಾಣಿಯೊಬ್ಬಳು ಪತ್ರ ಬರೆದಿದ್ದಾಳೆ. ಕೊಟ್ಟೂರಿನ ಚಿಟ್ಟೆ ಪ್ರಿ ಪ್ರೈಮರಿ ಸ್ಕೂಲಿನ ಯುಕೆಜಿ ಓದುತ್ತಿರುವ ತನ್ವಿತಾ ಎಂಬಾಕೆ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿಗೆ ಪತ್ರ ಬರೆದಿದ್ದಾಳೆ.
ಶಾಪಿಂಗ್‌ಗೆಂದು ಹೋಗುವಾಗ ಹಿಂಬಾಲಿಸಿಕೊಂಡು ಬಂದ ನಾಯಿಯೊಂದು ನನ್ನ ಕಾಲಿಗೆ ಕಚ್ಚಿದೆ. ಬೀದಿ ನಾಯಿಗಳು ದಿನನಿತ್ಯ ಸಾರ್ವಜನಿಕರಿಗೆ ತೊಂದರೆಗಳನ್ನು ಕೊಡುತ್ತಿವೆ. ಕೂಡಲೇ ಬೀದಿನಾಯಿಗಳಿಂದ ಜನರಿಗೆ ಆಗುವ ತೊಂದರೆಗಳನ್ನು ನಿವಾರಿಸಿ ಎಂದು ಕೊಟ್ಟೂರಿನ ಮುಖ್ಯಾಧಿಕಾರಿಗೆ ಪತ್ರದ ಮೂಲಕ ಬರೆದು ಮನವಿ ಮಾಡಿದ್ದಾಳೆ.
ಕೊಟ್ಟೂರು ಪಟ್ಟಣದ ಜೆಪಿ ನಗರದ ನಿವಾಸಿಯಾಗಿರುವ ಈ ಬಾಲಕಿಯ ಸಾಮಾಜಿಕ ಜವಾಬ್ದಾರಿ ತುಂಬಾ ದೊಡ್ಡದಿದೆ. ತನ್ನ ಹಾಗೆ ಜೆಪಿ ನಗರದಲ್ಲಿ ನಾಲ್ಕೈದು ಮಂದಿಗೆ ಕಚ್ಚಿರುವ ನಾಯಿಯ ಹಾವಳಿಯನ್ನು ಕುರಿತು ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.
ಭರತನಾಟ್ಯ ಕಲಾವಿದೆಯೂ ಆಗಿರುವ ತನ್ವಿತಾ ಹಲವಾರು ಪ್ರಶಸ್ತಿಗಳನ್ನು ಈಗಾಗಲೇ ಪಡೆದಿದ್ದಾಳೆ. ಸದ್ಯ ಯುಕೆಜಿ ವಿದ್ಯಾರ್ಥಿ ಬರೆದಿರುವ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಧಿಕಾರಿಗಳು ನಾಯಿ ಹಾವಳಿಯ ಬಗ್ಗೆ ಕ್ರಮ ಕೈಗೊಂಡು ಇಂಥ ಮಕ್ಕಳಿಗೆ, ಜನಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕೆಂದು ಜನರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಕಳಚಿ ಬಿದ್ದ ಚಾವಣೆ; ರಸ್ತೆಗೆ ಅಡ್ಡಲಾಗಿ ಉರುಳಿದ ಬೃಹತ್ ಮರ
ಜಾನುವಾರುಗಳ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ
ಜಮೀನಿಗೆ ನುಗ್ಗಿ ಬೆಳೆ ತಿಂದ ಜಾನುವಾರುಗಳ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಇಂತಹದೊಂದು ಕೌರ್ಯ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಡೆಕೆರೆ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹರೀಶ್ ಎಂಬುವವರಿಗೆ ಸೇರಿದ ಎರಡು ಹಸುಗಳ ಮೇಲೆ ಅದೇ ಗ್ರಾಮದ ಈರಯ್ಯ ಎಂಬುವವರು ಹಸುಗಳ ಕಾಲು, ಹೊಟ್ಟೆ, ಕುತ್ತಿಗೆ ಭಾಗಕ್ಕೆ ಮಚ್ಚು ಬೀಸಿದ್ದಾರೆ ಎಂಬ ಆರೋಪವಿದೆ. ತೀವ್ರ ನೋವಿನಿಂದ ನರಳುತ್ತಿರುವ ಮೂಕ ಪ್ರಾಣಿಗಳಿಗೆ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಸಳೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ