ವಿಜಯನಗರ: ರಾಜ್ಯದ ಹಲವು ದೇವಾಲಯಗಳಲ್ಲಿ ವಸ್ತ್ರ ಸಂಹಿತೆಯ (Dress code in temple) ಕೂಗು ಜೋರಾಗಿದೆ. ಇದೇ ಕೂಗು ಈಗ ವಿಶ್ವವಿಖ್ಯಾತ ಹಂಪಿ ವಿರೂಪಾಕ್ಷ ದೇಗುಲದಲ್ಲೂ (Hampi Virupaksha Temple) ಪ್ರತಿಧ್ವನಿಸಿದೆ. ದೇಶಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುವ ಈ ದೇವಸ್ಥಾನವನ್ನು ಪ್ರವೇಶಿಸುವ ಭಕ್ತರಿಗೆ, ಪ್ರವಾಸಿಗರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲು ಚಿಂತನೆ ನಡೆದಿದೆ.
ಹಂಪಿಯು ಪ್ರವಾಸಿ ಸ್ಥಳವಾಗಿದ್ದು, ಪ್ರತಿನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದೇಶ-ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಆದರೆ ಹೀಗೆ ಬರುವ ಪ್ರವಾಸಿಗರು ತುಂಡುಡುಗೆ ಧರಿಸಿ ಬರುತ್ತಾರೆ. ಇದರಿಂದ ದೇವಸ್ಥಾನದ ಪಾವಿತ್ರ್ಯತೆ, ಆಧ್ಯಾತ್ಮಿಕತೆಗೆ ಧಕ್ಕೆ ಉಂಟಾಗುತ್ತಿದೆ. ದೇವಸ್ಥಾನದ ಪಾವಿತ್ರ್ಯತೆ ಕಾಪಾಡುವುದು ಭಕ್ತರ ಕರ್ತವ್ಯ. ಈ ನಿಟ್ಟಿನಲ್ಲಿ ಸಾತ್ವಿಕ ಉಡುಪು ಧರಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಈ ಹಿಂದೆಯೂ ಒತ್ತಾಯಗಳು ಬಂದಿದ್ದವು.
ಹಂಪಿ ವಿರೂಪಾಕ್ಷ ದೇಗುಲ ಪ್ರವೇಶಕ್ಕೆ ವಸ್ತ್ರ ಸಂಹಿತೆ ಜಾರಿ ಚಿಂತನೆ ನಡೆದಿದೆ. ಹೀಗಾಗಿ ಪ್ರಾಯೋಗಿಕವಾಗಿ ಜನರಲ್ಲಿ ಜಾಗೃತಿ ಮೂಡಿಸಲು ಜನರಿಗೆ ಶಲ್ಯ, ಪಂಚೆಯನ್ನು ನೀಡಲಾಗುತ್ತಿದೆ. ಸಾರ್ವಜನಿಕರಲ್ಲಿ ಭಕ್ತಿ ಭಾವನೆ ಮೂಡಿಸುವ ಉದ್ದೇಶದಿಂದ ಜಿಲ್ಲಾಡಳಿತ ಈ ಕ್ರಮವಹಿಸಿದೆ.
ಜೀನ್ಸ್ ಪ್ಯಾಂಟ್ ಮತ್ತು ಬರಮೋಡ ತೊಟ್ಟು ಬಂದ ಭಕ್ತರಿಗೆ ಮನವರಿಕೆ ಮಾಡಿ, ಸಾಂಪ್ರದಾಯಿಕ ಶೈಲಿಯ ಬಟ್ಟೆ ಧರಿಸಿ ದೇವರ ದರ್ಶನ ಪಡೆಯಲು ಜಾಗೃತಿ ಮೂಡಿಸಲಾಗುತ್ತಿದೆ. ಪ್ರವಾಸಿಗರು ಹೆಚ್ಚು ತುಂಡುಡುಗೆ ಧರಿಸಿ ದೇಗುಲ ಪ್ರವೇಶ ಮಾಡುತ್ತಿದ್ದರು. ಇದು ಹಂಪಿ ಪರಂಪರೆಯ ಪಾವಿತ್ರತೆಗೆ ಧಕ್ಕೆ ಬರುತ್ತದೆ ಎಂಬ ಆರೋಪ ಕೇಳಿಬಂದಿತ್ತು. ದೇಗುಲ ಪಾವಿತ್ರತ್ಯೆ ಕಾಪಾಡಲು ಹೊಸ ಪರಂಪರೆಗೆ ಜಿಲ್ಲಾಡಳಿತ ಕ್ರಮ ವಹಿಸಿದೆ.
ಪ್ರವಾಸಿ ತಾಣಕ್ಕೆ ಬಂದ ಭಕ್ತರಿಗೆ ಭಕ್ತಿ – ಭಾವನೆ ಮೂಡಿಸಲು ಉದ್ದೇಶದಿಂದ ಹೊಸ ಹಜ್ಜೆ ಇಟ್ಟಿದೆ. ಡಿಸಿ ದಿವಾಕರ್, ಶಾಸಕ ಗವಿಯಪ್ಪರಿಂದ ಸಾಂಕೇತಿಕವಾಗಿ ಶಲ್ಯ ಹಾಗೂ ಪಂಚೆಯನ್ನು ನೀಡಿ ಜಾಗೃತಿ ಮೂಡಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ