Site icon Vistara News

Drowned in River : ಕುರವತ್ತಿ ಜಾತ್ರೆಗೆ ಬಂದಿದ್ದ ಬಾಲಕ ತುಂಗಭದ್ರಾ ನದಿಯಲ್ಲಿ ಮುಳುಗಿ ಸಾವು

Drowned in River boy dead

ವಿಜಯ ನಗರ : ಕುರವತ್ತಿ ಜಾತ್ರೆಗೆ (Kuruvathi Festival) ಬಂದಿದ್ದ ಬಾಲಕನೊಬ್ಬ ಕುಟುಂಬದ ಇತರರನ್ನು ಸೇರಿಕೊಳ್ಳುವ ಆತುರದಲ್ಲಿ ತುಂಗಭದ್ರಾ ನದಿಯಲ್ಲಿ (Thungabhadra river) ಮುಳುಗಿ ಪ್ರಾಣ ಕಳೆದುಕೊಂಡಿದ್ದಾನೆ. ಬ್ಯಾಡಗಿ ತಾಲೂಕು ಬೀಸಲಹಳ್ಳಿ ಗ್ರಾಮದ ಮನು ಮುಚ್ಚಟ್ಟಿ ಎಂಬ 13 ವರ್ಷದ ಬಾಲಕನೇ (Drowned in river) ಮೃತಪಟ್ಟವನು.

ಹಡಗಲಿ ತಾಲೂಕಿನ ಕುರವತ್ತಿಯಲ್ಲಿ ಜಾತ್ರೆ ನಡೆಯುತ್ತಿದ್ದು, ಅದರಲ್ಲಿ ಭಾಗವಹಿಸಲೆಂದು ಕುಟುಂಬಿಕರ ಜತೆಗೆ ಬಾಲಕ ಬಂದಿದ್ದ. ಕುರವತ್ತಿ ಜಾತ್ರೆಗೆ ಬಂದಾಗ ತುಂಗಭದ್ರಾ ನದಿಯ ಮತ್ತೊಂದು ತೀರದಲ್ಲಿ ಆತನ ಕುಟುಂಬಿಕರು ಇದ್ದರು. ಆತ ದೋಣಿಯ ಮೂಲಕ ಅಲ್ಲಿಗೆ ಹೋಗಬೇಕಾಗಿತ್ತು.

ಆತ ಚಿಕ್ಕಕುರುವತ್ತಿ ಬಳಿಯಿದ್ದ ಕುಟುಂಬಸ್ಥರತ್ತ ತೆರಳಲು ಬೋಟು ಹತ್ತುವ ಜಾಗಕ್ಕೆ ಬಂದಾಗ ಬೋಟಿನ ಗುಂಡಿಯ ಬಳಿ ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಬೋಟ್‌ ಬಂದು ನಿಲ್ಲುವ ಜಾಗ ಸ್ವಲ್ಪ ಆಳವಾಗಿರುತ್ತದೆ. ಹುಡುಗ ಆ ಜಾಗಕ್ಕೆ ಬಂದಾಗ ಅಲ್ಲೇ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ.

ನಿಜವೆಂದರೆ ಬೋಟು ನಿಲ್ಲುವ ಜಾಗದಲ್ಲಿ ಇರುವ ಆಳವಾಗಿರುವ ಜಾಗದ ಬಗ್ಗೆ ಅರಿವಿಲ್ಲದೆ ಹುಡುಗ ಅಲ್ಲಿ ಹೋಗಿ ನೀರಿಗೆ ಬಿದ್ದಿದ್ದಾನೆ. ಅಪಾಯದ ಸ್ಥಳದಲ್ಲಿ ತಾಲೂಕು ಆಡಳಿತ ನಾಮಫಲಕ ಹಾಕಬೇಕಿತ್ತು. ಆದರೆ, ಆ ರೀತಿ ಹಾಕದೆ ಇರುವುದರಿಂದ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ತಾಲೂಕು ಆಡಳಿತ ವಿರುದ್ಧ ಕುಟುಂಬಸ್ಥರು ಹಿಡಿಶಾಪ ಹಾಕುತ್ತಿದ್ದಾರೆ. ರಾಣೆಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Road Accident: ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಜೀವ ಬಿಟ್ಟ ಸವಾರ; ಟಿವಿಎಸ್‌ ಎಕ್ಸೆಲ್‌ ಪುಡಿಪುಡಿ

ರೈಲ್ವೆ ಹಳಿ ದಾಟುವಾಗ ರೈಲು ಗಾಡಿ ಡಿಕ್ಕಿ ಮಹಿಳೆ ಸಾವು,

ಯಾದಗಿರಿ: ರೈಲ್ವೆ ಹಳಿ ದಾಟುವಾಗ ರೈಲು ಗಾಡಿ ಡಿಕ್ಕಿಯಾಗಿ ಮಹಿಳೆಯೊಬ್ಬರು ದಾರುಣವಾಗಿ ಪ್ರಾಣ ಕಳೆದುಕೊಂಡ ಘಟನೆ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಪಗಲಾಪುರ ಗ್ರಾಮದ ಮಲ್ಲಮ್ಮ ( 65) ಮೃತಪಟ್ಟ ದುರ್ದೈವಿ. ಬೆಳಗ್ಗಿನ ಜಾವ 5.30 ಗಂಟೆಗೆ ಚೆನೈ- ಮುಂಬೈ ಸೂಪರ್ ಎಕ್ಸ್‌ಪ್ರೆಸ್‌ ರೈಲಿನಡಿಗೆ ಬಿದ್ದು ಅವರು ಮೃತಪಟ್ಟಿದ್ದಾರೆ.

ಪಗಲಾಪುರ ಗ್ರಾಮದ ನಿವಾಸಿ ಮಲ್ಲಮ್ಮ ಅವರು ತಮ್ಮ ಮಗನ ಜೊತೆ ಮುಂಬೈಗೆ ತೆರಳುತ್ತಿದ್ದರು. ಅವರು ರೈಲ್ವೆ ಸೇತುವೆ ಮೂಲಕ ಪ್ಲಾಟ್ ಫಾರ್ಮ್ ನಂಬರ್ 2ಕ್ಕೆ ತೆರಳಬೇಕಾಗಿತ್ತು. ಆದರೆ, ಮೇಲ್ಸೇತುವೆ ಹತ್ತಿ ಇಳಿಯುವುದು ತಡವಾಗುತ್ತದೆ ಎಂಬ ಕಾರಣಕ್ಕಾಗಿ ಅವರು ರೈಲ್ವೇ ಹಳಿ ದಾಟಿದ್ದರು. ಆಗ ಪ್ಲಾಟ್ ಫಾರ್ಮ್ ನಂಬರ್ 2ರಲ್ಲಿ ರೈಲು ಬಂದೇ ಬಿಟ್ಟಿದ್ದು, ಅವರಿಗೆ ಡಿಕ್ಕಿ ಹೊಡೆದಿದೆ. ರೈಲು ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ರೈಲ್ವೇ ಪೊಲೀಸರು ಭೇಟಿ ನೀಡಿದ್ದಾರೆ. ಶವವನ್ನು ಜಿಲ್ಲಾಸ್ಪತ್ರೆಯ ಶವಗಾರಕ್ಕೆ ಸ್ಥಳಾಂತರ ಮಾಡಲಾಗಿದೆ.

Exit mobile version