ಪಾಂಡುರಂಗ ಜಂತ್ಲಿ, ವಿಸ್ತಾರ ನ್ಯೂಸ್ ವಿಜಯನಗರ
ಆರೋಗ್ಯ ಇಲಾಖೆ ನಿರ್ಲಕ್ಷ್ಯವೋ, ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ಅಥವಾ ರಾಜಕೀಯ ಮೇಲಾಟವೋ ಗೊತ್ತಿಲ್ಲ. ಕೋಟಿ ಕೋಟಿ ಹಣ ವ್ಯಯಿಸಿ ಕಳೆದ ಒಂದು ವರ್ಷದ ಹಿಂದೆಯೇ ನಿರ್ಮಾಣ ಆದ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಭಾಗ್ಯವೇ ಕಂಡಿಲ್ಲ. ಇದು ಆರೋಗ್ಯ ಇಲಾಖೆ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿ. ಕೈಗೆ ಬಂದ ತುತ್ತು ಬಾಯಿಗೆ ತಲುಪದ ಈ ಸ್ಥಿತಿ ಇರುವುದು ಕೊಟ್ಟೂರು ತಾಲೂಕಿನ ಕೋಗಳಿ ಹೋಬಳಿಯಲ್ಲಿ.
ಕೆಲವು ವರ್ಷದ ಹಿಂದೆ ಆಸ್ಪತ್ರೆ ಶಿಥಿಲಾವಸ್ಥೆಯಲ್ಲಿದೆ. ಅದನ್ನು ತೆರವುಗೊಳಿಸಿ ಹೊಸ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಹತ್ತಾರು ಹಳ್ಳಿಯ ಜನರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು, ಹೋರಾಟ ಮಾಡಿದ್ದರು. ಬೇಡಿಕೆಗೆ ಸ್ಪಂದಿಸಿ ಅನುದಾನ ಕೂಡಾ ಮಂಜೂರು ಕೂಡಾ ಆಯಿತು. ಬಳಿಕ ಕೋಟಿ ಕೋಟಿ ಹಣ ವ್ಯಯಿಸಿ ಆಸ್ಪತ್ರೆ ನಿರ್ಮಾಣವೂ ನಡೆದಿದೆ. ಆದರೆ, ಹೊಸ ಆಸ್ಪತ್ರೆ ಕಟ್ಟಡ ನಿರ್ಮಾಣ ಆಗಿ ಒಂದು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಿದ್ದರೂ ಜನರ ಪಾಲಿಗೆ ಊಟ ತಟ್ಟೆಯಲ್ಲಿದೆ, ಬಾಯಿಗೆ ಬರುತ್ತಿಲ್ಲ ಎಂಬಂತಾಗಿದೆ.
ಸಿದ್ದರಾಯ್ಯ ಸಿಎಂ ಇದ್ದಾಗ ಅನುದಾನ ಬಿಡುಗಡೆ
ರಾಜ್ಯದಲ್ಲಿ 2013ರಿಂದ 2018ರವರೆಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಕೋಗಳಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದ್ದರು. ಅಂದು ಹಾಗೂ ಇಂದು ಆ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕರೇ ಇದ್ದಾರೆ. ಜೊತೆಗೆ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿದಂತೆ ಒಳ್ಳೆಯ ರೀತಿ ಪ್ರಾಥಮಿಕ ಆರೋಗ್ಯ ಕೇಂದ್ರವೂ ನಿರ್ಮಾಣವಾಗಿದೆ. ಸುಣ್ಣ, ಬಣ್ಣದಿಂದ ಕಂಗೊಳಿಸುತ್ತಿದೆ. ಆದರ ಆಸ್ಪತ್ರೆ ಉದ್ಘಾಟನೆ ಭಾಗ್ಯ ಕಂಡಿಲ್ಲ.
ಒಂದು ಕೊಠಡಿ, ಮೂರು ಬೆಡ್!
ಹೊಸ ಆಸ್ಪತ್ರೆಯೇನೋ ಸುಸಜ್ಜಿತವಾಗಿಯೇ ಇದೆ. ಆದರೆ, ಅದು ಉದ್ಘಾಟನೆ ಆಗದೆ ಇರುವುದರಿಂದ ಹಳೆಯ ಆಸ್ಪತ್ರೆಯ ಒಂದೇ ಕೊಠಡಿಯಲ್ಲಿ ಮೂರು ಬೆಡ್‌ಗಳನ್ನು ಹಾಕಿ ಚಿಕಿತ್ಸೆ ನೀಡಬೇಕಾದ ದುಸ್ಥಿತಿ ಮುಂದುವರಿದಿದೆ. ಕೆಲವೊಮ್ಮೆ ಒಂದೇ ಬೆಡ್‌ನಲ್ಲಿ ಮೂರು ಜನರನ್ನು ಮಲಗಿಸಿ ತಪಾಸಣೆ ಮಾಡುವ ಸ್ಥಿತಿಯೂ ಬರುತ್ತಿದೆ. ಈ ಅವ್ಯವಸ್ಥೆಯಿಂದ ಕೋಗಳಿ ಹೋಬಳಿಯ ಸುತ್ತಮುತ್ತಲಿನ ಗ್ರಾಮಸ್ಥರು ಪರದಾಡಬೇಕಾಗಿದೆ. ಹೀಗಾಗಿ ಹೆಚ್ಚಿನವರು ಇಲ್ಲಿಗೆ ಚಿಕಿತ್ಸೆಗೆ ಬರದೆ ತಾಲೂಕು ಆಸ್ಪತ್ರೆಯತ್ತ ಮುಖ ಮಾಡ್ತಿದ್ದಾರೆ.
ಶಾಸಕ ಭೀಮಾನಾಯ್ಕರಿಗೂ ಆಸಕ್ತಿ ಇಲ್ಲ!
ಕೋಗಳಿ ಹೋಬಳಿ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ಕ್ಷೇತ್ರ ವ್ಯಾಪ್ತಿಗೆ ಬರುತ್ತದೆ. ವಿಶೇಷ ಏನಂದ್ರೆ ಶಾಸಕ ಭೀಮಾ ನಾಯ್ಕ್ ಅವರು ಹೋದಲ್ಲಿ ಬಂದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ, ತಮ್ಮದೇ ಕ್ಷೇತ್ರದಲ್ಲಿ ೨೦೧೯ರ ಸೆಪ್ಟೆಂಬರ್ ೧೩ರಂದು ಅಡಿಗಲ್ಲು ಹಾಕಿ ನಿರ್ಮಾಣಗೊಂಡ ಆಸ್ಪತ್ರೆ ಕಟ್ಟಡ ಸರ್ವ ರೀತಿಯಲ್ಲೂ ಸಜ್ಜಾಗಿದ್ದರೂ ಜನರಿಗೆ ಬಿಟ್ಟುಕೊಡುವ ಮನಸ್ಸು ಮಾಡುತ್ತಿಲ್ಲ ಯಾಕೆ ಎನ್ನುವ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ.
ಮಿರಮಿರನೆ ಮಿಂಚುತ್ತಿದೆ ಕೋಗಳಿ ಆಸ್ಪತ್ರೆ
ಕೊಟ್ಟೂರು ತಾಕೂಕಿನಲ್ಲೇ ಕೋಗಳಿ ದೊಡ್ಡ ಹೋಬಳಿ. ಹತ್ತಾರು ಗ್ರಾಮಕ್ಕೆ ಸಂಪರ್ಕ ಕೊಂಡಿ. ಹೋಬಳಿ ವ್ಯಾಪ್ತಿಯಲ್ಲಿ ಚಿಕುನ್‌ಗುನ್ಯಾ, ಮಲೇರಿಯಾ, ಶೀತ ಸೇರಿ ಹಲವು ಕಾಯಿಲೆಗಳು ಜೋರಾಗಿವೆ. ಹೀಗಾಗಿ ಸುಸಜ್ಜಿತ ಆಸ್ಪತ್ರೆಯ ಅಗತ್ಯ ತುರ್ತಾಗಿಯೇ ಇದೆ. ನಿಜವೆಂದರೆ ಈಗ ನಿರ್ಮಿಸಿರುವ ಆಸ್ಪತ್ರೆ ಕಟ್ಟಡದಲ್ಲಿ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ. ಇಸಿಜಿ, ಬ್ಲಡ್ ಚೆಕಪ್, ಐಸಿಯು ಸೇರಿ ಆಧುನಿಕವಾಗಿದೆ. ಆದೂ ಸರಿಯಾದ ಬೆಡ್, ನೀರು, ಟಾಯ್ಲೆಟ್ ವ್ಯವಸ್ಥೆಗಳು ಇನ್ನೂ ಸರಿ ಆಗಿ ಇಲ್ಲ ಎಂಬ ಅಭಿಪ್ರಾಯವಿದೆ. ಶಾಸಕರು ಇದನ್ನು ಗಮನಿಸಿ ಆದಷ್ಟು ಶೀಘ್ರವಾಗಿ ಆಸ್ಪತ್ರೆಯನ್ನು ಜನರ ಸೇವೆಗೆ ಬಿಟ್ಟುಕೊಡಬೇಕಾಗಿದೆ.
ಕೋಗಳಿ ಆಸ್ಪತ್ರೆ ನಿರ್ಮಾಣ ಮಾಡಿ ಏಳರಿಂದ ಎಂಟು ತಿಂಗಳು ಕಳೆದಿವೆ. ಆದ್ರೆ ಆಸ್ಪತ್ರೆ ಉದ್ಘಾಟನೆ ಕಾಣದೇ ಇರೋದು ವಿಪರ್ಯಾಸ. ಆಸ್ಪತ್ರೆಗೆ ಬೇಕಾದ ಬೆಡ್, ವೈದ್ಯರು ಸೇರಿ ಮೂಲಸೌಕರ್ಯ ಒದಗಿಸಿ ಸರ್ಕಾರ ಜನರಿಗೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಕೋಗಳಿ ಗ್ರಾಮದವರಾದ ಉಮೇಶ್ ಮತ್ತು ನಿಜಗುಣ.
ಜಿಲ್ಲಾ ಆರೋಗ್ಯಾಧಿಕಾರಿಗಳು ಏನಂತಾರೆ?
ಒಂದು ವರ್ಷದಿಂದ ಸಣ್ಣಪುಟ್ಟ ಕೆಲಸದಿಂದ ವಿಳಂಬ ಆಗಿದೆ. ಎರಡು ತಿಂಗಳ ಹಿಂದೆ ಭೇಟಿ ಕೊಟ್ಟಿದ್ದೇನೆ. ಅಲ್ಲಿರುವ ಸಮಸ್ಯೆಗಳನ್ನ ಖುದ್ದು ಆಲಿಸಿದ್ದೇನೆ. ಆದಷ್ಟು ಬೇಗ ಕೋಗಳಿ ಆಸ್ಪತ್ರೆ ಕಾರ್ಯ ನಿರ್ವಹಣೆಗೆ ಅನುವು ಮಾಡಿಕೊಡುತ್ತೇವೆ. ಇದೇ ತಿಂಗಳು 17ಕ್ಕೆ ಶಾಸಕ ಭೀಮಾ ನಾಯ್ಕ್ ರಿಂದ ಆಸ್ಪತ್ರೆ ಉದ್ಘಾಟನೆ ಆಗಲಿದೆ ಎನ್ನುತ್ತಾರೆ ವಿಜಯ ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಲೀಂ.
ಇದನ್ನೂ ಓದಿ| super speciality hospital | ಉತ್ತರ ಕನ್ನಡ ಜಿಲ್ಲೆ ಬೇಡಿಕೆ ತಿರಸ್ಕರಿಸಿದ ಸರಕಾರ, ಆರ್ಥಿಕ ಇಲಾಖೆ ತಣ್ಣೀರು