ವಿಜಯನಗರ : ದಕ್ಷಿಣ ಕಾಶಿ ಹಂಪಿಯಲ್ಲಿ ಜಿ-20 ಶೃಂಗ ಸಿದ್ಧತೆಯ ಕುರಿತ ಸಭೆ ಜುಲೈನಲ್ಲಿ ನಡೆಯಲಿದೆ. ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಹಂಪಿಯಲ್ಲಿ ಜಿ-20 ಶೃಂಗದ (G-20 Summit) ಸಿದ್ಧತೆಯ ಸಭೆ ನಡೆಯಲಿರುವುದು ವಿಶೇಷ.
ಭಾರತಕ್ಕೆ ಜಿ-20 ಅಧ್ಯಕ್ಷ ಸ್ಥಾನ ಲಭಿಸಿದ್ದು, ಹಂಪಿಯಲ್ಲಿ ಶೃಂಗದ ಪೂರ್ವಭಾವಿ ಸಭೆ ನಡೆಯಲಿದೆ. ಈಗಾಗಲೇ ಹಂಪಿಗೆ ವಿದೇಶಾಂಗ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಎರಡು ದಿನ ವಿವಿಧ ಅಧಿಕಾರಿಗಳ ಜತೆಗೆ ಕೇಂದ್ರದ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ.
ವಿದೇಶಾಂಗ ಇಲಾಖೆಯ ಜಂಟಿ ಕಾರ್ಯದರ್ಶಿ ಆಶೀಶ್ ಸಿನ್ಹಾ ನೇತೃತ್ವದಲ್ಲಿ ಸಭೆ ನಡೆದಿದೆ. ವಿಜಯನಗರ ಜಿಲ್ಲಾಡಳಿತದಿಂದಲೂ ಸಕಲ ಸಿದ್ಧತೆ ನಡೆದಿದೆ. ಜಿ-20 ಶೃಂಗದಲ್ಲಿ ರಾಜತಾಂತ್ರಿಕರು, ವಿದೇಶಿ ಪ್ರತಿನಿಧಿಗಳು ಭಾಗವಹಿಸುವುದರಿಂದ ಹಂಪಿಯ ಐತಿಹಾಸಿಕ ವಿಶೇಷತೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲು ಒಂದು ವೇದಿಕೆ ಸೃಷ್ಟಿಸಿದಂತಾಗಿದೆ.