Site icon Vistara News

Government Land Sale | ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗ ಮಾರಾಟ; ನಗರಸಭೆ ಮಾಜಿ ಸದಸ್ಯ ಸೆರೆ

ವಿಜಯನಗರ: ಇಲ್ಲಿನ ಹೊಸಪೇಟೆ ನಗರಸಭೆಯ ಮಾಜಿ ಸದಸ್ಯನ ಮೇಲೆ ಭೂಕಳ್ಳತನದ ಆರೋಪ ಕೇಳಿ ಬಂದಿದೆ. ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಜಾಗ ಮಾರಾಟ (Government Land Sale) ಮಾಡಿದ ಆರೋಪದಡಿ ದೂರು ದಾಖಲಾಗಿದೆ. ನಗರಸಭೆ ಮಾಜಿ ಸದಸ್ಯ ವೇಣುಗೋಪಾಲ್ ಬಂಧಿತ ಆರೋಪಿ.

ವೇಣುಗೋಪಾಲ್ ನಗರದ ಸಿರಸನಕಲ್ಲು ಪ್ರದೇಶದಲ್ಲಿನ ಸರ್ಕಾರಿ ಜಾಗ ಮಾರಾಟ ಮಾಡಿದ್ದಾನೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ತಮ್ಮ ಪತ್ನಿ ಭಾಗ್ಯ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ, ಸಂತೋಷ್ ಕುದುರೆಮೇಟಿ ಎನ್ನುವವರಿಗೆ ಜಾಗ ಮಾರಾಟ ಮಾಡಲಾಗಿದೆ.

16 ಲಕ್ಷ ರೂಪಾಯಿಗೆ ಖಾಲಿ ಜಾಗ ಮಾರಾಟ ಮಾಡಿದ್ದು, ಪತ್ನಿ ಭಾಗ್ಯ ಬ್ಯಾಂಕ್ ಮೂಲಕ ಹಣ ಸ್ವೀಕರಿಸಿದ್ದರು. ಜಮೀನು ಖರೀದಿ ಮಾಡಿದ ಸಂತೋಷ್ ಅವರಿಗೆ ಕಳೆದ ನಾಲ್ಕು ತಿಂಗಳ ಹಿಂದೆ ತಾವು ಖರೀದಿಸಿದ ಜಾಗ ಸರ್ಕಾರಿ ಸ್ವತ್ತು ಎಂದು ಗೊತ್ತಾಗಿದೆ.

ಹಣ ವಾಪಸ್‌ ಕೇಳಿದ್ದಕ್ಕೆ ಮಾಜಿ ಸದಸ್ಯನಿಂದ ಬೆದರಿಕೆ ಆರೋಪ

ಸರ್ಕಾರಿ ಜಾಗವೆಂದು ತಿಳಿಯುತ್ತಿದ್ದ ಹಾಗೆ ಸಂತೋಷ್‌ ನಗರಸಭೆಯ ಮಾಜಿ ಸದಸ್ಯನಿಗೆ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಈ ವೇಳೆ ಆಗಸ್ಟ್‌ 21ರಂದು ಅಟ್ರಾಸಿಟಿ ಕೇಸ್ ದಾಖಲಿಸುವುದಾಗಿ ವೇಣುಗೋಪಾಲ್ ಬೆದರಿಕೆ ಹಾಕಿದ್ದಾನೆನ್ನಲಾಗಿದೆ. ಇದೇ ವಿಚಾರವಾಗಿ ಸಂತೋಷ್ ಪೊಲೀಸರಿಗೆ ದೂರು ನೀಡಿದ್ದರು.

ದೂರು ನೀಡುತ್ತಿದ್ದಂತೆ ನಗರಸಭೆ ಮಾಜಿ ಸದಸ್ಯ ವೇಣುಗೋಪಾಲ್ ಪರಾರಿಯಾಗಿದ್ದ. ಈಗ ತನಿಖೆ ನಡೆಸಿದ ಹೊಸಪೇಟೆ ನಗರ ಠಾಣೆ ಪೊಲೀಸರು, ವೇಣುಗೋಪಾಲ್‌ನನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

ಇದನ್ನೂ ಓದಿ | ವಿವಾದಾತ್ಮಕ ಮಸೂದೆ ಮಂಡನೆಗೆ ಮುಂದಾದ ಸರ್ಕಾರ: ಭೂಕಬಳಿಕೆ ವಿಧೇಯಕ ಗುರುವಾರಕ್ಕೆ ಮುಂದೂಡಿಕೆ

Exit mobile version