Site icon Vistara News

Hampi Utsav 2024: ಹಂಪಿ ಉತ್ಸವದಲ್ಲಿ ಆಕರ್ಷಕ ಶ್ವಾನ ಪ್ರದರ್ಶನ; ಗಮನ ಸೆಳೆದ ವಿವಿಧ ತಳಿಗಳು

Dog show at the Hampi Utsav

ಹೊಸಪೇಟೆ(ವಿಜಯನಗರ): ಹಂಪಿ ಉತ್ಸವ -2024 (Hampi Utsav 2024)ರ ಅಂಗವಾಗಿ ಭಾನುವಾರ ಕಮಲಾಪುರದ ಹವಾಮಾ ಕಚೇರಿ ಹಿಂಭಾಗದ ಆವರಣದಲ್ಲಿ ಆಯೋಜಿಸಲಾಗಿದ್ದ ಶ್ವಾನ ಪ್ರದರ್ಶನ‌ವು ಜನರಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿತು. ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಹುದುಗಿಸಿಟ್ಟ ಬಾಂಬ್ ಹುಡುಕಿದ ಲೂಸಿ, ಅಪರಾಧಿ ಪತ್ತೆ ಹಚ್ಚಿದ ಬ್ರೂನೋ, ಕದ್ದವಸ್ತು ಕಂಡುಹಿಡಿದ ಸಿಂಬಾ ಎಂಬ ವಿಜಯನಗರ ಜಿಲ್ಲಾ ಪೊಲೀಸ್‌ ಶ್ವಾನದಳದ ಶ್ವಾನಗಳ ಜಾಣ್ಮೆಗೆ ಜನ ಬೆರಗಾದರು. ಇದೇ ಮೊದಲ ಬಾರಿ ಹಂಪಿ ಉತ್ಸವದ ಶ್ವಾನ ಪ್ರದರ್ಶನದಲ್ಲಿ ಪೊಲೀಸ್ ಶ್ವಾನಗಳು ಭಾಗವಹಿಸಿದ್ದವು.

ಇದನ್ನೂ ಓದಿ: KPSC Recruitment 2024: ವಿವಿಧ ಇಲಾಖೆಗಳಲ್ಲಿನ 1,227 ಹುದ್ದೆಗಳಿಗೆ ನೇಮಕ; ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಕೆ

ಒಂದೂವರೆ ವರ್ಷದ ಬ್ರೂನೋ ಡಾಬರ್‌ಮನ್ ಜಾತಿ ಸೇರಿದ ನಾಯಿ. ಸುಮಾರು 19 ಅಪರಾಧ ಪ್ರಕರಣಗಳಲ್ಲಿ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದೆ. ಲಾಬ್ರಡಾರ್ ಜಾತಿಗೆ ಸೇರಿದ ಎರಡು ವರ್ಷದ ಲೂಸಿ ಬಾಂಬ್ ಪತ್ತೆ ಹಚ್ಚುವಲ್ಲಿ, ಇನ್ನೂ ಇದೇ ಜಾತಿಗೆ ಸೇರಿದ ಸಿಂಬಾ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಪೊಲೀಸರ ಕಾರ್ಯದಲ್ಲಿ ನೆರವಾಗುತ್ತಿದ್ದಾನೆ.

19 ತಳಿಯ 66ಕ್ಕೂ ಹೆಚ್ಚು ಶ್ವಾನಗಳು ಭಾಗಿ

ಈ ಬಾರಿಯ ಉತ್ಸವದಲ್ಲಿ 19 ವಿವಿಧ ಜಾತಿಯ ದೇಶಿ ಹಾಗೂ ವಿದೇಶಿ ತಳಿಗಳ 66ಕ್ಕೂ ಹೆಚ್ಚು ಶ್ವಾನಗಳು ತಮ್ಮ ಮಾಲೀಕರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಗ್ರೇಟ್ ಡೆನ್ ಶ್ವಾನ ಚಾಂಪಿಯನ್

ಶ್ವಾನ ಪ್ರದರ್ಶನದಲ್ಲಿ ಹೊಸಪೇಟೆ ನಗರದ ವೀರು ಅವರ ಗ್ರೇಟ್ ಡೆನ್ ತಳಿಗೆ ಸೇರಿದ ಶ್ವಾನ ಚಾಂಪಿಯನ್ ಆಫ್ ಚಾಂಪಿಯನ್ ಪಟ್ಟ ಅಲಂಕರಿಸಿ, ರೂ.10,000 ನಗದು ಪುರಸ್ಕಾರವನ್ನು ಪಡೆದಿದೆ. ಮರಿಯಮ್ಮನಹಳ್ಳಿಯ ಸತೀಶ್ ಚಿದ್ರಿಯವರ ಡಾಬರ್ ಮನ್ ದ್ವೀತಿಯ ಸ್ಥಾನ ಪಡೆಯುವುದರೊಂದಿಗೆ ರೂ.7,500 ನಗದು ಬಹುಮಾನಕ್ಕೆ ಪಾತ್ರವಾಯಿತು. ಇನ್ನು ಮರಿಯಮ್ಮನಹಳ್ಳಿಯ ಬಸವರಾಜ್ ಅವರ ಮುದೋಳ ಹೌಂಡ್ ತೃತೀಯ ಸ್ಥಾನ ಪಡೆದು ರೂ.5000 ನಗದು ತನ್ನದಾಗಿಸಿಕೊಂಡಿತು. ಶ್ರೇಯಸ್ ಅವರ ಟಾಯ್ ಪಾಪ್, ಶಿವಪ್ರಸಾದ್ ಅವರ ಸೈಬೀರಿಯನ್ ಹಸ್ಕಿ, ಕಾರ್ತಿಕ್ ಅವರ ಬೀಗಲ್, ಲಕ್ಷ್ಮೀ ನಾರಾಯಣ ಅವರ ಸಿಡ್ಜು ತೀರ್ಪುಗಾರರ ಮೆಚ್ಚುಗೆ ಪಡೆದು, ಪ್ರಶಂಸೆಗೆ ಪಾತ್ರವಾದವು.

ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನ ಪ್ರೊ. ಡಾ. ಬಸವಾರಾಜ್ ಬಾಳಣ್ಣನವರ್, ಶಿವಮೊಗ್ಗ ಪಾಲಿ ಕ್ಲೀನಿಕ್‌ನ ಡಾ.ಬಸವರಾಜ ಹೂಗಾರ್, ಹಿರಿಯ ಪಶುವೈದ್ಯಾಧಿಕಾರಿ ಡಾ.ಶ್ರೀಪಾದ್ ರಾವ್ ಶ್ವಾನ ಪ್ರದರ್ಶನ ಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಮೂಲ ಜಾತಿ ತಳಿ, ದೇಹದಾರ್ಡ್ಯತೆ, ಚುರುಕುತನ ಮಾಲಿಕರೊಂದಿಗೆ ಅವಿನಾಭ ಸಂಬಂಧದ ಆಧಾರದ ಮೇಲೆ ವಿಜೇತ ಶ್ವಾನಗಳನ್ನು ಆಯ್ಕೆ ಮಾಡಲಾಯಿತು.

ಇದನ್ನೂ ಓದಿ:Viral News: ಪುಸ್ತಕಗಳಿಗಾಗಿ 1 ಕೋಟಿ ರೂಪಾಯಿ ಖರ್ಚು ಮಾಡಿದ ಶಿಕ್ಷಕ!

ಈ ವೇಳೆ ಪಶುಸಂಗೋಪನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ಪಾಮ್‌ಸಿಂಗ್, ಸಹಾಯಕ ನಿರ್ದೇಶಕ ಡಾ. ಬೆಣ್ಣಿ ಬಸವರಾಜ, ಪಶು ವೈದ್ಯಾಧಿಕಾರಿ ಡಾ. ಮಲ್ಲಿಕಾರ್ಜುನ್, ಡಾ. ಯುಗೇಂದ್ರ ಮಾನ್ವಿ ಉಪಸ್ಥಿತರಿದ್ದರು.

Exit mobile version