Site icon Vistara News

Leopard attack: ಬೈಕ್‌ನಲ್ಲಿ ಹೋಗುತ್ತಿದ್ದಾಗ ಚಿರತೆ ದಾಳಿ, ಯುವಕನಿಗೆ ಗಾಯ

leopard attack

ವಿಜಯನಗರ: ಚಿರತೆಯೊಂದು ಬೈಕ್ ಸವಾರನ ಮೇಲೆರಗಿ ಗಾಯಗೊಳಿಸಿದ ಘಟನೆ (Leopard attack) ಹಡಗಲಿ ತಾಲೂಕಿನ ಮಾಗಳ- ಹಿರೇಹಡಗಲಿ ಗ್ರಾಮಗಳ ರಸ್ತೆ ಮಧ್ಯೆ ನಡೆದಿದೆ.

ಪ್ರವೀಣ ಎಂಬ ಯುವಕ ಗಾಯಗೊಂಡವನು. ಚಿರತೆ ದಾಳಿ ಮಾಡಿದಾಗ ಯುವಕ ಗಾಬರಿಗೊಂಡು ಚೀರಾಡಿದ್ದು, ಯುವಕನ ಚೀರಾಟ ಕೇಳಿ ಸುತ್ತಮುತ್ತಲಿನ ಜನರು ಧಾವಿಸಿ ಬಂದಿದ್ದಾರೆ. ಜನರ ಕೂಗಾಟ, ಚೀರಾಟದ ಬಳಿಕ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಗಾಯಗೊಂಡ‌ ಯುವಕನನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿರತೆ ತಾನಾಗಿಯೇ ದಾಳಿ ಮಾಡಿದೆಯೇ ಅಥವಾ ಪ್ರಚೋದನೆಗೆ ಒಳಗಾಯಿತೇ ಎಂಬುದು ಗೊತ್ತಾಗಿಲ್ಲ.

ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹನುಮನಹಳ್ಳಿ ಆಸುಪಾಸಿನಲ್ಲಿ ಇತ್ತೀಚೆಗೆ ಚಿರತೆ (Leopard sighting) ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನರಲ್ಲಿ ಆತಂಕ ಹೆಚ್ಚಿದೆ. ಈ ಭಾಗದಲ್ಲಿ ಚಿರತೆ ದಾಳಿಯೂ ಹೆಚ್ಚುತ್ತಿದ್ದು, ಸಾಕಿದ ಜಾನುವಾರುಗಳನ್ನು ಹಿಡಿದ ಪ್ರಕರಣಗಳು ವರದಿಯಾಗಿವೆ ಇದೀಗ ಮನುಷ್ಯರ ಮೇಲೂ ದಾಳಿ ಮಾಡಲು ಮುಂದಾಗಿರುವುದು ಆತಂಕ ಹೆಚ್ಚಿಸಿದೆ. ಭಯದ ವಾತಾವರಣದಲ್ಲೇ ಸಾರ್ವಜನಿಕರ ದಿನಚರಿ ನಡೆಯುತ್ತಿದ್ದು, ಈ ಹಳ್ಳಿಗಳ ಸುತ್ತಲಿರುವ ಕಾರ್ಖಾನೆಗಳಿಗೆ ಹೋಗುವ ಕಾರ್ಮಿಕರಿಗೂ ಆತಂಕ ಮೂಡಿದೆ. ಬೋನು ಇಟ್ಟು ಚಿರತೆ ಸೆರೆಹಿಡಿಯಲು ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಬೋನಿಗೆ ಬಿದ್ದ ನರಹಂತಕ ಚಿರತೆ

ಶಿವಮೊಗ್ಗ: ಜಿಲ್ಲೆಯ ಬಿಕ್ಕೋನಹಳ್ಳಿಯಲ್ಲಿ ಯಶೋದಮ್ಮ ಎಂಬ ಮಹಿಳೆಯನ್ನು‌ ಕೊಂದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಇತ್ತೀಚಿಗೆ ಬೀರನಕೆರೆಯಲ್ಲಿ ನಾಯಿಯನ್ನು ಕಚ್ಚಿದ್ದ ಚಿರತೆ ಶನಿವಾರ ಬನ್ನಿಕೆರೆಯಲ್ಲಿ ಕಳೆ ಕೀಳಲು ತೆರಳಿದ್ದ ಯುವಕನಿಗೆ ಕಂಡಿತ್ತು. ಅರಣ್ಯ ಇಲಾಖೆ ಬಿಕ್ಕೋನಹಳ್ಳಿಯಲ್ಲಿ ಇಟ್ಟಿದ್ದ ಬೋನಿಗೆ ಬಿದ್ದ ನರಹಂತಕ ಚಿರತೆ ಬಿದ್ದಿದೆ. ಹಿಡಿದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಲಯನ್ ಸಫಾರಿಗೆ ಬಿಟ್ಟಿದ್ದಾರೆ.

Exit mobile version