ಹೊಸಪೇಟೆ: ಜನತಾ ದರ್ಶನ (Janata Darshan) ಮೂಲಕ ಕೇವಲ ಸಾರ್ವಜನಿಕರ (Publics) ಅಹವಾಲು ಕೇಳುವುದು ಮಾತ್ರವಲ್ಲದೇ ಆದಷ್ಟು ಶೀಘ್ರವಾಗಿ ಪರಿಹಾರ ಒದಗಿಸುವ ಕ್ರಮವನ್ನು ಕೈಗೊಂಡು ನಾಗರಿಕರಲ್ಲಿ ಭರವಸೆ ಮೂಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್.ಜಮೀರ್ ಅಹ್ಮದ್ ಖಾನ್ ತಿಳಿಸಿದರು.
ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜನತಾ ದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಮುಖ್ಯಮಂತ್ರಿಗಳ ಬಳಿ ಸಲ್ಲಿಸಲು ತೆರಳುತ್ತಿದ್ದರು. ಅದರ ಬದಲಾಗಿ ಜಿಲ್ಲೆಯಲ್ಲೆ ಜನತಾ ದರ್ಶನ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಕೆಲವೊಂದನ್ನು ಸ್ಥಳದಲ್ಲಿಯೇ ಪರಿಹರಿಸಿ, ಸಾರ್ವಜನಿಕರಿಂದ ಸಲ್ಲಿಕೆಯಾದ ಅರ್ಜಿಗಳನ್ನು ಐಪಿಜಿಆರ್‌ಎಸ್ ತಂತ್ರಾಂಶದಲ್ಲಿ ನಮೂದಿಸಿ ಮೊಬೈಲ್ ಮೂಲಕ ಅರ್ಜಿದಾರರನ್ನು ಸಂಪರ್ಕಿಸಿ ಪರಿಹಾರ ಒದಗಿಸಲಾಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: Weather Report : ಮಾಸಾಂತ್ಯದವರೆಗೂ ಮಳೆ; 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾರ್ವಜನಿಕರು ಆಯಾ ಇಲಾಖೆಯ ಕೌಂಟರ್ ಬಳಿ ಅರ್ಜಿ ಸಲ್ಲಿಸಿದರೆ ಇನ್ನೂ ಕೆಲವರು ನೇರವಾಗಿ ಉಸ್ತುವಾರಿ ಸಚಿವರನ್ನು, ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದರು. 1 ಗಂಟೆಗಳ ಕಾಲ ಸ್ವತಃ ಸಚಿವರೇ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಜಿಲ್ಲಾಧಿಕಾರಿಗಳು ಸಹ ಸ್ಥಳದಲ್ಲೇ ಇದ್ದು ಇದರ ಬಗ್ಗೆ ಮಾಹಿತಿ ಪಡೆದುಕೊಂಡರು.
ವಿವಿಧ ಇಲಾಖೆಯ 20 ಕೌಂಟರ್ ಸ್ಥಾಪನೆ
ಸಾರ್ವಜನಿಕರಿಂದ ಅಹವಾಲು ಸಲ್ಲಿಕೆಗೆ ಜಿಲ್ಲಾಡಳಿತದಿಂದ 20 ಕೌಂಟರ್ ಸ್ಥಾಪಿಸಲಾಗಿತ್ತು, ಇಲಾಖಾವಾರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ತಲಾ ಇಬ್ಬರು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಕಂದಾಯ ಇಲಾಖೆ ಸೇರಿದಂತೆ ಭೂ ದಾಖಲೆ, ಆಹಾರ ಮತ್ತು ನಾಗರಿಕ ಸರಬರಾಜು , ಮಜೂರಿ, ಜಿಲ್ಲಾ ನೋಂದಣಿ, ಗ್ರಾಮೀಣಾಭಿವೃದ್ಧಿ , ಗ್ರಾಮೀಣ ಕುಡಿಯುವ ನೀರು ಸರಬರಾಜು, ಕೃಷಿ, ತೋಟಗಾರಿಕೆ, ಮೀನುಗಾರಿಕೆ ಮತ್ತು ಪಶುಸಂಗೋಪನೆ, ಅರಣ್ಯ, ಅಬಕಾರಿ, ಗಣಿ ಮತ್ತು ಭೂವಿಜ್ಞಾನ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಎಲ್ಲಾ ನಿಗಮ ಮಂಡಳಿಗಳು, ಶಿಕ್ಷಣ, ಜೆಸ್ಕಾಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಗೃಹ, ನಗರಸಭೆ ಮತ್ತು ಸ್ಥಳೀಯ ಸಂಸ್ಥೆಗಳು, ನೀರಾವರಿ, ನಗರಾಭಿವೃದ್ಧಿ, ಹಂಪಿ ವಿಶ್ವಪಾರಪಂರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರ(ಹವಾಮಾ), ಕಾರ್ಮಿಕ, ಪ್ರಾದೇಶಿಕ ಸಾರಿಗೆ ಇಲಾಖೆ(ಆರ್‌ಟಿಒ), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಆಯುಷ್ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಇಲಾಖೆಗಳ ಕೌಂಟರ್ ತೆರೆದು ಸಾರ್ವಜನಿಕರಿಂದ ಅರ್ಜಿ ಮತ್ತು ಅಹವಾಲುಗಳನ್ನು ಸ್ವೀಕರಿಸಿ ಕಂಪ್ಯೂಟರ್‌ನಲ್ಲಿ ನಮೂದಿಸಿ ಸ್ವೀಕೃತಿಯನ್ನು ಅರ್ಜಿದಾರರಿಗೆ ನೀಡಲಾಯಿತು.
ಇದನ್ನೂ ಓದಿ: Ganesh Chaturthi: 100 ಫ್ಯಾನ್‌ಗಳಲ್ಲಿ ಅರಳಿದ ಗಣಪ; ಹ್ಯಾವಲ್ಸ್ ಕಂಪೆನಿಯ ಕ್ರಿಯೆಟಿವಿಟಿಗೆ ನೆಟ್ಟಿಗರ ಮೆಚ್ಚುಗೆ
ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಸೇರಿದಂತೆ ಕೆಲ ಪಿಂಚಣಿ ಸೌಲಭ್ಯವನ್ನು ಸ್ಥಳದಲ್ಲಿಯೇ ಇತ್ಯಾರ್ಥ ಮಾಡಿಕೊಡಲಾಯಿತು.
ಸಂಜೆಯವರೆಗೂ ನಡೆದ ಜನತಾ ದರ್ಶನದಲ್ಲಿ ವಿವಿಧ ತಾಲೂಕಿನಿಂದ ಆಗಮಿಸಿದ್ದ ಸಾರ್ವಜನಿಕರು ಆಯಾ ಇಲಾಖೆಯ ಕೌಂಟರ್‌ಗಳ ಬಳಿ ತೆರಳಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 154 ಹಾಗೂ ನಗರಸಭೆಗೆ 520 ಅರ್ಜಿಗಳು ಸೇರಿದಂತೆ ಒಟ್ಟು 992 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಇದನ್ನೂ ಓದಿ: Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
ಈ ಸಂದರ್ಭದಲ್ಲಿ ಶಾಸಕರಾದ ಎಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ದಿವಾಕರ್ ಎಂ.ಎಸ್., ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್., ಆರ್‌ಎಫ್‌ಒ ಅರ್ಸಲನ್, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಉಪವಿಭಾಗಾಧಿಕಾರಿ ನೋಂಗ್ಡಾಯ್ ಮೊಹಮ್ಮದ್ ಅಲಿ ಅಕ್ರಮ್ ಶಾ, ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಸೇರಿದಂತೆ ಅಧಿಕಾರಿಗಳು ಇದ್ದರು.