ಹೊಸಪೇಟೆ(ವಿಜಯನಗರ): ರಾಜ್ಯದಲ್ಲಿ ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಆದರೆ ಕಾಂಗ್ರೆಸ್‌ನ ಅನೇಕರಲ್ಲಿ ಈ ಬಗ್ಗೆ ಸಂತಸ ಕಾಣುತ್ತಿಲ್ಲ. ಬದಲಾಗಿ ಅನೇಕ ಹಿರಿಯ ಕಾಂಗ್ರೆಸಿಗರಲ್ಲಿ ಅಸಮಾಧಾನ ಇದೆ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ (MLC Election) ಹೇಳಿದರು.
ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ನಿಮಿತ್ತ ವಿಜಯನಗರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಸೋಮವಾರ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಲೋಕಸಭಾ ಚುನಾವಣೆ ವೇಳೆ ಗ್ಯಾರಂಟಿ ಹೆಸರಿನಲ್ಲಿ ಮಹಿಳೆಯರಿಗೆ ಒಂದೇ ಸಲಕ್ಕೆ 6 ಸಾವಿರ ರೂಪಾಯಿ ಹಾಕಿದ್ದಾರೆ. ಆಗಲೂ ಕಾಂಗ್ರೆಸ್‌ಗೆ ಮತ ಬೀಳುವುದಿಲ್ಲ ಎನ್ನುವ ಕಾರಣಕ್ಕೆ ಪ್ರತಿ ಮತಕ್ಕೆ ಹಣ ನೀಡಿ ಆಮಿಷ ಒಡ್ಡಿದ್ದಾರೆ. ಕೆಲ ಕ್ಷೇತ್ರದಲ್ಲಿ 300 ಕೋಟಿ ಹಣ ಖರ್ಚು ಮಾಡಿರುವ ಮಾಹಿತಿ ನಮಗಿದೆ ಎಂದು ಆರೋಪಿಸಿದ ಅವರು, ಇಷ್ಟಾದರೂ ಸಹ ಕಾಂಗ್ರೆಸ್‌ಗಿಂತ ಬಿಜೆಪಿಯೇ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Food Department : ಜೀವಂತ ಇದ್ದವಳನ್ನು ಸತ್ತಿದ್ದಾಗಿ ಘೋಷಿಸಿದ ಆಹಾರ ಇಲಾಖೆ; ರೇಷನ್ ಕಾರ್ಡ್‌ನಿಂದಲೇ ಹೆಸರು ಡಿಲೀಟ್
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಸಹೋದರಿಯರು ಶಾಲಾ ಕಾಲೇಜಿಗೆ ಸುರಕ್ಷಿತವಾಗಿ ಹೋಗಿ ಬರುವುದು ಕಷ್ಟವಾಗಿದೆ. ಹುಬ್ಬಳ್ಳಿಯಲ್ಲಿ ಬೆಳಗಿನಜಾವ 6 ಗಂಟೆಗೆ ಅಂಜಲಿ ಎಂಬ ಸಹೋದರಿಯ ಹತ್ಯೆಯಾಗಿದೆ. ಇದಕ್ಕು ಒಂದು ತಿಂಗಳ ಮುನ್ನ ನೇಹ ಹಿರೇಮಠ ಎನ್ನುವ ಸಹೋದರಿಯ ಹತ್ಯೆಯಾಗಿದೆ. ಕಲಬುರಗಿಯಲ್ಲಿ ಅರ್ಜುನ ಮಡಿವಾಳರ ಎನ್ನುವ ವ್ಯಾಪಾರಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದನ್ನೆಲ್ಲ ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ ಎಂದು ಕಿಡಿಕಾರಿದರು.
10ನೇ ತರಗತಿ ಫಲಿತಾಂಶ ಗಣನೀಯ ಕುಸಿತ
ಹತ್ತನೇ ತರಗತಿ ಫಲಿತಾಂಶದಲ್ಲಿ ಗಣನೀಯ ಕುಸಿತ ಕಂಡಿದೆ. ಶಿಕ್ಷಣ ಸಚಿವರಿಗೆ ಕನ್ನಡ ಬರುವುದಿಲ್ಲ. ಈ ಸಚಿವನಿಗೆ ಯಾವುದೇ ಗಾಂಭೀರ್ಯ ಇಲ್ಲ. ಶರಣರು, ಸಂತರು ಜನಿಸಿ ಸಾಹಿತ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನಲ್ಲಿ ಇಂತಹ ಸಚಿವ ಶಿಕ್ಷಣ ಖಾತೆ ಮಂತ್ರಿಯಾಗಿರುವುದು ಶೋಚನೀಯ. ರಾಜ್ಯದ ಸಾವಿರಾರು ಶಾಲೆಗಳು ಶಿಥಿಲಾವಸ್ಥೆಯಲ್ಲಿವೆ, ಶಿಕ್ಷಕರ ನೇಮಕಾತಿ ಇಲ್ಲ, ಶಿಕ್ಷಣ ಕ್ಷೇತ್ರದಲ್ಲಿ ಗಣನೀಯ ಸಾಧನೆಯಾಗಬೇಕಿದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಮತ ಹಾಕದಂತೆ ನೋಡಿಕೊಂಡು ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ರನ್ನು ಗೆಲ್ಲಿಸುವ ಕೆಲಸ ಮಾಡೋಣ ಎಂದು ಹೇಳಿದರು.
ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಯುದ್ಧೋಪಾದಿಯಲ್ಲಿ ಮತದಾರರ ಮನೆಗೆ ತೆರಳಿ ಪಕ್ಷ ಹಾಗೂ ನನ್ನ ಪರ ಕೆಲಸ ಮಾಡಿದ್ದೀರಿ. ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಿ ಮಾಡುವ ಸಂಕಲ್ಪ ನಮ್ಮದೆಲ್ಲರದ್ದೂ ಇದೆ. ಜನರ ಒಲವು ಬಿಜೆಪಿ ಪರ ಇದೆ. ಈ ಬಾರಿ ನಾನು ಗೆಲ್ಲುವ ವಿಶ್ವಾಸವಿದ್ದು, ಇಡೀ ಕ್ಷೇತ್ರದ ಜನರ ಋಣ ತೀರಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: History Of Ice Cream: ಎಲ್ಲರ ನೆಚ್ಚಿನ ಐಸ್‌ಕ್ರೀಮ್ ಹುಟ್ಟಿದ್ದು ಹೇಗೆ?
ಅಮರನಾಥ ಪಾಟೀಲ್ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಹಾಕಿಸುವ ಮೂಲಕ ಗೆಲ್ಲಿಸೋಣ ಎಂದು ಅವರು ಮನವಿ ಮಾಡಿದರು.
ಪದವೀಧರ ಕ್ಷೇತ್ರದ ಅಭ್ಯರ್ಥಿ ಅಮರನಾಥ ಪಾಟೀಲ್ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ತಮಗೆ ಪ್ರಥಮ ಪ್ರಾಶಸ್ತ್ಯದ ಮತ ಹಾಕಿಸಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ: Silver Jewel Trend: ಬಂಗಾರದ ಆಭರಣಗಳಿಗೆ ಸೆಡ್ಡು ಹೊಡೆದ ಸಿಲ್ವರ್ ಜ್ಯುವೆಲರಿಗಳು!
ಈ ವೇಳೆ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ರಾಜ್ಯ ಒಬಿಸಿ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ಮುಖಂಡರಾದ ಎಚ್. ಪೂಜಪ್ಪ, ಚಂದ್ರಶೇಖರ ಪಾಟೀಲ ಹಲಗೇರಿ, ಓದೋಗಂಗಪ್ಪ, ಸಂಜೀವರೆಡ್ಡಿ, ಬಲ್ಲಾಹುಣ್ಸಿ ರಾಮಣ್ಣ, ಕಿಚಿಡಿ ಕೊಟ್ರೇಶ್ ಹಾಗೂ ಕೆ.ಎಲ್. ಮಹೇಶ್ವರಸ್ವಾಮಿ, ಸಿದ್ಧಾರ್ಥ ಸಿಂಗ್, ಬಸವರಾಜ ಕರ್ಕಿಹಳ್ಳಿ, ಬಿ. ಶಂಕರ್, ಶಂಕರ್ ಮೇಟಿ, ಸಾಲಿ ಸಿದ್ದಯ್ಯಸ್ವಾಮಿ, ಶಿವಶಂಕರ್ ಸೇರಿದಂತೆ ವಿವಿಧ ಮೋರ್ಚಾಗಳ ಜಿಲ್ಲಾಧ್ಯಕ್ಷರು, ಜಿಲ್ಲಾ ಮತ್ತು ಮಂಡಲಗಳ ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.