ವಿಜಯನಗರ: ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಂದು ಹಾಕಿರುವ ಘಟನೆ (Murder case) ವಿಜಯನಗರದ ಹೂವಿನ ಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ನಡೆದಿದೆ. ಎಚ್.ಡಿ. ಕೋಟೆ ತಾಲೂಕಿನ ಮಾದಾಪುರ ಗ್ರಾಮದ ಡಿಂಪಲ್ರನ್ನು (28) ಪತಿ ಶ್ರೀಕಾಂತ್ ಹತ್ಯೆ ಮಾಡಿದ್ದಾರೆ.
ಡಿಂಪಲ್ ಉಲವತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಸಮುದಾಯ ಕೇಂದ್ರದ ಆರೋಗ್ಯಾಧಿಕಾರಿಯಾಗಿದ್ದರು. ಕಳೆದ ವರ್ಷ ಕೋಗಳಿ ತಾಂಡಾದ ನಿವಾಸಿ ಶ್ರೀಕಾಂತ್ ಎಂಬಾತನನ್ನು ಡಿಂಪಲ್ ಮದುವೆ ಆಗಿದ್ದರು. ಆರೋಪಿ ಶ್ರೀಕಾಂತ್ ಕೂಡ ನೆಲ್ಲುಕುದರಿ ಗ್ರಾಮದ ಪ್ರಾ. ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಯಾಗಿದ್ದ.
ಶ್ರೀಕಾಂತನನ್ನು ಪ್ರೀತಿಸಿ ಡಿಂಪಲ್ ಮದುವೆಯಾಗಿದ್ದರು. ಪ್ರಾಥಮಿಕ ಮಾಹಿತಿ ಪ್ರಕಾರ ಡಿಂಪಲ್ಗೆ ಇದು ಎರಡನೇ ಮದುವೆ ಎನ್ನಲಾಗಿದೆ. ಇಟ್ಟಿಗಿ ಗ್ರಾಮದಲ್ಲಿ ದಂಪತಿ ಅನ್ಯೋನ್ಯವಾಗಿ ವಾಸವಿದ್ದರು. ನಿನ್ನೆ ಶುಕ್ರವಾರ (ನ.24) ಇದ್ದಕ್ಕಿದ್ದಂತೆ ಪತಿ – ಪತ್ನಿ ನಡುವೆ ಜಗಳ ಆಗಿದೆ. ಆ ಜಗಳದಲ್ಲಿ ಸಿಟ್ಟಿಗೆದ್ದು ಡಿಂಪಲ್ರನ್ನೆ ಶ್ರೀಕಾಂತ್ ಕೊಲೆ ಮಾಡಿದ್ದಾನೆ.
ಹತ್ಯೆ ಮಾಡಿದ ಬಳಿಕ ಶ್ರೀಕಾಂತ್ ನೇರವಾಗಿ ಇಟ್ಟಗಿ ಠಾಣೆಗೆ ತೆರಳಿ ನಡೆದಿದ್ದನ್ನು ಪೊಲೀಸರಿಗೆ ತಿಳಿಸಿ, ಶರಣಾಗಿದ್ದಾನೆ. ಶ್ರೀಕಾಂತ್ ಮಾಹಿತಿ ಮೇರೆಗೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Captain Pranjal: ವೀರಯೋಧ ಪ್ರಾಂಜಲ್ ಅಂತಿಮ ಯಾತ್ರೆ; ಕಣ್ಣೀರಿಟ್ಟ ಸಹಸ್ರಾರು ಮಂದಿ
ಅನೈತಿಕ ಸಂಬಂಧವೇ ಕೊಲೆಗೆ ಕಾರಣ?
ಇಟ್ಟಗಿಯಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಮೃತ ಡಿಂಪಲ್ ಸಂಬಂಧಿಕರು ಆಕ್ರೋಶ ಹೊರಹಾಕಿದ್ದು, ನನ್ನ ತಂಗಿಯನ್ನು ಕೊಂದವನಿಗೂ ಅದೇ ಶಿಕ್ಷೆಯಾಗಲಿ ಎಂದು ಕಿಡಿಕಾಡಿದ್ದಾರೆ. ಕೊಲೆಯಾದ ಡಿಂಪಲ್ಗೆ 9 ತಿಂಗಳ ಮಗು ಸೇರಿ ಮೂರು ಮಕ್ಕಳಿದ್ದು ಈಗ ತಂದೆ-ತಾಯಿ ಇಲ್ಲದೆ ಅನಾಥರಾಗಿದ್ದಾರೆ. ತಾಯಿ ಮೃತದೇಹದ ಎದುರಿಗೆ ಪುತ್ರ ಕಣ್ಣೀರು ಹಾಕುತ್ತಿದ್ದಾನೆ. ಹೂವಿನ ಹಡಗಲಿ ಸಿಪಿಐ ಸುಧೀರ್ ಬೆಂಕಿ, ಇಟ್ಟಗಿ ಪಿಎಸ್ಐ ನಾರಾಯಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.