ಹೊಸಪೇಟೆ: ಶಾಸಕ ಆನಂದ ಸಿಂಗ್ ವೇಶ್ಯೆಯ ರೀತಿಯಲ್ಲಿ ತಮ್ಮ ಶಾಸಕ ಸ್ಥಾನವನ್ನು ಮಾರಾಟ ಮಾಡಿಕೊಂಡು ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿದ್ದಾರೆ.
ಹೊಸಪೇಟೆಯಲ್ಲಿ ಆಯೋಜಿಸಿದ್ದ ಪ್ರಜಾಧ್ವಿ ಸಮಾವೇಶದಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ಪ್ರಧಾನಮಂತ್ರಿಯಾಗಿ 9 ವರ್ಷ ಆಗಿರುವ ಮೋದಿ ಅವರು ಸುಳ್ಳಿನ ಸರದಾರ. ಅವರು ಸುಳ್ಳು ಬಿಟ್ಟರೆ ಬೇರೆ ನಾವು ನೋಡಿಲ್ಲ. ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ಏನು ಮಾಡಿಲ್ಲ ಎನ್ನುವ ಸುಳ್ಳಿನ ಸರದಾರ, ರಾಜ್ಯದಲ್ಲಿ ಎರಡು ಬಾರಿ ಅಧಿಕಾರ ನಡೆಸಿರುವ ಬಿಜೆಪಿ ಮಾಡಿರುವ ಯಾವುದಾದರೂ ಒಳ್ಳೆಯ ಕೆಲಸ ಮಾಡಿದ್ದಾರಾ ಎಂದು ಹೇಳಲಿ.
ಸಕ್ಕರೆ ಕಾರ್ಖಾನೆ ಮುಚ್ಚಲಾಗಿದೆ, ಬಳ್ಳಾರಿ ಅವಿಭಾಜ್ಯ ಜಿಲ್ಲೆ ಇದ್ದಾಗ ಸಕ್ಕರೆ, ಎಣ್ಣೆ, ಜವಳಿ ಹಾಗೂ ಬಿಸ್ಕೆಟ್ ಕಾರ್ಖಾನೆ ಇದ್ದ ಊರು ಈಗ ಎಲ್ಲವೂ ಬಂದ್ ಮಾಡಿ ನಿರುದ್ಯೋಗ ಹೆಚ್ಚಿಸಿರುವುದೇ ಬಿಜೆಪಿ ಸರ್ಕಾರದ ಸಾಧನೆ. ಕಾಂಗ್ರೆಸ್ ಪಕ್ಷ 138 ವರ್ಷಗಳ ಇತಿಹಾಸವಿರುವ ಪಕ್ಷ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಗುಲಾಮಗಿರಿ ವಿರುದ್ಧ ಹೋರಾಟ ಮಾಡಿ ತ್ಯಾಗ ಬಲಿದಾನ ಕೊಟ್ಟು ನಮಗೆಲ್ಲರಿಗೂ ಸ್ವಾತಂತ್ರ್ಯ, ಸಂವಿಧಾನ ನೀಡಲಾಗಿದೆ.
ನಿಮ್ಮ ಬೆವರಿನ ತೆರಿಗೆ ಹಣವನ್ನು ನಿಮಗಾಗಿ ಖರ್ಚು ಮಾಡದೇ, ತಮ್ಮ ಸ್ನೇಹಿತರ ಕಲ್ಯಾಣಕ್ಕೆ ವೆಚ್ಚ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಲ್ಲಿ ನೀವು ಐದು ವರ್ಷಗಳಲ್ಲಿ ತಮಗೆ ಬೇಕಾದ ಸರ್ಕಾರವನ್ನು ಆರಿಸಿ ಕಳುಹಿಸಬಹುದು. ಹಿಂದೆ ಬಹುಮತ ಬಾರದೆ ಬಿಜೆಪಿಯನ್ನು ನೀವು ತಿರಸ್ಕರಿಸಿದ್ದಾಗ ನಾವು ಸಮ್ಮಿಶ್ರ ಸರ್ಕಾರವನ್ನು ಮಾಡಿದ್ದೆವು. ಮೈ ಮಾರಿಕೊಳ್ಳುವ ಮಹಿಳೆಯನ್ನು ವೇಶ್ಯೆ ಎಂದು ಕರೆಯುತ್ತಾರೆ. ಆದರೆ ತಮ್ಮ ಸ್ವಾಭಿಮಾನ ಸೇರಿದಂತೆ ಎಲ್ಲವನ್ನೂ ಮಾರಾಟ ಮಾಡಿರುವ ಶಾಸಕರನ್ನು ನೀವು ಏನೆಂದು ಕರೆಯುತ್ತೀರಿ? ಈ ಶಾಸಕರಿಗೆ ನೀವು ಬರುವ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು ಎಂದರು.
ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ, ಜನರ ಆರೋಗ್ಯ, ಶಿಕ್ಷಣ, ಉದ್ಯೋಗದ ಬಗ್ಗೆ ನಾವು ಮಾತನಾಡುತ್ತೇವೆ. ಜಾತಿ, ಮತ, ಧರ್ಮ, ಭಾಷೆ ವಿಚಾರವಾಗಿ ಮಾತನಾಡುವುದಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ದುರಂತದಂತೆ ಜಾತಿ, ಧರ್ಮ, ಭಾಷೆ ವಿಚಾರ ಪ್ರಮುಖವಾಗಿ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಅಭಿವೃದ್ಧಿಶೀಲ ರಾಜ್ಯ ಎಂದು ಪಡೆದಿದ್ದ ಕೀರ್ತಿಯನ್ನು ಮತ್ತೆ ಪುನಸ್ಥಾಪಿಸಲು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಭಾರಿ ಬಹುಮತದಿಂದ ಆರಿಸಿ ಕಳುಹಿಸಬೇಕು. ಪ್ರಜಾಧ್ವನಿಗೆ ನೀವೆಲ್ಲರೂ ಆಶೀರ್ವಾದ ಮಾಡಬೇಕು. ಎಂದು ಹೇಳಿದ್ದಾರೆ.
ಬಿ.ಸಿ. ಪಾಟೀಲ್ ಆಕ್ರೋಶ
ಆನಂದ ಸಿಂಗ್ ವಿರುದ್ಧ ಬಿ.ಕೆ. ಹರಿಪ್ರಸಾದ್ ಮಾತಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ತಿರುಗೇಟು ನೀಡಿದ್ದಾರೆ. ಹಿರೇಕೆರೂರಿನಲ್ಲಿ ಈ ಕುರಿತು ಪ್ರತಿಕ್ರಿಯಿಸಿ, ಇಂದು ಹರಿಪ್ರಸಾದ್ ಭಾಷಣ ಮಾಡುತ್ತಾ, 17 ಜನ ಶಾಸಕರು ವೇಶ್ಯೆಯರ ರೀತಿ ಮಾರಿಕೊಂಡು ಹೋಗಿದಾರೆ ಎಂದಿದ್ದಾರೆ. ಕಾಂಗ್ರೆಸ್‌ನವರು ಮಾಡಿದ ದ್ರೋಹಕ್ಕೆ ರಾಜೀನಾಮೆ ಕೊಟ್ಟು ನಾವು ಬಂದೆವು. ಜನಾದೇಶ ಪಡೆದೇ ಶಾಸಕರಾಗಿದ್ದೇವೆ. ನಮ್ಮ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇವೆ.
ಹರಿಪ್ರಸಾದ್ ಯಾವ ಚುನಾವಣೆ ಗೆದ್ದು ಬಂದಿದ್ದಾರೆ? ಹಿಂಬಾಗಿಲಿನಿಂದ ಬಂದು ಎಂ.ಎಲ್ ಸಿ ಆಗಿದ್ದಾರೆ. ಹಾಗಾದರೆ ಹಿಂಬಾಗಲಿನಿಂದ ಬಂದ ಇವರನ್ನು ಪಿಂಪ್ ಎಂದು ಕರೆಯಬಹುದಾ? ಆದರೆ ಆ ರೀತಿ ಕರೆಯಲು ಆಗುವುದಿಲ್ಲ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಆ ರೀತಿ ಮಾತಾಡಿದರೆ ಜನ ಬೆನ್ನತ್ತಿ ಹೊಡೆಯುತ್ತಾರೆ.
ಕೂಸು ಹುಟ್ಟೋದಕ್ಕಿಂತ ಮುಂಚೆ ಕುಲಾವಿ ಹೊಲಿಸೋ ಕೆಲಸ ಕಾಂಗ್ರೆಸ್ ನವರದ್ದು. ಅವರ ತಳ ಅಲ್ಲಾಡುತ್ತಾ ಇದೆ. ನೆಲೆ ಕಳೆದುಕೊಳ್ಳುತ್ತಾರೆ. ಇಷ್ಟು ವರ್ಷ ಕಾಂಗ್ರೆಸ್ ನವರು ರೋಗಗ್ರಸ್ತ ಸರ್ಕಾರ ಮಾಡಿದರು. ಅದನ್ನು ತೊಳೆಯೋ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ಇವರು ಇದ್ದಾಗ ಯಾವ ರೀತಿ ಇತ್ತು ಮುಟ್ಟಿ ನೋಡಿಕೊಳ್ಳಲಿ. ಕಾಂಗ್ರೆಸ್ ನವರಿಗೆ, ಸುಳ್ಳು ಅವರ ಮನೆ ದೇವರು. ಮೋದಿ ಅತ್ಯಂತ ಹೆಚ್ಚು ಬಹುಮತ ಗಳಿಸಿದ್ದಾರೆ. ಮೋದಿ ಸುಳ್ಳು ಹೇಳಿದ್ರರೆ ಜನ ಒಪ್ಪುತ್ತಾ ಇರಲಿಲ್ಲ. ಮತ್ತೆ ಕಾಂಗ್ರೆಸ್ ಸೇರುವ ಪ್ರಮೇಯ ಯಾರಿಗೂ ಇಲ್ಲ ಎಂದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಒಡೆಯುವವರನ್ನು ತಿರಸ್ಕರಿಸಿ: ಕಾಗೇರಿ | ಹರಿಪ್ರಸಾದ್ ಮಾತಿಗೆ ತಿರುಗೇಟು