ವಿಜಯನಗರ: ಜೀವಂತವಾಗಿರುವ ತಾಯಿ-ಮಗನನ್ನು ಸತ್ತಿದ್ದಾಗಿ ಘೋಷಿಸಿ, ಇಬ್ಬರನ್ನೂ ಪಡಿತರ ಚೀಟಿ (BPL Card) ಹೆಸರಿನಿಂದ ಆಹಾರ ಇಲಾಖೆಯು (Food Department) ಡಿಲೀಟ್ ಮಾಡಿತ್ತು. ವಿಜಯನಗರ ಜಿಲ್ಲೆಯ ಆಹಾರ ಇಲಾಖೆಯ ಅಧಿಕಾರಿಗಳ (ration card) ಎಡವಟ್ಟಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಇದೀಗ ವಿಸ್ತಾರ ನ್ಯೂಸ್ ವರದಿಯ ಪರಿಣಾಮ ಬಡ ಕುಟುಂಬಕ್ಕೆ ನಾಲ್ಕೇ ದಿನದಲ್ಲಿ ಮನೆ ಬಾಗಿಲಿಗೆ ಪಡಿತರ ಚೀಟಿ ಬಂದಿದೆ.
ಅಂಜೀನಮ್ಮ ಮತ್ತು ಅವರ ಪುತ್ರ ಅಜಯ್ ಬದುಕಿದ್ದರೂ 2019ರಲ್ಲೇ ಸತ್ತಿದ್ದಾರೆ ಎಂದು ಬಿಪಿಎಲ್ ಕಾರ್ಡ್‌ನಿಂದ ಹೆಸರು ಡಿಲೀಟ್ ಮಾಡಲಾಗಿತ್ತು. ಕಳೆದ ಐದು ವರ್ಷದಿಂದ ಪಡಿತರದಿಂದ ಬಡ ಕುಟುಂಬವೊಂದು ವಂಚಿತವಾಗಿತ್ತು. ಆಹಾರ ಇಲಾಖೆ ಎಡವಟ್ಟಿನಿಂದ ಪಡಬಾರದ ಕಷ್ಟ ಪಡುತ್ತಿರುವ ಕುಟಂಬ ತಿಂಗಳ ಪಡಿತರಕ್ಕೂ ಅಲೆಯುತ್ತಿತ್ತು.
ಕೂಡ್ಲಿಗಿ ತಾಲೂಕಿನ ಅಂಜಿನಮ್ಮ ತೀರಾ ಕಡು ಬಡವರಾಗಿದ್ದು, ಆಹಾರ ಇಲಾಖೆಯ ಕೆಲಸಕ್ಕೆ ಇತರೇ ಸೌಕರ್ಯಗಳಿಂದ ವಂಚಿತರಾಗಿದ್ದರು. ರೇಷನ್ ಕಾರ್ಡ್ ಇಲ್ಲದೇ ಇರುವುದರಿಂದ ಗೃಹ ಲಕ್ಷ್ಮೀ ಯೋಜನೆಯ ಲಾಭವೂ ಅಂಜಿನಮ್ಮಗೆ ಸಿಕ್ಕಿರಲಿಲ್ಲ. ಇತ್ತ ನ್ಯಾಯಕ್ಕಾಗಿ ಅಂಜಿನಮ್ಮ ಕುಟುಂಬ ನಿತ್ಯ ಆಹಾರ ಇಲಾಖೆ, ನ್ಯಾಯಬೆಲೆ ಅಂಗಡಿಗೆ ಅಲೆದು ಸುಸ್ತಾಗಿದ್ದರು.
ಅಂಜಿನಮ್ಮ ಪಡುತ್ತಿರುವ ಸಮಸ್ಯೆಯನ್ನು ಮನಗಂಡು ವಿಸ್ತಾರ ನ್ಯೂಸ್, ಆಹಾರ ಇಲಾಖೆ ಯಡವಟ್ಟು, ಐದು ವರ್ಷದಿಂದ ಬಡ ಮಹಿಳೆ ಅಂಜೀನಮ್ಮ ಇದ್ದು ಸತ್ತಂತೆ ಬದುಕುತ್ತಿದ್ದಾಳೆ ಎನ್ನುವ ನಾಮಾಂಕಿತದಡಿ ವರದಿಯನ್ನು ಪ್ರಸಾರ ಮಾಡಿತ್ತು. ವಿಸ್ತಾರ ನ್ಯೂಸ್ ವರದಿ ಪ್ರಸಾರದ ಬಳಿಕ ಖುದ್ದು ಆಹಾರ ಇಲಾಖೆ ಅಧಿಕಾರಿಗಳು ಕೂಡ್ಲಿಗಿ ತಾಲೂಕಿನ 10ನೇ ವಾರ್ಡ್‌ನಲ್ಲಿ ವಾಸ ಮಾಡುತ್ತಿದ್ದ ಅಂಜೀನಮ್ಮ ಮನೆಗೆ ತೆರಳಿ ವಾಸ್ತವ ಮಾಹಿತಿ ಪಡೆದುಕೊಂಡಿದ್ದಾರೆ. ಬಳಿಕ ನಾಲ್ಕು ದಿನದಲ್ಲೇ ಹೊಸ ಪಡಿತರ ಚೀಟಿಯನ್ನು ಅಂಜೀನಮ್ಮಗೆ ನೀಡಿದ್ದಾರೆ.
ಇದನ್ನೂ ಓದಿ: Self Harming : ಮದುವೆಗೆ ವಧು ಸಿಕ್ಕಿಲ್ಲವೆಂದು ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ವಿಸ್ತಾರ ನ್ಯೂಸ್ ಕಾರ್ಯಕ್ಕೆ ನಗು ಬೀರಿದ ಅಂಜೀನಮ್ಮ
ಇನ್ನೂ ಆಹಾರ ಇಲಾಖೆ ಯಡವಟ್ಟಿನಿಂದ ಅಂಜೀನಮ್ಮ, ಪುತ್ರ ಅಜ್ಜಯ್ಯ ಜೀವಂತ ಇದ್ದರೂ ಕಳೆದ ಐದು ವರ್ಷದಿಂದ ಸತ್ತಂತೆ ಬದುಕುತ್ತಿದ್ದರು. ಐದು ವರ್ಷದಿಂದ ಪಡಿತರವೂ ಇಲ್ಲ, ಅತ್ತ ಗೃಹ ಲಕ್ಷ್ಮೀ ಯೋಜನೆಯ ಲಾಭವೂ ಇಲ್ಲದಂತಾಗಿತ್ತು. ಜತೆಗೆ ಪಡಿತರ ಇಲ್ಲದಿರುವ ಕಾರಣ ಇತರೇ ಸೌಲಭ್ಯದಿಂದಲೂ ಅಂಜೀನಮ್ಮ ವಂಚಿತರಾಗಿದ್ದರು.
ಕಷ್ಟದಲ್ಲಿ ಇದ್ದ ಅಂಜೀನಮ್ಮಗೆ ಸಹಾಯ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ವಿಸ್ತಾರ ಟಿವಿಯಲ್ಲಿ ವರದಿ ಪ್ರಸಾರ ಆಗಿದ್ದಕ್ಕೆ ಅಧಿಕಾರಿಗಳು ನಮ್ಮ ಮನೆಗೆ ಬಂದು ಮಾತಾಡಿಸಿದ್ದಾರೆ. ಜತೆಗೆ ನನಗೆ ಪಡಿತರ ಚೀಟಿ ಕೊಟ್ಟಿದ್ದಾರೆ. ಹೀಗಾಗಿ ವಿಸ್ತಾರ ಟಿವಿಯವರಿಗೆ ಧನ್ಯವಾದ ಎಂದು ನಗು ಮುಖ ಬೀರಿದರು. ನೊಂದವರ ಧ್ವನಿಯಾಗಿ ನಿಖರ – ಜನಪರ ಕೆಲಸ ಮಾಡುತ್ತಿರುವ ವಿಸ್ತಾರ ನ್ಯೂಸ್‌ಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ