ಹೊಸಪೇಟೆ: ನಗರದಲ್ಲಿ ದ್ವಿಚಕ್ರ ವಾಹನ (Bike) ಕಳವು (Theft) ಮಾಡುತ್ತಿದ್ದ ಹಾಗೂ ಕದ್ದ ವಾಹನಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಪಟ್ಟಣದ ಠಾಣೆ ಪೊಲೀಸರು, ಆರೋಪಿಗಳನ್ನು (Accused) ಬಂಧಿಸಿ, ಅವರಿಂದ 22.92 ಲಕ್ಷ ರೂ ಮೌಲ್ಯದ 29 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಸೆಪ್ಟೆಂಬರ್ 17 ರಂದು ಬೈಕ್ ಕಳವು ಪ್ರಕರಣವೊಂದರ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಪೊಲೀಸರಿಗೆ ನಾಲ್ವರು ದ್ವಿಚಕ್ರ ವಾಹನ ಕಳ್ಳರು ಸಿಕ್ಕಿಬಿದ್ದಿದ್ದರು. ಆಗ ಅವರಿಂದ 10.82 ಲಕ್ಷ ರೂ ಮೌಲ್ಯದ 14 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಅವರಿಂದ ವಾಹನ ಖರೀದಿಸುತ್ತಿದ್ದ ನಾಲ್ವರು ಆರೋಪಿಗಳು ಪತ್ತೆಯಾದರು, ಅವರಿಂದ 12.10 ಲಕ್ಷ ರೂ ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್. ಶುಕ್ರವಾರ ಮಾಧ್ಯಮದವರಿಗೆ ತಿಳಿಸಿದ್ದಾರೆ.
ಅಬ್ದುಲ್ ತವಾಬ್, ಜಾಫರ್ ಸಾದಿಕ್ ಅಲಿಯಾಸ್ ಸಾಹಿಲ್, ಅರ್ಬಾಜ್ ಮತ್ತು ಅನಿಲ್ ಕುಮಾರ್ ಆರೋಪಿಗಳು. ಹೊನ್ನೂರು ಸ್ವಾಮಿ, ಶೋಯಲ್ ಅಲಿಯಾಸ್ ಚುವ್ವಾ, ತೋಯಬ್ ಅಲಿಯಾಸ್ ಸೈಕೊ ಮತ್ತು ಸಾದಿಕ್ ಕಳವು ಆರೋಪಿಗಳಿಂದ ದ್ವಿಚಕ್ರ ವಾಹನ ಖರೀದಿಸಿದ ಆರೋಪಿಗಳು ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: BEML Group C Recruitment: ಐಟಿಐ ಪಾಸಾದವರಿಗೆ ಸಿಹಿ ಸುದ್ದಿ; ಬಿಇಎಂಎಲ್‌ನಲ್ಲಿ 119 ಹುದ್ದೆಗೆ ಅರ್ಜಿ ಸಲ್ಲಿಸಿ
ಆರೋಪಿಗಳು ತಮ್ಮ ವ್ಹೀಲಿಂಗ್ ಶೋಕಿಗಾಗಿ ವಾಹನಗಳನ್ನು ಕದ್ದು, ನಂಬರ್ ಪ್ಲೇಟ್ ಕಿತ್ತು, ಬಣ್ಣ ಬದಲಾಯಿಸುತ್ತಿದ್ದರು. ಕೊನೆಗೆ ಅವುಗಳನ್ನು ಮಾರಾಟ ಮಾಡುತ್ತಿದ್ದರು. ಇವರು ಹೊಸಪೇಟೆ ಜತೆಗೆ ಇತರೆ ಕಡೆಗಳಿಂದಲೂ ಕಳವು ಮಾಡಿದ್ದು ತನಿಖೆಯಿಂದ ತಿಳಿದುಬಂದಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.
ಡಿವೈಎಸ್‌ಪಿ ಟಿ. ಮಂಜುನಾಥ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಎಸ್.ಎಂ.ಬಾಳನಗೌಡ, ಪಿಎಸ್‌ಐಗಳಾದ ಎಂ.ಮುನಿರತ್ನಂ, ಕೆ.ಸೋಮಶೇಖರ್, ಎಎಸ್‌ಐ ಬಿ.ಎಂ.ಸುರೇಶ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.