Site icon Vistara News

Vijayanagara News: ಹೊಸಪೇಟೆಯಲ್ಲಿ ಡೆಂಗ್ಯು ಜಾಗೃತಿ ಜಾಥಾ

Dengue awareness rally in Hosapete

ಹೊಸಪೇಟೆ: ರಾಷ್ಟ್ರೀಯ ಡೆಂಗ್ಯು (Dengue) ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತರೋಗಗಳ ನಿಯಂತ್ರಣಾಧಿಕಾರಿ ಕಚೇರಿಯ ಸಹಯೋಗದಲ್ಲಿ ‘ಸಮುದಾಯದೊಂದಿಗೆ ಸೇರಿ ಡೆಂಗ್ಯು ನಿಯಂತ್ರಿಸೋಣ’ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಜಾಥಾ ಕಾರ್ಯಕ್ರಮ (Vijayanagara News) ಜರುಗಿತು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯ ಅವರಣದಲ್ಲಿ ಜಾಗೃತಿ ಜಾಥಾ ಕಾರ್ಯಾಕ್ರಮಕ್ಕೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಡೆಂಗ್ಯು ಜ್ವರವನ್ನು ಜನರು ನಿರ್ಲಕ್ಷಿಸದೆ ಸೂಕ್ತವಾದ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಡೆಂಗ್ಯು ಜ್ವರದ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಮಾರಣಾಂತಿಕವಾಗಬಹುದು. ಮುಂಗಾರು ಪೂರ್ವ, ಮುಂಗಾರು ಮತ್ತು ಮುಂಗಾರಿನ ನಂತರದ ಸಮಯದಲ್ಲಿ ಡೆಂಗ್ಯು ಸೊಳ್ಳೆಗಳ ಸಂತತಿಯು ತೀವ್ರ ಪ್ರಮಾಣದಲ್ಲಿದ್ದು, ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಶಂಕರನಾಯ್ಕ ಮಾತನಾಡಿ, ರೋಗಗಳು ಬಂದ ಮೇಲೆ ಚಿಕಿತ್ಸೆ ನೀಡುವ ಬದಲಿಗೆ ಬರುವ ಮುಂಚೆ ಅದರ ಮುಂಜಾಗ್ರತೆ ವಹಿಸುವುದು ಸೂಕ್ತ. ಜನರು ಮನೆಯಲ್ಲಿ ಶೇಖರಿಸಿದ ನೀರನ್ನು ಆಗಾಗ ಬದಲಾಯಿಸುತ್ತಿರಬೇಕು. ಈ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಪಂಚಾಯಿತಿ ಮಟ್ಟದ ಅಧಿಕಾರಿಗಳು ಹೆಚ್ಚಿನ ಕ್ರಮ ವಹಿಸಬೇಕು ಹಾಗೂ ಡೆಂಗ್ಯು ತಡೆಯಲು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಪಿ ದೊಡ್ಡಮನಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ, ಬೆಳಗಾವಿಯ ಡಾ. ಸಿದ್ದಲಿಂಗಯ್ಯ, ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು, ವೈದ್ಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಇದನ್ನೂ ಓದಿ: Virat Kohli: ಮಗಳು ವಮಿಕಾ ಕೂಡ ಕ್ರಿಕೆಟ್​ ಪ್ರಿಯೆ; ಬ್ಯಾಟಿಂಗ್​ ಅಚ್ಚುಮೆಚ್ಚು ಎಂದ ಕೊಹ್ಲಿ​

ಕರಪತ್ರ ವಿತರಣೆ

ಈಡೀಸ್ ಈಜಿಪ್ಟೆ ಸೊಳ್ಳೆಯ ಕಚ್ಚುವಿಕೆಯಿಂದ ಡೆಂಗ್ಯು ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಚ ನೀರಿನಲ್ಲಿ ಸಂತಾನಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಮೂರಕ್ಕಿಂತ ಹೆಚ್ಚು ದಿನಗಳಿಂದ ಜ್ವರ, ವಿಪರೀತ ತಲೆನೋವು, ಕಣ್ಣುಗಳ ಹಿಂಭಾಗ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಕಾಣಿಸಿಕೊಂಡಲ್ಲಿ ತಕ್ಷಣವೇ ಆಶಾ, ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ ಎನ್ನುವ ಮಾಹಿತಿಯ ಕರಪತ್ರಗಳನ್ನು ಇದೇ ವೇಳೆ ಸಾರ್ವಜನಿಕರಿಗೆ ವಿತರಿಸಲಾಯಿತು.

Exit mobile version