ಹೊಸಪೇಟೆ: ನಗರದ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ನೀಡದೇ ಸಾವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯ ಸಂಘ ಸಂಸ್ಥೆಗಳಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಜಿಲ್ಲಾ ಎಸ್ಪಿ ಶ್ರೀಹರಿಬಾಬು ಅವರ ನೇತೃತ್ವದಲ್ಲಿ ವಿಜಯನಗರ ಜಿಲ್ಲೆಯಲ್ಲಿರುವ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಡಿಸಿ ಕಚೇರಿ ಸಭಾಂಗಣದಲ್ಲಿ (Vijayanagara News) ಮಂಗಳವಾರ ಸಭೆ ನಡೆಯಿತು.
ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮಾತನಾಡಿ, ಸರಿಯಾಗಿ ಚಿಕಿತ್ಸೆ ಸಿಗದೇ ಖಾಸಗಿ ಆಸ್ಪತ್ರೆಗಳಲ್ಲಿ ಸಾವುಗಳು ಸಂಭವಿಸುತ್ತಿವೆ ಎನ್ನುವ ದೂರಿನ ಬಗ್ಗೆ ಖಾಸಗಿ ಆಸ್ಪತ್ರೆಗಳು ಗಂಭೀರವಾಗಿ ಪರಿಗಣಿಸಬೇಕು. ಖಾಸಗಿ ಆಸ್ಪತ್ರೆಗಳಿಗೆ ಬರುವ ಯಾವುದೇ ರೋಗಿಗಳು ಮತ್ತು ಆ ರೋಗಿಯ ಸಂಬಂಧಿಕರೊಂದಿಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯು ಸಹನೆ, ಸಂಯಮ ಮತ್ತು ತಾಳ್ಮೆಯಿಂದ ನಡೆದುಕೊಳ್ಳಬೇಕು. ದುರ್ವರ್ತನೆ ತೋರಬಾರದು. ಮಾನವೀಯತೆಯಿಂದ ನಡೆದುಕೊಳ್ಳಬೇಕು. ಲೋಪ ಎಸಗಿರುವುದು ಕಂಡುಬಂದಲ್ಲಿ ಯಾರೇ ಆಗಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದನ್ನೂ ಓದಿ: Facebook, Instagram Down: ಫೇಸ್‌ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್; ಬಳಕೆದಾರರ ಪರದಾಟ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಮಾತನಾಡಿ, ವೈದ್ಯರನ್ನು ದೇವರ ಸಮಾನ ಎಂದು ನಮ್ಮ ಸಮಾಜವು ವೈದ್ಯರಿಗೆ ಗೌರವಯುತ ಸ್ಥಾನ ನೀಡಿದೆ. ಕೆಲವು ವೈದ್ಯರು ಮತ್ತು ಅವರ ಆಸ್ಪತ್ರೆಗಳಲ್ಲಿನ ಸಿಬ್ಬಂದಿ ತೋರುವ ನಿರ್ಲಕ್ಷ್ಯದಿಂದಾಗಿ ಸಾವುಗಳು ಸಂಭವಿಸಿ ಇಡೀ ವೈದ್ಯ ಸಮೂಹವನ್ನೇ ಕೆಟ್ಟ ದೃಷ್ಟಿಯಿಂದ ನೋಡುವಂತಾಗುತ್ತದೆ. ವೈದ್ಯರು ಮತ್ತು ಸಾರ್ವಜನಿಕ ಮಧ್ಯೆ ಇರುವ ನಂಬಿಕೆಗೆ ಧಕ್ಕೆ ಬಾರದ ಹಾಗೆ ಮತ್ತು ಸಾರ್ವಜನಿಕರಿಗೆ ವೈದ್ಯರ ಮೇಲೆ ವಿಶ್ವಾಸ ಬರುವ ಹಾಗೆ ಎಲ್ಲಾ ವೈದ್ಯರು ಮತ್ತು ಆಯಾ ಆಸ್ಪತ್ರೆಗಳಲ್ಲಿನ ಸಿಬ್ಬಂದಿಯು ಪ್ರಾಮಾಣಿಕಯಿಂದ, ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲದಂತೆ ಕಾರ್ಯ ನಿರ್ವಹಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಡಿಎಚ್‌ಒ ಡಾ. ಶಂಕರ್ ನಾಯ್ಕ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಕೆಪಿಎಂಇ ಕಾಯ್ದೆಯ ಅನುಸಾರವೇ ಇರಬೇಕು. ನೋಂದಣಿ ಸಮಯದಲ್ಲಿ ಯಾವ ವೈದ್ಯರು ಮತ್ತು ಯಾವ ಸಿಬ್ಬಂದಿಯನ್ನು ಡಿಕ್ಲೆರೇಷನ್ ಮಾಡಲಾಗಿರುತ್ತದವೋ ಅದೇ ರೀತಿಯ ವೈದ್ಯರು ಮತ್ತು ಅವಶ್ಯಕ ಸಿಬ್ಬಂದಿಯನ್ನು ಆಸ್ಪತ್ರೆಯು ಹೊಂದಿರಬೇಕು. ಇಲ್ಲದಿದ್ದರೆ ಪರವಾನಿಗೆ ರದ್ದುಪಡಿಸಲಾಗುವುದು.
ಯಾವುದೇ ಖಾಸಗಿ ಆಸ್ಪತ್ರೆಗಳು ಕೆಪಿಎಂಇ ಕಾಯ್ದೆಯನ್ನು ಉಲ್ಲಂಘಿಸಿರುವುದು ಗೊತ್ತಾದಲ್ಲಿ ಅಂತಹ ಆಸ್ಪತ್ರೆಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಆಸ್ಪತ್ರೆಯಲ್ಲಿನ ಬಯೋಮೆಡಿಕಲ್ ತ್ಯಾಜ್ಯವನ್ನು ನಿಯಮಾನುಸಾರ ವಿಲೆಗೆ ಕ್ರಮವಹಿಸದಿದ್ದಲ್ಲಿ ಸಹ ಕ್ರಿಮಿನಲ್ ಮೊಕದ್ದಮೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಖಾಸಗಿ ಆಸ್ಪತ್ರೆಯ ಎಲ್ಲಾ ಕೋಣೆಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ದರವನ್ನು ಪ್ರದರ್ಶಿಸಿ ಅದೇ ರೀತಿ ಪಾಲನೆ ಮಾಡಬೇಕು. ನಿಗದಿಪಡಿಸಿದ ದರಕ್ಕಿಂತ ಅನವಶ್ಯಕವಾಗಿ ಹೆಚ್ಚಿನ ಹಣ ಪಡೆಯಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಇದನ್ನೂ ಓದಿ: Gold Rate Today: ಬಂಗಾರದ ಬೆಲೆ ಏರಿಕೆ; ಮಾರುಕಟ್ಟೆ ದರ ಇಂದು ಹೀಗಿದೆ
ಅಪ್ರಾಪ್ತ ವಯಸ್ಸಿನ ಮಹಿಳೆಯು ಗರ್ಭಿಣಿ ಎಂದು ಗೊತ್ತಾದಲ್ಲಿ ಈ ಬಗ್ಗೆ ಕೂಡಲೇ 1098 ಅಥವಾ ಆರೋಗ್ಯ ಇಲಾಖೆ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಬೇಕು. ಗಂಡಾಂತರ ಗರ್ಭಿಣಿ ಎಂದು ತಿಳಿದಲ್ಲಿ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು. ಸಾಂಕ್ರಾಮಿಕ ರೋಗಗಳು, ನಾಯಿ ಕಡಿತ, ಹಾವು ಕಡಿತ ಪ್ರಕರಣಗಳ ಬಗ್ಗೆ ಸಹ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎನ್ನುವ ನಿಯಮವನ್ನು ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರು ಮತ್ತು ಸಿಬ್ಬಂದಿಯು ತಪ್ಪದೇ ಪಾಲನೆ ಮಾಡಬೇಕು ಎಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಯಿತು.
ಆಸ್ಪತ್ರೆಗಳಲ್ಲಿ ಹೆಣ್ಣು ಭ್ರೂಣ ಲಿಂಗ ಪತ್ತೆ ಹಾಗೂ ಭ್ರೂಣ ಹತ್ಯೆ ಪ್ರಕರಣಗಳು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಕೆಪಿಎಂಇ ಕಾಯಿದೆ ಅನುಸಾರ ಕಾರ್ಯನಿರ್ವಹಿಸದೇ ನಿಯಮ ಉಲ್ಲಂಘಿಸಿ ಲೋಪ ಎಸಗಿರುವುದು ಕಂಡುಬಂದಲ್ಲಿ ಕೆಪಿಎಂಇ ಕಾಯಿದೆ ಅಡಿ ಕ್ರಮ ಜರುಗಿಸಲಾಗುವುದು ಎಂದು ಸಭೆಯಲ್ಲಿ ಎಚ್ಚರಿಕೆ ನೀಡಲಾಯಿತು.
ಕೆಪಿಎಂಇ ಕಾಯಿದೆ ಅಡಿಯಲ್ಲಿ ನೋಂದಣಿ ಆಗಿರುವ ಸಂದರ್ಭದಲ್ಲಿ ಖಾಸಗಿ ಆಸ್ಪತ್ರಯ ವೈದ್ಯರು ಹಾಗೂ ಸಿಬ್ಬಂದಿಯ ಹಾಜರಾತಿ ಮತ್ತು ವೇತನದ ವಿವರಗಳನ್ನು ಪರಿಶೀಲಿಸಲು ತಾಲೂಕುಮಟ್ಟದ ತಂಡಗಳನ್ನು ರಚಿಸಿ ಪರಿಶೀಲಿಸಿ ವರದಿಯನ್ನು ಸಲ್ಲಿಸುವಂತೆ ಸಹ ಸಭೆಯಲ್ಲಿ ಸೂಚಿಸಲಾಯಿತು.
ಇದನ್ನೂ ಓದಿ: Miyazaki Mango: ಧಾರವಾಡಕ್ಕೆ ಬಂತು 2.7 ಲಕ್ಷ ರೂ. ಬೆಲೆಯ ಮಾವು!
ಸಭೆಯಲ್ಲಿ ಐಎಂಎ ಅಧ್ಯಕ್ಷ ಡಾ. ಶ್ರೀನಿವಾಸ ದೇಶಪಾಂಡೆ ಹಾಗೂ ಜಿಲ್ಲೆಯ ವಿವಿಧ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಎಲ್ಲ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಮತ್ತು ಇತರರು ಇದ್ದರು.