ವಿಜಯನಗರ ಜಿಲ್ಲೆಯ (Vijayanagara News) ಹೊಸಪೇಟೆ ತಾಲೂಕಿನ ಮುದ್ದಾಪುರದ ಮುದ್ದಾಪುರ ಆಂಜನೇಯ ದೇಗುಲದ ಸಮೀಪದ ಮಾರ್ಗ ಮಧ್ಯೆದಲ್ಲಿ ಅಪರೂಪದ ಮಾಸ್ತಿಗಲ್ಲು ಮತ್ತು ಅಪೂರ್ಣವಾದ ಶಾಸನ ಕಲ್ಲನ್ನು ವಿಜಯನಗರ ತಿರುಗಾಟ ಸಂಶೋಧನ ತಂಡವು ಪತ್ತೆ ಮಾಡಿದೆ. ಈ ಮಾಸ್ತಿಕಲ್ಲನ್ನು ಚಿದಾನಂದ ಅವರ ಸಹಕಾರದಿಂದ ಕನ್ನಡ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಗೋವಿಂದ, ದೃಶ್ಯಕಲಾ ವಿಭಾಗದ ಡಾ. ಕೃಷ್ಣೆಗೌಡ, ಅಭಿವೃದ್ಧಿ ಅಧ್ಯಯನ ವಿಭಾಗದ ಡಾ. ಗೋವರ್ಧನ, ವಿಜಯಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಪ್ರಾಧ್ಯಾಪಕರಾದ ಡಾ. ಎಚ್. ತಿಪ್ಪೇಸ್ವಾಮಿ, ಸಂಶೋಧಕಾರದ ಡಾ. ವೀರಾಂಜನೇಯ, ಎಚ್. ರವಿ ಅವರುಗಳು ಶೋಧಿಸಿದ್ದಾರೆ.
ಮಾಸ್ತಿಕಲ್ಲುಗಳು ಬಹುತೇಕವಾಗಿ ಮಹಿಳೆಯೊಬ್ಬರು ಕೈಯಲ್ಲಿ ನಿಂಬೆಹಣ್ಣು ಹಿಡಿದಿರುವ, ಇಲ್ಲವೇ ಕೈಯನ್ನು ಮೇಲೆ ಎತ್ತಿರುವ ಚಿತ್ರಣ ಕಂಡುಬರುವುದು ಸಹಜ. ಆದರೆ ಈ ಮಾಸ್ತಿಕಲ್ಲು ತುಂಬಾ ಅಪರೂಪ ಹಾಗೂ ವಿಶೇಷವಾಗಿದೆ. ಶೈವಧರ್ಮದ ಪ್ರತೀಕವಾದ ಈ ಮಾಸ್ತಿಕಲ್ಲು ಎರಡು ಹಂತದಲ್ಲಿ ಕೆತ್ತಲಾಗಿದೆ. ರಾಜ ಪರಿವಾರ, ರಾಜನ ಇಲ್ಲವೇ ಪಾಳೆಯಗಾರನ ಪತ್ನಿ ಅಥವಾ ಉಪಪತ್ನಿಯು ಸತಿ ಹೋಗಿರಬೇಕೆಂದು ತಿಳಿಬರುತ್ತದೆ. ಏಕೆಂದರೆ ಚಿತ್ರದಲ್ಲಿ ಕೆತ್ತಿರುವ ಮಹಿಳೆಯು ನಿಂತಿರುವ ಭಂಗಿಯಲ್ಲಿರುವುದು ತುಂಬಾ ವಿಶೇಷವಾಗಿದೆ. ತಲೆಗೆ ಕಿರೀಟವನ್ನು ಇರಿಸಿಕೊಂಡಿದ್ದಾಳೆ. ಹಾಗೇನೆ ನಡುವಿಗೆ ನಡುಪಟ್ಟಿ ಧರಿಸಿದ್ದಾಳೆ. ಇಳಿಬಿಟ್ಟ ಕಿವಿಯ ಓಲೆಯೂ ಕಾಣಸಿಗುತ್ತದೆ. ಹಾಗೇನೆ ಪಟ್ಟಿಯಾಕರದ ಸೀರೆಯನ್ನು ಧರಿಸಲಾಗಿದೆ ಮಾಸ್ತಿಕಲ್ಲನ್ನು ಯಾರೋ ನಿಧಿಕಳ್ಳರು ತುಂಡು ಮಾಡಿದ್ದಾರೆ ಎಂದು ತಂಡದ ಸದಸ್ಯರಾದ ಡಾ.ಗೋವಿಂದ ಅವರು ತಿಳಿಸಿದ್ದಾರೆ.
ಪುರಗಳ ನಾಮಕರಣ
ವಿಜಯನಗರ ಸಾಮ್ರಾಜ್ಯದಲ್ಲಿ ಹೊಸಪೇಟೆಯ ಸಣ್ಣಕ್ಕಿ ವೀರಭದ್ರೇಶ್ವರ ಏರಿಯಾವನ್ನು ವರದರಾಜಮ್ಮನ ಪಟ್ಟಣ ಎಂದು ಕರೆಯುತ್ತಿದ್ದರು. ಚಿನ್ನಾoಬಿಕೆಯ ನೆನಪಿಗಾಗಿ ಇಂದಿನ ಚಿತ್ತವಾಡಿಗಿಯನ್ನು ಚಿನ್ನಾಪುರ ಎಂತಲೂ, ಕೃಷ್ಣದೇವರಾಯನ ತಾಯಿ ನಾಗಲಾದೇವಿ ನೆನಪಿಗಾಗಿ ಈಗಿನ ನಾಗೇನಹಳ್ಳಿಯನ್ನು ನಾಗಲಾಪುರ ಎಂತಲೂ ಈಗ ದೊರಕಿರುವ ಶಾಸನಗಳಿಂದ ತಿಳಿದುಬರುತ್ತದೆ. ಈಗ ದೊರಕಿರುವ ಅಪ್ರಕಟಿತ ಶಾಸನವು ಸಹ ಮದ್ದಲಾಪುರ ಏರಿಯಾದಲ್ಲಿ ದೊರೆತಿರುವ ಶಾಸನವಾಗಿದೆ. ಮುದ್ದಾಲಾಪುರವು ಸಹ ಪುರಗಳ ಸಾಲಿನಲ್ಲಿ ಸೇರುತ್ತದೆ. ಇಲ್ಲಿ ದೊರಕಿರುವ ಈ ಮಾಸ್ತಿಕಲ್ಲು 5 ಅಡಿ ಎತ್ತರ, 2 ಅಡಿ ಅಗಲವಾಗಿದೆ.
ಈಗಾಗಲೇ ಅಲ್ಲಲ್ಲಿ ದೊರಕಿರುವ ಶಾಸನಗಳಿಗಿಂತ ತುಂಬಾ ವಿಶೇಷವಾಗಿದೆ. ಅಲ್ಲದೇ ಸತಿಹೋಗಿರುವ ಮಹಿಳೆಯು ಯಾರೆಂಬುದು ತಿಳಿಯುತ್ತಿಲ್ಲವಾದರೂ, ಇದು ವಿಜಯನರ ಸಾಮ್ರಾಜ್ಯದ ಶೈಲಿಯನ್ನು ಹೋಲುತ್ತದೆ. ಸತಿ ಸಹಗಮನವಾದ ಮಹಿಳೆಯು ಸಹಗಮನ ಆಗಿರುವುದನ್ನು ಸೂಚಿಸುತ್ತದೆ. ಸತಿಹೋಗಿರುವ ಮಹಿಳೆಯ ಪಕ್ಕದಲ್ಲಿ ಪದ್ಮಾಸನದ ಭಂಗಿಯಲ್ಲಿ ಕುಳಿತಿರುವ ಮಹಿಳೆಯ ಎಡ ಕೈಯಲ್ಲಿ ನಿಂಬೆಹಣ್ಣು ಇಟ್ಟುಕೊಂಡಿರುವಂತಿದೆ. ಇದರಿಂದ ಈ ಮಹಿಳೆಯು ಸತೀಹೋಗಿರಬೇಕೆಂದು ತಿಳಿದುಬರುತ್ತದೆ. ಬಹುತೇಕ ಶಾಸನಗಳಲ್ಲಿ ಸತಿಹೋದ ಇಲ್ಲವೇ ವೀರಗಲ್ಲುಗಳಲ್ಲಿ ಆಯಾ ಧರ್ಮದ ಮೂರ್ತಿ ಎದುರಿಗೆ ಕೈ ಮುಗಿದು ಕುಳಿತಿರುವ ಚಿತ್ರಣ ಕಂಡುಬರುತ್ತಿತ್ತು. ಆದರೆ ಇಲ್ಲಿ ಮೇಲ್ಭಾಗದಲ್ಲಿ ಶಿವನಲಿಂಗಾಕಾರದ ಚಿತ್ರವಿದೆ. ಇದರಿಂದ ಈ ಮಾಸ್ತಿಕಲ್ಲು ಶೈವ ಧರ್ಮವನ್ನು ಪ್ರತಿನಿಧಿಸುತ್ತದೆ ಎಂದು ತಂಡದ ಮತ್ತೋರ್ವ ಸದಸ್ಯರಾದ ಪ್ರೊ. ಎಚ್. ತಿಪ್ಪೇಸ್ವಾಮಿ ಅವರು ತಿಳಿಸಿದ್ದಾರೆ.
ಅಪೂರ್ಣ ಶಾಸನ ಕಲ್ಲು ಪತ್ತೆ
ಇದೇ ವೇಳೆ ಈ ಮಾಸ್ತಿಕಲ್ಲಿನ ಅನತಿ ದೂರದಲ್ಲಿಯೇ ಬೃಹದಾಕಾರದ ಅಪೂರ್ಣ ಶಿವಲಿಂಗ ಚಿತ್ರವುಳ್ಳ ಶಾಸನ ಕಲ್ಲು ಪತ್ತೆಯಾಯಿತು. 6 ಅಡಿ ಎತ್ತರ ಮತ್ತು 2 ಅಡಿ ಅಗಲವುಳ್ಳ ಶಾಸನಕಲ್ಲಿಗೆ ಯಾವುದೇ ಕೆತ್ತನೆಯು ಕಾಣಸಿಗಲಾರದು. ಆದರೂ ಈ ಕಲ್ಲಿನ ಮೇಲ್ಭಾಗದ ಎಡಕ್ಕೆ ಸೂರ್ಯನ, ಬಲಕ್ಕೆ ಚಂದ್ರನ ಚಿತ್ರವಿದೆ. ಇದರ ಕೆಳಗೆ ಸುಂದರವಾದ ಶಿವಲಿಂಗ ಚಿತ್ರವನ್ನು ಕೆತ್ತಲಾಗಿದೆ. ಇಂತಹ ಅಪರೂಪದ ಕಲ್ಲುಗಳನ್ನು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಇಲಾಖೆಯು ಸಂರಕ್ಷಣೆ ಮಾಡಬೇಕಾಗಿದೆ ಎಂದು ವಿಜಯನಗರ ತಿರುಗಾಟ ಸಂಶೋಧನ ತಂಡವು ಒತ್ತಾಯಿಸುತ್ತದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ