Site icon Vistara News

ಜಿ-20 ಶೃಂಗಸಭೆ ಪೂರ್ವಸಿದ್ಧತಾ ಸಭೆ; ಪ್ರವಾಸಿಗರಿಗೂ ಮೂಲಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಸೂಚನೆ

Vijayanagara DC Venkatesh G 20 Summit Preparatory Meeting

ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ (Hampi) ಜುಲೈ ತಿಂಗಳಲ್ಲಿ (July month) ಜಿ-20 ಶೃಂಗಸಭೆ (G 20 Summit) ಪೂರ್ವ ಸಿದ್ಧತಾ ಸಭೆ ನಡೆಯಲಿದೆ. ಈ ವೇಳೆ ಪ್ರವಾಸಿಗರಿಗೂ (Tourists) ಅನುಕೂಲವಾಗುವಂತೆ ಶಾಶ್ವತ ಸೌಕರ್ಯಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷ ವೆಂಕಟೇಶ್ ಟಿ. ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿ-20 ಶೃಂಗಸಭೆಯ ಅಂಗವಾಗಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಪೂರ್ವಸಿದ್ಧತಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡುವ ಶೃಂಗಸಭೆಯ ಪೂರ್ವಸಿದ್ಧತಾ ಸಭೆ ಇದಾಗಿದ್ದು, ವಿಶ್ವಪಾರಂಪರಿಕ ತಾಣವಾದ ಹಂಪಿಯ ಹಿರಿಮೆಯನ್ನು ಹೆಚ್ಚಿಸಲಿದೆ. ಶೃಂಗಸಭೆಗೆ ಅಗತ್ಯವುಳ್ಳ ಸಕಲ ಮೂಲ ಸೌಕರ್ಯವನ್ನು ಒದಗಿಸಲು ಇಲಾಖೆಗಳು ಸಿದ್ಧತೆ ಕೈಗೊಳ್ಳಬೇಕು. ಹಂಪಿಯಲ್ಲಿ ಒದಗಿಸುವ ಮೂಲಸೌಕರ್ಯಗಳು ಕೇವಲ ಶೃಂಗಸಭೆಗೆ ಮಾತ್ರ ಸೀಮಿತವಾಗದೆ ಹಂಪಿಯಲ್ಲಿ ಶಾಶ್ವತವಾಗಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: Saffron politics: ಸರ್ಕಾರಿ ಶಿಲಾನ್ಯಾಸ, ಆಯುಧ ಪೂಜೆ ತಡೆಯುವ ಹುನ್ನಾರ; ನಳಿನ್‌ ಆರೋಪ

ಇಲಾಖಾವಾರು ಸೌಕರ್ಯ ಒದಗಿಸಲು ಕ್ರಮ

ಹಂಪಿಯಲ್ಲಿ ಒದಗಿಸುವ ಮೂಲಸೌಕರ್ಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಆಯಾ ಇಲಾಖೆಯ ಅಧೀನ ಕಾರ್ಯದರ್ಶಿಗಳಿಗೆ ಅಗತ್ಯ ಅನುದಾನ ಒದಗಿಸಲು ಪ್ರಸ್ತಾವನೆ ಕಳುಹಿಸಿಕೊಡಬೇಕು. ಶೃಂಗಸಭೆ ಹಾಗೂ ಪ್ರವಾಸಿಗರಿಗೂ ಅನುಕೂಲ ವಾತಾವರಣ ಪರಿಗಣಿಸಿ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಕಳುಹಿಸಿಕೊಡಬೇಕು ಎಂದು ಸೂಚಿಸಿದರು.

ಹಂಪಿಯಲ್ಲಿ ಕುಡಿಯುವ ನೀರು, ಸ್ವಚ್ಛತೆ, ಸುಗಮ ಸಂಚಾರ, ವಿದ್ಯುತ್ ವ್ಯವಸ್ಥೆ ಒದಗಿಸಲು ಆಯಾ ಇಲಾಖೆ ಕ್ರಮವಹಿಸಬೇಕು. ಅದೇ ರೀತಿಯಾಗಿ ಹಂಪಿಯಲ್ಲಿ ಸೂಕ್ತ ನೆಟ್‌ವರ್ಕ್ ವ್ಯವಸ್ಥೆ ಹಾಗೂ ಸಂಪರ್ಕ ಅಧಿಕಾರಿಗಳ ನಿಯೋಜನೆ ಸೇರಿದಂತೆ ಅಗತ್ಯ ಪ್ರವಾಸಿ ಮಾರ್ಗದರ್ಶಿಗಳನ್ನು ಸಹ ನಿಯೋಜಿಸಬೇಕು. ಇದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು.

ಇದನ್ನೂ ಓದಿ: Elon Musk: ವರ್ಷಾಂತ್ಯಕ್ಕೆ ಭಾರತದಲ್ಲಿ ಟೆಸ್ಲಾ ಫ್ಯಾಕ್ಟರಿ‌ ಆರಂಭಿಸಲು ಸ್ಥಳ ಗುರುತು ಎಂದ ಉದ್ಯಮಿ ಎಲಾನ್ ಮಸ್ಕ್

ಆಯಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳು ಹಂಪಿಯಲ್ಲಿ ಇಲಾಖೆಯ ಕಾರ್ಯಗಳನ್ನು ಕೈಗೊಳ್ಳುವ ಸಮಯದಲ್ಲಿ ಭಾರತೀಯ ಪುರಾತತ್ವ ಸರ್ವೆಕ್ಷಣ ಇಲಾಖೆ (ಎಎಸ್‌ಐ) ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕ ಹೊಂದಿರಬೇಕು ಎಂದು ತಿಳಿಸಿದರು.

ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಯಾವುದೇ ಕಾಮಗಾರಿಗಳು ನಡೆಯುತ್ತಿದ್ದಲ್ಲಿ ಶೃಂಗಸಭೆ ಆರಂಭಕ್ಕೂ ಮುನ್ನ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಮಾತನಾಡಿ, ಶೃಂಗಸಭೆ ಅಂಗವಾಗಿ 3 ಹಂತದ ಭದ್ರತೆಯನ್ನು ನಿಯೋಜಿಸಲಾಗುತ್ತದೆ, ಅಗತ್ಯ ಸ್ಥಳಗಳಲ್ಲಿ ಸೂಚನ ಫಲಕಗಳನ್ನು, ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಇದನ್ನೂ ಓದಿ: Road Accident: ಗೇರುಸೊಪ್ಪದಲ್ಲಿ ಟೆಂಪೋ ಪಲ್ಟಿಯಾಗಿ ಮೂವರು ಗಂಭೀರ; ಸೇಡಂನಲ್ಲಿ ಲಾರಿ ಹರಿದು ಬೈಕ್‌ ಸವಾರ ಸಾವು

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸದಾಶಿವ ಪ್ರಭು ಬಿ., ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಹವಾಮಾ (ಹಂಪಿ ಅಭಿವೃದ್ಧಿ ಪ್ರಾಧಿಕಾರ) ಆಯುಕ್ತ ಸಿದ್ಧರಾಮೇಶ್ವರ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ, ತಹಸೀಲ್ದಾರ್ ಪ್ರತಿಭಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

Exit mobile version