Site icon Vistara News

ಅವನತಿ ಅಂಚಿನಲ್ಲಿರುವ ಆದಿಲ್ ಷಾಹಿ ಬೇಸಿಗೆ ಅರಮನೆ: ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯ

ಆದಿಲ್ ಷಾಹಿ ರಾಜರ ಬೇಸಿಗೆ ಅರಮನೆ

ವಿಜಯಪುರ: ವಿಜಯಪುರ ಜಿಲ್ಲೆಯನ್ನು ಬಿಸಿಲ ನಾಡು ಎಂದು ಕರೆಯುತ್ತಾರೆ. ಈ ಬಿಸಿಲ ನಾಡಿನಲ್ಲಿ, ಬೇಸಿಗೆಯ ಬಿಸಿಲಿನಿಂದ ಬಚಾವ್ ಆಗಲು, ಅಂದಿನ ಕಾಲದಲ್ಲಿ ಆದಿಲ್ ಶಾಹಿ ಅರಸರು ಪ್ರತ್ಯೇಕವಾದ ಬೇಸಿಗೆ ಅರಮನೆ ನಿರ್ಮಿಸಿಕೊಂಡಿದ್ದರು. ಆದರೆ ಅದು ಈಗ ಸೂಕ್ತ ನಿರ್ವಹಣೆ ಇಲ್ಲದೆ ಪ್ರವಾಸಿಗರು ಹೋಗದಂತಹ ದುಃಸ್ಥಿತಿಯಲ್ಲಿದೆ. ಪ್ರವಾಸಿಗರ ಸಂಖ್ಯೆ ಬೆರಳೆಣಿಕೆಗೆ ಬಂದು ನಿಂತಿದೆ.

ವಿಜಯಪುರದಿಂದ 16 ಕಿಲೋಮೀಟರ್‌ ದೂರದಲ್ಲಿ ಕಲಬುರಗಿ ರಸ್ತೆಯಲ್ಲಿ ಸಿಂದಗಿ ಕಡೆಗೆ ಹೋಗುವಾಗ ಕುಮಟಗಿ ಎಂಬ ಗ್ರಾಮವಿದೆ. ಅಲ್ಲಿಂದ ಬಲಕ್ಕೆ ಪ್ರಯಾಣಿಸಿದರೆ ಬೇಸಿಗೆ ಅರಮನೆ ಸಿಗುತ್ತದೆ.

ಈ ಅರಮನೆಯು ಇತಿಹಾಸದ ಕಾಲದಿಂದಲೂ ಸಾಕಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡು ಬಂದಿದೆ. ಆದಿಲ್ ಶಾಹಿ ಅರಸನಾದ ಯೂಸೂಫ್ ಆದಿಲ್ ಶಾಹನು ಬೇಸಿಗೆ ಕಾಲದಲ್ಲೂ ಒಳಗಿನ ವಾತಾವರಣ ತಂಪಾಗಿರಲು ಈ ಬೇಸಿಗೆ ಅರಮನೆಯನ್ನು ಕ್ರಿ.ಶ. 1556 ರಲ್ಲಿ ಕಟ್ಟಿಸಿದನು.

ಈ ಕೋಟೆಯ ಸುತ್ತಲೂ 100 ಯಾರ್ಡ್‌ಗಳಷ್ಟು ಅಗಲವಾದ ಕಂದಕವೊಂದನ್ನು ನಿರ್ಮಿಸಲಾಗಿದೆ. ವೈರಿಗಳ ಆಕ್ರಮಣದಿಂದ ರಕ್ಷಣೆಗಾಗಿ ಈ ಕಂದಕವನ್ನು ಕಟ್ಟಿಸಲಾಗಿತ್ತು.

ಇದು ಆಗಿನ ರಾಜರ, ಮಂತ್ರಿಗಳ ಮೋಜಿನ ತಾಣವೂ ಆಗಿತ್ತು. ಈ ಅರಮನೆ ಸುತ್ತ ಇರುವ ಗೋಡೆ 30ರಿಂದ 50 ಅಡಿ ಎತ್ತರವಿವೆ. ಕೋಟೆಯಷ್ಟೆ ದೊಡ್ಡದಾದ 96 ಬುರ್ಜ್‌ಗಳಿವೆ. ಕೋಟೆಯಲ್ಲಿ 10 ಮುಖ್ಯದ್ವಾರಗಳಿದ್ದು, ಪ್ರತಿಯೊಂದೂ 25 ಅಡಿ ಅಗಲವಾಗಿವೆ. ಈ ಕೋಟೆಯಲ್ಲಿ ದಾಳಿಯಿಂದ ಹಾನಿಗೊಳಗಾಗಿರುವ ಹಲವಾರು ಹಿಂದೂ ದೇವಾಲಯಗಳು ಸಹ ಇವೆ. ಇಲ್ಲಿ ಕಾರಂಜಿಗಳು, ನೀರಿನ ತೊಟ್ಟಿಗಳು ಮತ್ತು ಬುಗ್ಗೆಗಳ ಜಾಲ ಇದ್ದವು.

ಇಂತಹ ವೈಭವವಾದ ಅರಮನೆಯು ಈಗ ಅವನತಿಯ ಅಂಚಿನಲ್ಲಿದೆ. ಹೆದ್ದಾರಿ ಪಕ್ಕದಲ್ಲಿದೆಯಾದರೂ ಈಗ ಸೂಕ್ತವಾದ ಬಸ್ ಸಂಚಾರ ವ್ಯವಸ್ಥೆ ಇಲ್ಲ. ಸಂರಕ್ಷಣೆ ಕಾರಣದಿಂದ ಕಬ್ಬಿಣದ ಸರಳುಗಳ ಮೂಲಕ ಗ್ಯಾಲರಿಗಳ ಪ್ರವೇಶವನ್ನ ಕೊಂಚ ನಿರ್ಬಂಧಿಸಲಾಗಿದೆ ಎನವನುದನ್ನು ಹೊರತುಪಡಿಸಿ ಪ್ರವಾಸಿಗರಿಗೆ ಯಾವುದೇ ರೀತಿಯ ಸೌಲಭ್ಯಗಳನ್ನಾಗಲಿ, ಸೌಕರ್ಯಗಳನ್ನಾಗಲಿ ಸರ್ಕಾರ ನೀಡುತ್ತಿಲ್ಲ. ಈ ಬೇಸಿಗೆ ಅರಮನೆ ಬಗ್ಗೆ ಬಹಳಷ್ಟು ಪ್ರವಾಸಿಗರಿಗೆ ಗೊತ್ತೇ ಇಲ್ಲ. ವೀಕೆಂಡ್ ಪ್ರವಾಸಕ್ಕೆ ಬರುವವರು ಬಾಡಿಗೆ ವಾಹನ ತೆಗೆದುಕೊಂಡು ಊಟೋಪಚಾರ ವ್ಯವಸ್ಥೆಯೊಂದಿಗೇ ಬರುತ್ತಾರೆ.

ಇದರ ಪಕ್ಕದಲ್ಲಿರುವ ಕೆರೆಯ ನೀರನ್ನು ತೊಟ್ಟಿಗಳು, ಕಾರಂಜಿಗಳಿಗೆ ಮಾತ್ರವಲ್ಲದೆ ಉತ್ತಮವಾಗಿ ನಿರ್ಮಿಸಿರುವ ಕಾಲುವೆಗಳ ಮೂಲಕ ಹರಿಸಿ ಬೇಸಾಯಕ್ಕೂ ಬಳಸಲಾಗುತ್ತಿತ್ತು. ಈಗ ಕೇವಲ ಇದರ ನಿಯಂತ್ರಕ ಗೋಪುರ ಮತ್ತು ತೂಬನ್ನು ನೋಡಬಹುದು. ಇತ್ತೀಚಿನವರೆಗೆ ನೀರು ಮಹಲುಗಳ ಸುತ್ತ ಹರಿಯುವುದನ್ನು ಕಾಣಬಹುದಿತ್ತು. ಆದರೆ ಅದು ಈಗ ಸಾಧ್ಯವಿಲ್ಲ. ನೀರಿನ ಶೇಖರಣೆಗಾಗಿ ಕಟ್ಟಿದ್ದ ಎತ್ತರವಾದ ʼಪಾತರಗಿತ್ತಿ ಮಹಲ್ʼ ಕೂಡ ಕುಸಿಯುತ್ತಿದೆ.

ಬೇಸಿಗೆ ಅರಮನೆಯಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರು ಸೇರಿ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಬರುವ ಪ್ರವಾಸಿಗರಿಗೆ ಮಾಹಿತಿ ನೀಡುವ ಮಾರ್ಗದರ್ಶಕರೂ ಇಲ್ಲ. ಕೇವಲ ಸೆಕ್ಯೂರಿಟಿ ಗಾರ್ಡ್ ಇರುತ್ತಾರೆ. ಬರುವ ಕೆಲವು ಪ್ರವಾಸಿಗರು ಹಾಗೇ ಸುತ್ತಾಡಿ ಹೋಗುತ್ತಾರೆ. ಮೂಲಸೌಕರ್ಯ ಒದಗಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ ಎಂದು ಪ್ರವಾಸಿಗರಾದ ಕವಿತಾ ದ್ಯಾಬೇರಿ ತಿಳಿಸಿದ್ದಾರೆ.

ಇದನ್ನೂ ಓದಿ: Travel Guide | ಹೆಚ್ಚಿನ ಜನರಿಗೆ ತಿಳಿಯದ ಭಾರತದ 10 ಪ್ರವಾಸಿ ತಾಣಗಳು

Exit mobile version