Site icon Vistara News

Vijayapura Tourist Places : ನೋಡಬನ್ನಿ ವಿಜಯಪುರದಲ್ಲಿರುವ ಈ ಪ್ರಸಿದ್ಧ ತಾಣಗಳ…

vijayapura tourist places

ಎಲ್ಲೆಲ್ಲೂ ಪ್ರವಾಸದ ಸುಗ್ಗಿ ನಡೆಯುತ್ತಿದೆ. ನಿಸರ್ಗ ತಾಣಗಳಿಂದ ಹಿಡಿದು, ಧಾರ್ಮಿಕ ಸ್ಥಳಗಳವರೆಗೆ ಎಲ್ಲೆಡೆಯೂ ಪ್ರವಾಸಿಗರೋ ಪ್ರವಾಸಿಗರು. ನೀವು ಈ ಬಾರಿ ದಕ್ಷಿಣ ಕರ್ನಾಟಕದ ಬದಲಾಗಿ ಉತ್ತರ ಕರ್ನಾಟಕದತ್ತ ಪ್ರಯಾಣ ಮಾಡಬೇಕು ಎಂದು ಯೋಚಿಸುತ್ತಿರಬಹುದು. ಅದಕ್ಕೆಂದೇ ಉತ್ತರ ಕರ್ನಾಟಕದ ಜಿಲ್ಲೆಯಾದ ವಿಜಯಪುರದಲ್ಲಿರುವ ಪ್ರಸಿದ್ಧ ತಾಣಗಳ (Vijayapura Tourist Places) ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿಯನ್ನು ಕೊಡುತ್ತಿದ್ದೇವೆ.

ಗೋಲ್‌ ಗುಂಬಜ್‌


ಇದು ಬಿಜಾಪುರದ ಅತ್ಯಂತ ಪ್ರಮುಖ ಆಕರ್ಷಣೆಯಾಗಿದೆ. 210 ಅಡಿ ಎತ್ತರದ ಮೊಹಮ್ಮದ್‌ ಆದಿಲ್‌ ಷಾ ಸಮಾಧಿಯನ್ನು ಇಲ್ಲಿ ಕಾಣಬಹುದು. ಇದು ವಿಶ್ವದ ಎರಡನೇ ಅತಿದೊಡ್ಡ ಗುಮ್ಮಟವಾಗಿದೆ. ಇಲ್ಲಿನ ಗುಮ್ಮಟದೊಳಗೆ ಏನನ್ನೇ ಪಿಸುಗುಟ್ಟಿದರೂ ಅದು ಹತ್ತು ಬಾರಿ ಪ್ರತಿಧ್ವನಿಸುತ್ತದೆ.

ಇಬ್ರಾಹಿಂ ರೋಜಾ


ಇಬ್ರಾಹಿಂ ರೋಜಾ ತಾಜ್‌ ಮಹಲ್‌ಗೆ ಸ್ಫೂರ್ತಿ ಎಂದು ಹೇಳಲಾಗುತ್ತದೆ. ಅತ್ಯಂತ ಸುಂದರವಾದ ಎರಡು ಕಟ್ಟಡಗಳನ್ನು ನೀವಿಲ್ಲಿ ಕಾಣಬಹುದು. ಇದು ಭಾರತದ ಅತ್ಯಂತ ಸುಂದರವಾದ ಇಸ್ಲಾಮಿಕ್‌ ಸ್ಮಾರಕಗಳಲ್ಲಿ ಒಂದಾಗಿದೆ. ಈ ಸಮಾಧಿ ಕಟ್ಟಡದ ಸುತ್ತ ಇರುವ ಉದ್ಯಾನ ಸಮಾಧಿಯನ್ನು ಇನ್ನಷ್ಟು ಚಂದವಾಗಿ ಕಾಣುವಂತೆ ಮಾಡುತ್ತದೆ.

ಬಾರಾ ಕಮಾನ್


ಅಲಿ ಆದಿಲ್ ಷಾ II ಅವರ ಸಮಾಧಿಯಿದು. ಇದರ ಕೆಲಸ ಅಪೂರ್ಣವಾಗಿದೆ. ಇಲ್ಲಿ 12 ಆಕರ್ಷಕ ಕಮಾನುಗಳಿವೆ. ಇದನ್ನು ಅಲಿ ಆದಿಲ್‌ ಷಾ II ಅವರ ತಂದೆಯ ಸಮಾಧಿಯಾದ ಗೋಲ್‌ ಗುಂಬಜ್‌ಗೆ ಪ್ರತಿಸ್ಪರ್ಧೆಯಾಗಿಸಲು ಉದ್ದೇಶಿಸಲಾಗಿತ್ತು. ಆದರೆ ಅದರ ಕಾರ್ಯ ಪೂರ್ಣಗೊಳ್ಳಲೇ ಇಲ್ಲ.

ಗಗನ್ ಮಹಲ್


ಗಗನ್‌ ಮಹಲ್‌ ಅನ್ನು ಅಲಿ ಆದಿಲ್ ಶಾ I ಅವರು 1561ರ ಸಮಯದಲ್ಲಿ ನಿರ್ಮಿಸಿದ. ಇದನ್ನು ರಾಜಮನೆತನದ ನಿವಾಸ ಮತ್ತು ದರ್ಬಾರ್‌ ಹಾಲ್‌ ಆಗಿ ಕಾಣಲೆಂದು ನಿರ್ಮಿಸಲಾಗಿತ್ತು. ಇದು ಇಂಡೋ ಇಸ್ಲಾಮಿಕ್‌ ವಾಸ್ತುಶಿಲ್ಪದಲ್ಲಿದೆ.

ಮಲಿಕ್-ಎ-ಮೈದಾನ್


55 ಟನ್‌ ತೂಕದ ಫಿರಂಗಿ ಇಲ್ಲಿದೆ. ಇದು ಭಾರತದಲ್ಲಿನ ಅತಿದೊಡ್ಡ ಮಧ್ಯಕಾಲೀನ ಫಿರಂಗಿಗಳಲ್ಲಿ ಒಂದು. ಫಿರಂಗಿಯ ತಲೆಯ ಭಾಗದಲ್ಲಿ ಆನೆಯನ್ನು ತಿನ್ನುವ ಸಿಂಹದ ಆಕಾರವಿದೆ. ಮೇಲ್ಮೈಯನ್ನು ಅರೇಬಿಕ್‌ ಮತ್ತು ಪರ್ಷಿಯನ್‌ ಭಾಷೆಗಳ ಶಾಸನಗಳಿಂದ ಅಲಂಕರಿಸಲಾಗಿದೆ.

ಮೆಹ್ತರ್ ಮಹಲ್


ಇದು ಮಸೀದಿ ಮತ್ತು ಉದ್ಯಾನಕ್ಕೆ ಇರುವ ದೊಡ್ಡ ಗೇಟು. ಇದನ್ನು ಇಬ್ರಾಹಿಂ ಆದಿಲ್‌ ಶಾ ನಿರ್ಮಿಸಿದ. ಅತ್ಯಂತ ಸುಂದರ ವಾಸ್ತುಶಿಲ್ಪವಿರುವ ಈ ಗೇಟು ಮೆಹ್ತರ್‌ ಮಹಲ್‌ ಹೆಸರಿನೊಂದಿಗೆ ದೊಡ್ಡ ಸ್ಮಾರಕವಾಗಿ ಗುರುತಿಸಿಕೊಳ್ಳುತ್ತಿದೆ.

ಉಪ್ಲಿ ಬುರುಜ್


ಇದು 16ನೇ ಶತಮಾನದ 80 ಅಡಿ ಎತ್ತರದ ಕಾವಲು ಗೋಪರವಾಗಿದೆ. ಈ ಗೋಪುರದ ಮೇಲೆ ಹತ್ತಿ ಬಿಜಾಪುರ ನಗರದ ಸೌಂದರ್ಯವನ್ನು ಕಾಣಬಹುದಾಗಿದೆ.

ತಾಜ್ ಬಾವಡಿ


ಇಬ್ರಾಹಿಂ ಆದಿಲ್‌ ಷಾ II ಅವರ ಪತ್ನಿ ತಾಜ್‌ ಸುಲ್ತಾನರ ನೆನಪಿನಲ್ಲಿ ಈ ನೀರಿನ ಟ್ಯಾಂಕ್‌ ನಿರ್ಮಿಸಲಾಯಿತು. ಇದು 223 ಅಡಿ ಅಗಲವಿರುವ ಹಾಗೂ 52 ಅಡಿ ಆಳವಿರುವ ದೊಡ್ಡ ಬಾವಿ. ಈ ಬಾವಿಯೊಳಗೆ ಇಳಿಯುವುದಕ್ಕೆ ಮೆಟ್ಟಿಲುಗಳಿವೆ.

ಆಲಮಟ್ಟಿ ಅಣೆಕಟ್ಟು


ಆಲಮಟ್ಟಿ ಅಣೆಕಟ್ಟು ಕೃಷ್ಣಾ ನದಿಯ ಜಲವಿದ್ಯುತ್ ಯೋಜನೆಯಾಗಿದೆ. ಇದು ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಅಂಚಿನಲ್ಲಿದೆ. ಆಲಮಟ್ಟಿ ಅಣೆಕಟ್ಟಿನಲ್ಲಿ ರಾಕ್ ಗಾರ್ಡನ್, ಮೊಘಲ್ ಗಾರ್ಡನ್, ಜಪಾನೀಸ್ ಗಾರ್ಡನ್ ರಚಿಸಲಾಗಿದ್ದು, ಬೋಟಿಂಗ್ ಸೌಲಭ್ಯ ಮತ್ತು ಸಂಗೀತ ಕಾರಂಜಿಯನ್ನೂ ಮಾಡಲಾಗಿದೆ.

ವಿಜಯಪುರ ಪುರಾತತ್ವ ವಸ್ತುಸಂಗ್ರಹಾಲಯ


ಗೋಲ್ ಗುಂಬಜ್ ಎದುರು ನಗರ್ ಖಾನಾದಲ್ಲಿ ವಿಜಯಪುರ ಪುರಾತತ್ವ ವಸ್ತುಸಂಗ್ರಹಾಲಯವಿದೆ. ಇಲ್ಲಿ ಹತ್ತಿರದ ಪ್ರದೇಶಗಳಲ್ಲಿ ಸಿಕ್ಕಿದ ಎಲ್ಲ ರೀತಿಯ ಪ್ರಾಚೀನ ವಸ್ತುಗಳನ್ನು ಸಂರಕ್ಷಿಸಿಡಲಾಗಿದೆ.

ಜಾಮಿಯಾ ಮಸೀದಿ


ಆದಿಲ್‌ ಶಾಹಿ ಅವರು ನಿರ್ಮಿಸಿದ ಇಂಡೋ ಇಸ್ಲಾಮಿಕ್‌ ವಾಸ್ತುಶಿಲ್ಪವಿರುವ ಸ್ಮಾರಕಗಳಲ್ಲಿ ಪ್ರಮುಖವಾದದ್ದು ಬಿಜಾಪುರದ ಜಾಮಿಯಾ ಮಸೀದಿ. ಇದರಲ್ಲಿ ಆಕರ್ಷಕವಾದ ಕಮಾನುಗಳು, ಸುಂದರವಾದ ಹಜಾರಗಳು, ಸುಂದರವಾದ ಸಭಾಂಗಣಗಳು ಮತ್ತು ದೊಡ್ದದೊಂದು ಗುಮ್ಮಟವಿದೆ. ಇದರ ಕಾಮಗಾರಿ ಪೂರ್ಣಗೊಂಡಿಲ್ಲ.

ಶಿವಗಿರಿ ದೇವಾಲಯ


ಈ ದೇವಾಲಯದಲ್ಲಿ 85 ಅಡಿ ಎತ್ತರದ ಶಿವನ ಪ್ರತಿಮೆಯಿದೆ. ಈ ಪ್ರತಿಮೆ ಸುಮಾರು 1500 ಟನ್‌ ತೂಕವಿದೆ. ಇದನ್ನು ದೇಶದ ಎರಡನೇ ಅತಿದೊಡ್ಡ ಶಿವನ ಪ್ರತಿಮೆ ಎಂದು ಪರಿಗಣಿಸಲಾಗಿದೆ. ದೊಡ್ಡ ಪ್ರತಿಮೆಯ ಕೆಳಗೆ ಶಿವಲಿಂಗದ ಸಣ್ಣ ವಿಗ್ರಹವಿದೆ.

ತೊರವಿ

ವಿಜಯಪುರದಿಂದ 10 ಕಿ.ಮೀ ದೂರದಲ್ಲಿರುವ ತೊರವಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನವಿದೆ. ಇದು ಹೆಸರಾಂತ ಧಾರ್ಮಿಕ ಸ್ಥಳವಾಗಿದೆ.

ಸಹಸ್ರಫಣಿ ಪಾರ್ಶ್ವನಾಥ ಬಸದಿ


ವಿಜಯಪುರದ ಹೊರವಲಯದಲ್ಲಿರುವ ಈ ಜೈನ ದೇವಾಲಯವು ಪಾರ್ಶ್ವನಾಥನ ವಿಶಿಷ್ಟ ವಿಗ್ರಹವನ್ನು ಹೊಂದಿದೆ. ಸುಂದರವಾಗಿ ಕೆತ್ತಲಾದ ಕಪ್ಪು ಕಲ್ಲಿನ ವಿಗ್ರಹವು ಸುಮಾರು 1500 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಇಲ್ಲಿ ವಿಗ್ರಹಕ್ಕೆ 1008 ಹಾವಿನ ತಲೆಯ ರಕ್ಷಣೆಯಿದೆ. ಇಲ್ಲಿ ಪ್ರತಿ ಅಮವಾಸ್ಯೆ ಮತ್ತು ಹುಣ್ಣಿಮೆಗೆ ವಿಶೇಷ ಪೂಜೆ ನಡೆಸಲಾಗುತ್ತದೆ.

ಬಸವನ ಬಾಗೇವಾಡಿ


ವಿಜಯಪುರದಿಂದ 42ಕಿ.ಮೀ. ದೂರದಲ್ಲಿ ಬಸವನ ಬಾಗೇವಾಡಿ ಇದೆ. ಬಾಗೇವಾಡಿಯು 12 ನೇ ಶತಮಾನದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕ ಮತ್ತು ಕಲ್ಯಾಣಿ ಚಾಲುಕ್ಯ ಸಾಮ್ರಾಜ್ಯದ ಪ್ರಧಾನ ಮಂತ್ರಿಯಾಗಿದ್ದ ಬಸವೇಶ್ವರರ ಜನ್ಮಸ್ಥಳವಾಗಿದೆ. ಇಲ್ಲಿ ಬಸವೇಶ್ವರ (ನಂದಿ) ಸಂಗಮೇಶ್ವರ, ಮಲ್ಲಿಕಾರ್ಜುನ ಮತ್ತು ಗಣಪತಿಯ ದೇವಾಲಯಗಳನ್ನು ಕಾಣಬಹುದಾಗಿದೆ.

ಇನ್ನಷ್ಟು ದೇಗುಲಗಳು

ಈ ಮೇಲಿನವಷ್ಟೇ ಅಲ್ಲದೆ ಯಳಗೂರಿನಲ್ಲಿ ಹನುಮಂತನ ದೇವಸ್ಥಾನ, ಸಿಂದಗಿಯಲ್ಲಿ ಶರಣಬಸವೇಶ್ವರ ದೇವಸ್ಥಾನ, ಸಂಗಮೇಶ್ವರ ದೇವಸ್ಥಾನ ಮತ್ತು ಬನಶಂಕರಿ, ನರಸಿಂಹ ಮತ್ತು ಬೌರಮ್ಮನ ದೇಗುಲಗಳು, ಸಾಲೋಟಗಿಯಲ್ಲಿ ಶಿವಯೋಗ ಈಶ್ವರ ದೇಗುಲ, ಯೆಲ್ಲಮ್ಮ ದೇವಸ್ಥಾನ, ಹನುಮಂತ ದೇವಸ್ಥಾನ, ಮುದ್ದೇಬಿಹಾಳದಲ್ಲಿ ಶಿವ, ಹನುಮ, ದತ್ತಾತ್ರೇಯ, ಪಾಂಡುರಂಗ, ದುರ್ಗಾದೇವಿ, ಮಲ್ಲಯ್ಯ, ಮರುಳಸಿಧೇಶ್ವರ, ಬನಶಂಕರಿ ದೇಗುಲಗಳು ಇವೆ. ಅದಲ್ಲದೆ ಬಾಗೇವಾಡಿಯ ಈಶಾನ್ಯಕ್ಕೆ 9ಕಿ.ಮೀ. ದೂರದಲ್ಲಿರುವ ಇಂಗಳೇಶ್ವರದಲ್ಲಿ ಎರಡು ಗುಹಾಂತರ ದೇವಾಲಯ ಸೇರಿದಂತೆ ಒಟ್ಟು ಎಂಟು ದೇವಾಲಯಗಳಿವೆ. ಮತ್ತು ಅಕ್ಕ ನಾಗಮ್ಮ ದೇವಾಲಯಗಳು ಬೆಟ್ಟದ ಮೇಲಿರುವ ಗುಹಾ ದೇವಾಲಯಗಳಾಗಿವೆ. ಇಂಡಿಯಲ್ಲಿ ಆದಿನಾಥ ದಿಗಂಬರ ಬಸದಿ, ಶಾಂತೇಶ್ವರ ದೇವಸ್ಥಾನ, ಹಿಪ್ಪರಗಿಯಲ್ಲಿ ರಾಷ್ಟ್ರಕೂಟರ ಕಾಲದ ಕಲ್ಮೇಶ್ವರ ದೇವಸ್ಥಾನ, ವೀರಭದ್ರ ದೇವಸ್ಥಾನ, ಮೈಲಾರ ದೇವಸ್ಥಾನಗಳು, ಅಗರಖೇಡದಲ್ಲಿ ಶಂಕರಲಿಂಗ ಮತ್ತು ಭೈರವ ಸಿದ್ದೇಶ್ವರ ದೇವಸ್ಥಾನಗಳು, ಅಲ್ಮೇಲ್ ಊರಿನಲ್ಲಿ ರಾಮಲಿಂಗ ದೇವಸ್ಥಾನ, ಹನುಮಾನ್ ದೇವಸ್ಥಾನ ಮತ್ತು ಭವಾನಿ ದೇವಸ್ಥಾನಗಳಿವೆ.

ರಾಜ ಸಮಾಧಿಗಳು

ವಿಜಯಪುರದಲ್ಲಿ ಅಫ್ಜಲ್ ಖಾನ್ ಅವರ ಪತ್ನಿಯರ ಸಮಾಧಿಗಳು, ಅಫ್ಜಲ್ ಖಾನ್ ಅವರ ಸಮಾಧಿ, ಐನ್ ಉಲ್ ಮುಲ್ಕ್ ಅವರ ಸಮಾಧಿ ಮತ್ತು ಮಸೀದಿ, ಅಲಿ ಆದಿಲ್ ಶಾ 1 ಅವರ ಸಮಾಧಿ, ಅಲಿ ಆದಿಲ್ ಶಾ 2 ಅವರ ಸಮಾಧಿ ಮತ್ತು ಅಲಿ ಶಾಹಿ ಪಿರ್ ಅವರ ಸಮಾಧಿಯಂತಹ ಹಲವಾರು ರಾಜ ವಿಶ್ರಾಂತಿ ಸ್ಥಳಗಳಿವೆ.

ಇನ್ನು ಕೆಲವು ಪ್ರಸಿದ್ಧ ತಾಣಗಳು

ತಾಳಿಕೋಟೆಯು ವಿಜಯನಗರ ಸೇನೆಯ ಧ್ವಂಸಕ್ಕೆ ಕಾರಣವಾದ ಪ್ರಮುಖ ಐತಿಹಾಸಿಕ ಯುದ್ಧದ ತಾಣ. ಇಲ್ಲಿ ಶಿವ ದೇವಾಲಯ ಸೇರಿದಂತೆ ಅನೇಕ ದೇವಾಲಯಗಳು ಮತ್ತು ಮಸೀದಿಗಳಿವೆ. ಹಾಗೆಯೇ ಹಲಸಂಗಿಯಲ್ಲಿ ಆದಿಲ್‌ ಶಾಹಿ ಕಾಲದ ಹಳೆಯ ಕೋಟೆಯ ಅವಶೇಷಗಳಿವೆ. ಇನ್ನುಳಿದಂತೆ ಜೋಡ್ ಗುಂಬಜ್, ಅಸರ್ ಮಹಲ್, ಆನಂದ್ ಮಹಲ್, ಚೋಟಾ ಅಸರ್, ಚಿನಿ ಮಹಲ್, ಜಲ ಮಂಜಿಲ್, ಜಾಮಿ ಮಸೀದಿ, ಚಾಂದ್ ಬಾವಡಿ, ಬುಖಾರಿ ಮಸೀದಿ, ಔರಂಗಜೇಬ್ ಈದ್ಗಾ, ಮೋತಿ ಗುಂಬಜ್, ಮುಸ್ತಫಾ ಖಾನ್ ಅವರ ಮಸೀದಿ, ಮಸೀದಿ ಮತ್ತು ಅರಮನೆ ಸಂದಲ್ ಮಸೀದಿ, ಮಲಿಕ್ ಜಹಾನ್ ಬೇಗಂ ಮಸೀದಿ, ರಾಮಮಂದಿರ, ರತುಲ್ಲಾಖಾನ್ ಮಸೀದಿ, ಪರಮೇಶ್ವರ ದೇವಸ್ಥಾನ, ನವ್ ಗುಂಬಜ್, ನರಸಿಂಹ ದೇವಸ್ಥಾನ, ಪಾನಿ ಮಹಲ್, ಸಾತ್ ಮಂಜಿಲ್, ಸಿದ್ಧೇಶ್ವರ ದೇವಸ್ಥಾನ, ದೇವರ ನಿಂಬರಗಿ, ಯಾಕುತ್ ದಾಬುಲಿಯ ಸಮಾಧಿ ಮತ್ತು ಮಸೀದಿ, ಆರ್ಕ್-ಕಿಲ್ಲಾ ಇತ್ಯಾದಿ ತಾಣಗಳು ಬಿಜಾಪುರ ಜಿಲ್ಲೆಯಾದ್ಯಂತ ನಿಮಗೆ ಕಾಣಸಿಗುತ್ತದೆ.

Exit mobile version